Advertisement

Parliament: ಹಾಲಿ ಸಂಸತ್‌ನಲ್ಲಿ ಕರ್ನಾಟಕದ ನೆನಪು

11:07 PM May 26, 2023 | Team Udayavani |

ಹಾಲಿ ಸಂಸತ್‌ ಭವನ ಮತ್ತು ಕರ್ನಾಟಕಕ್ಕೆ ಐತಿಹಾಸಿಕ ಬಾಂಧವ್ಯ ಇದೆ. ರಾಜ್ಯದ ಕೆಲವು ನಾಯಕರು ದೀರ್ಘಾವಧಿಗೆ ಲೋಕಸಭೆಯ ಸದಸ್ಯರಾಗಿದ್ದವರು. ಜತೆಗೆ ಲೋಕಸಭೆಯ ಸ್ಪೀಕರ್‌, ಡೆಪ್ಯುಟಿ ಸ್ಪೀಕರ್‌ ಆಗಿದ್ದ ಗಣ್ಯರೂ ಇದ್ದಾರೆ. ಅವರ ವಿವರಗಳು ಈ ಕೆಳಗಿನಂತೆ ಇವೆ.

Advertisement

ಎಚ್‌.ಡಿ.ದೇವೇಗೌಡ- ಪ್ರಧಾನ ಮಂತ್ರಿ

ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆ ದೇವೇಗೌಡರಿಗಿದೆ. ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೇವೇಗೌಡ ಅವರು, 1996 ಜೂನ್‌ನಿಂದ 1997ರ ಏಪ್ರಿಲ್‌ ವರೆಗೆ ಪ್ರಧಾನಿಯಾಗಿದ್ದರು. ಹಾಸನ ಲೋಕಸಭಾ ಕ್ಷೇತ್ರದಿಂದ 1991, 1998ರಲ್ಲಿ ಆಯ್ಕೆಯಾಗಿದ್ದರು. ಕನಕಪುರ ಲೋಕಸಭಾ ಕ್ಷೇತ್ರ ಇದ್ದಾಗ 2002ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಗೆದ್ದಿದ್ದರು. 2004ರಿಂದ 2014ರ ಚುನಾವಣೆ ವರೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ರಾಜೀನಾಮೆ ವೇಳೆ ದೇವೇಗೌಡರ ಮಾತು

ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ದೇವೇಗೌಡರು 1996 ಜೂ.1ರಿಂದ 1997 ಏ.21ರ ವರೆಗೆ ದೇಶದ ಹನ್ನೊಂದನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸಂಯುಕ್ತ ರಂಗ ಎಂಬ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾದ ಮೈತ್ರಿಕೂಟದ ಸರ್ಕಾರದ ನೇತೃತ್ವ ವಹಿಸಿಕೊಂಡಿದ್ದರು. ಆದರೆ ಅವರು 1997ರಲ್ಲಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾಡಿದ ಭಾಷಣ ಅದ್ಭುತವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. “ನಾನು ಫೀನಿಕ್ಸ್‌ ಪಕ್ಷಿಯಂತೆ ಬೂದಿಯಿಂದ ಎದ್ದು ಬರುತ್ತೇನೆ’ ಎಂದು ಉಲ್ಲೇಖೀಸಿದ್ದು ಐತಿಹಾಸಿಕವಾಗಿದೆ.

Advertisement

ಬಿ.ಡಿ.ಜತ್ತಿ – ಉಪರಾಷ್ಟ್ರಪತಿ

ಬಿ.ಡಿ.ಜತ್ತಿ ಅವರು ದೇಶದ 5ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದು ರಾಜ್ಯದ ಹೆಗ್ಗಳಿಕೆ. ಸಾಮಾನ್ಯವಾಗಿ ಉಪರಾಷ್ಟ್ರಪತಿಗಳಾದವರು ರಾಜ್ಯಸಭೆಯ ಸಭಾಪತಿಗಳಾಗಿಯೂ ಇರುತ್ತಾರೆ. 1974ರಿಂದ 1979ರ ವರೆಗೆ ಈ ಹುದ್ದೆಯಲ್ಲಿದ್ದರು.

ನ್ಯಾ.ಕೆ.ಎಸ್‌.ಹೆಗ್ಡೆ – 7ನೇ ಲೋಕಸಭೆ ಸ್ಪೀಕರ್‌

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1977ರಿಂದ 1980ರ ವರೆಗೆ ಸದಸ್ಯರಾಗಿದ್ದವರು. ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆದ್ದಿದ್ದರು. ಅವರು ಏಳನೇ ಲೋಕಸಭೆಯ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

ಕೆ.ರೆಹಮಾನ್‌ ಖಾನ್‌

ರಾಜ್ಯಸಭೆಯ ಉಪಸಭಾಪತಿಯಾಗಿ ದೀರ್ಘ‌ಕಾಲದ ವರೆಗೆ ಇದ್ದವರು. 2004ರ ಜುಲೈನಿಂದ 2012ರ ಏಪ್ರಿಲ್‌ ವರೆಗೆ ಇದೇ ಹುದ್ದೆಯಲ್ಲಿದ್ದರು.  ಅಷ್ಟೇ ಅಲ್ಲ, ಕಾಂಗ್ರೆಸ್‌ ಸರ್ಕಾರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಡೆಪ್ಯುಟಿ ಸ್ಪೀಕರ್‌

ತುಮಕೂರು ಕ್ಷೇತ್ರದ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಎಸ್‌.ಮಲ್ಲಿಕಾರ್ಜುನಯ್ಯ ಅವರು  ಹತ್ತನೇ ಲೋಕಸಭೆಯಲ್ಲಿ (1991-1996) ಅವರು ಡೆಪ್ಯುಟಿ ಸ್ಪೀಕರ್‌ ಆಗಿದ್ದರು. 1998 ಮತ್ತು 2004ರಲ್ಲಿಯೂ ಸಂಸತ್‌ ಪ್ರವೇಶಿಸಿದ್ದರು.

ಅನಂತ ಕುಮಾರ್‌ – ಬಿಜೆಪಿಯ ಹಿರಿಯ ನಾಯಕರಾಗಿದ್ದವರು ಮತ್ತು ಕೇಂದ್ರದ ಸಚಿವರಾಗಿಯೂ ಇದ್ದವರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 1996ರಿಂದ 2014ರ ವರೆಗೆ ಸತತವಾಗಿ ಆಯ್ಕೆಯಾಗಿದ್ದರು.

ಜಾರ್ಜ್‌ ಫ‌ರ್ನಾಂಡೀಸ್‌

ಮಂಗಳೂರು ಮೂಲದ ಜಾರ್ಜ್‌ ಫ‌ರ್ನಾಂಡೀಸ್‌ ಅವರು 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮೊದಲಿಗೆ ಅಂದರೆ 1967ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು, 1977ರ ಬಳಿಕ ಬಿಹಾರಕ್ಕೆ ತೆರಳಿ ಅಲ್ಲಿ ನೆಲೆ ಕಂಡುಕೊಂಡರು. ಎನ್‌ಡಿಎ ಆಡಳಿತಾವಧಿಯಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ.

ಬಿ.ಶಂಕರಾನಂದ

ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಅವರು ಚಿಕ್ಕೋಡಿ ಕ್ಷೇತ್ರದಿಂದ ಸತತ 7 ಬಾರಿ ಆಯ್ಕೆಯಾಗಿದ್ದರು. ಅಂದರೆ 1967ರಿಂದ 1991ರ ಚುನಾವಣೆಗೆ ವರೆಗೆ ಲೋಕಸಭೆ ಸದಸ್ಯರಾಗಿದ್ದರು. ಅಷ್ಟೇ ಅಲ್ಲ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್‌ ಅವರ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ.

ಸಂಸದೀಯ ಖಾತೆ ನಿರ್ವಹಿಸಿದ ರಾಜ್ಯದ ಸಮರ್ಥರು

ಕರ್ನಾಟಕದಿಂದಲೂ ಕೂಡ ಕೇಂದ್ರ ಸಂಪುಟದಲ್ಲಿ ಪ್ರತಿಷ್ಠಿತ ಖಾತೆಯಾಗಿರುವ ಸಂಸದೀಯ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ ಕುಮಾರ್‌ ಅವರು 2016 ಜು.5ರಿಂದ 2018 ನ.12ರ ವರೆಗೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಹ್ಲಾದ್‌ ಜೋಶಿಯವರು 2019 ಮೇ 30ರಿಂದ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸತ್‌ ಅಧಿವೇಶನದ ಸಂದರ್ಭಗಳಲ್ಲಿ ಪ್ರತಿಪಕ್ಷಗಳ ಜತೆಗೆ ಮಾತುಕತೆ ನಡೆಸಿ, ಪ್ರಮುಖ ವಿಧೇಯಕಗಳ ಅಂಗೀಕಾರ ಮಾಡುವ ಸಂದರ್ಭದಲ್ಲಿ ಅವರ ಮನವೊಲಿಸಿ ಬೆಂಬಲ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಂಪರ್ಕ ಸಾಧಿಸುವ ಚಾಕಚಕ್ಯತೆ, ಜಾಣ್ಮೆ ಈ ಖಾತೆಯನ್ನು ಹೊಂದಿರುವವರಿಗೆ ಅಗತ್ಯವಾಗಿ ಬೇಕಾಗುತ್ತದೆ.

ಮಧ್ಯರಾತ್ರಿ ಸಂಸತ್‌ ಅಧಿವೇಶನ

ದೇಶದಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವ ನಿಟ್ಟಿನಲ್ಲಿ 2017ರ ಜೂ.30 ರಂದು ಮಧ್ಯರಾತ್ರಿ ಸಂಸತ್‌ನ ಜಂಟಿ ಅಧಿವೇಶನ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತ ಕುಮಾರ್‌ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರಿಗೆ ಖುದ್ದಾಗಿ ಪತ್ರ ಬರೆದು, ಜಿಎಸ್‌ಟಿ ವಿಧೇಯಕವನ್ನು ಅಂಗೀಕಾರ ಮಾಡುವ ನಿಟ್ಟಿನಲ್ಲಿ ಜಂಟಿ ಅಧಿವೇಶನ ಕರೆದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ದೇಶದ ಅರ್ಥ ವ್ಯವಸ್ಥೆಯ ಬದಲಾವಣೆಗಾಗಿ ಈ ಜಂಟಿ ಅಧಿವೇಶನ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿತ್ತು.

1992ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು ಪೂರ್ಣಗೊಂಡ ಸಂದರ್ಭದಲ್ಲಿ ಹಾಗೂ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಗೆ ಐದು ದಶಕಗಳು ಸಂದಿದ್ದ ಹಿನ್ನೆಲೆಯಲ್ಲಿ ಸಂಸತ್‌ನ ವಿಶೇಷ ಜಂಟಿ ಅಧಿವೇಶನ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next