“ಮಾನವ ಜನ್ಮ ದೊಡ್ಡದು’ ಎಂದರು ದಾಸರು. ನಾವು ಬೇರೆ ಬೇರೆ ಕಾಲ ಮಾನಗಳಲ್ಲಿ ಈ ಭೂಮಿಯ ಮೇಲೆ ಜನ್ಮ ತಾಳಿದೆವು. ಕೆಲವರು ಎಲ್ಲೋ ಹುಟ್ಟಿರುತ್ತಾರೆ, ಎಲ್ಲೋ ಬೆಳೆಯುತ್ತಾರೆ, ಉದ್ಯೋಗ ಸ್ಥಳ ಇನ್ನೆಲ್ಲೋ ಆಗಿರುತ್ತದೆ. ಬಾಳುವೆಯ ಇಷ್ಟು ವರ್ಷಗಳಲ್ಲಿ ನೂರಾರು – ಸಾವಿರಾರು ವ್ಯಕ್ತಿಗಳ ಜತೆಗೆ ವ್ಯವಹರಿಸಿರುತ್ತೇವೆ – ಇದು ಇನ್ನೂ ನಡೆಯಲಿಕ್ಕಿದೆ. ಬಾಳಬಂಡಿಯಲ್ಲಿ ಕೆಲವರನ್ನು ಕಳೆದುಕೊಂಡಿರುತ್ತೇವೆ, ಹೊಸಬರು ಜತೆ ಸೇರಿರುತ್ತಾರೆ. ನಾವು ಬಯಸಲಿ – ಬಿಡಲಿ; ಬದುಕು ಅದರಷ್ಟಕ್ಕೆ ಸಾಗುತ್ತಿರುತ್ತದೆ.
ಇವೆಲ್ಲವೂ ಪೂರ್ವನಿಯೋಜಿತವೇ ಅಲ್ಲ ನಮ್ಮ ನಿಯಂತ್ರಣದಲ್ಲಿದೆಯೇ? ನಾವು ಬೇಡ ಎಂದು ಯಾವುದನ್ನಾದರೂ ತಡೆಯಲು ಸಾಧ್ಯವಿದೆಯೇ? ಬಯಸಿದ್ದನ್ನು ಆಗು ಮಾಡಿಸಲು ನಮಗೆ ಶಕ್ಯವೇ? ಯುವಕನಿದ್ದಾಗಲೇ ರಮಣ ಮಹರ್ಷಿ ಗಳ ಆಶ್ರಮಕ್ಕೆ ಬಂದ ವಿದೇಶೀ ಶಿಷ್ಯರೊಬ್ಬರು ಅಲ್ಲಿ 1947ರ ಆಸುಪಾಸಿನಲ್ಲಿ ನಡೆದ ಘಟನೆ ಯೊಂದನ್ನು ವಿವರಿ ಸುತ್ತಾರೆ. ಆಶ್ರಮಕ್ಕೆ ನೂರಾರು ಬಗೆಯ ಭಕ್ತರು, ಶಿಷ್ಯರು, ಜ್ಞಾನಾರ್ಥಿಗಳು ಬರುತ್ತಿ ದ್ದರು. ಕೆಲವರು ಅಲ್ಲಿಗೆ ಬಂದರು ಸ್ವಲ್ಪ ದಿನ ಕಳೆದ ಬಳಿಕ ಪರಸ್ಪರ ಜಗಳ, ಚಾಡಿ, ಗಲಾಟೆ ಆರಂಭಿಸುತ್ತಿದ್ದರು. ರಮಣ ಮಹರ್ಷಿಗಳ ಬಳಿಗೆ ದೂರು ಒಯ್ಯುತ್ತಿದ್ದರು. ಅಂಥ ಎಲ್ಲರಿಗೂ ಗುರುಗಳು ಉತ್ತರ ಒಂದೇ: “ನೀವು ಇಲ್ಲಿಗೆ ಬಂದಿರುವ ಉದ್ದೇಶವನ್ನು ನೆನಪಿಟ್ಟುಕೊಳ್ಳಿ’.
ನಮ್ಮನ್ನು ನಾವು ತಿಳಿದುಕೊಂಡು ನಮ್ಮಷ್ಟಕ್ಕೆ ನಾವಿದ್ದರೆ, ಇತರರ ವ್ಯವಹಾರದಲ್ಲಿ ಮೂಗು ತೂರಿಸದೆ ಇದ್ದರೆ ಎಷ್ಟೋ ಸಮಸ್ಯೆಗಳು ತನ್ನಿಂದ ತಾನೇ ಮಾಯವಾಗುತ್ತವೆ. ಅಂದರೆ ಅವು ಹುಟ್ಟಿಕೊಳ್ಳುವುದೇ ಇಲ್ಲ. ಉದಾಹರಣೆಗೆ, “ಅವನು’ ಸರಿಯಿಲ್ಲ ಎಂಬ ಅಸಮಾಧಾನ ನಮ್ಮಲ್ಲಿ ಹುಟ್ಟಿಕೊಳ್ಳುವುದು “ಅವನ’ ಬಗ್ಗೆ ನಾವು ಆಸಕ್ತಿ ವಹಿಸಿದರೆ ಮಾತ್ರ. ನಮ್ಮ ಆಸಕ್ತಿ ನಮ್ಮ ಬಗ್ಗೆ ಆಗಿದ್ದರೆ “ಅವನ’ ಬಗ್ಗೆ ಸಿಟ್ಟು ಸೆಡವು, ಅಸಮಾಧಾನ ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ.
ಇದೇ ಸಮಯದಲ್ಲಿ ಸ್ಕಾಟ್ಲಂಡ್‌ನಿಂದ ಹೊಸಬರೊಬ್ಬರು ಆಶ್ರಮಕ್ಕೆ ಬಂದರು. ರಮಣರನ್ನು ಕಂಡ ಆರಂಭದಲ್ಲಿ ವಿಚಿತ್ರ ವಾಗಿ ವರ್ತಿಸಿ ನಿಮ್ಮನ್ನೇ ನಾನು ಹುಡುಕುತ್ತಿ ದ್ದುದು, ನೀವೇ ನನ್ನ ತಂದೆ ತಾಯಿ ಬಂಧು ಬಳಗ ಎಂದು ಹಾಡಿ ಹೊಗಳಿದರು. ತಿಂಗಳು ಕಳೆದ ಮೇಲೆ ಉಳಿದ ಶಿಷ್ಯರಂತೆ ಸಹಜ ವಾಗಿದ್ದರು. ಆ ಬಳಿಕ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ದೂರಲು ಆರಂಭಿ ಸಿದರು. ಮತ್ತೆರಡು ತಿಂಗಳು ರಮಣರಿಗೆ ಜ್ಞಾನೋದಯ ಆಗಿಲ್ಲ, ಅವರು ಗುರುಗಳೇ ಅಲ್ಲ ಎಂದೆಲ್ಲ ಹೇಳಿಕೊಂಡು ಬಂದರಂತೆ. ಆಮೇಲೆ ಒಂದು ದಿನ ಪೆಟ್ಟಿಗೆ ಕಟ್ಟಿಕೊಂಡು ಸ್ಕಾಟ್ಲಂಡ್‌ಗೆ ವಾಪಸ್ ಆದರಂತೆ.
ನಮ್ಮ ಪಯಣದ ಉದ್ದೇಶವೇನು ಎಂಬುದು ಗೊತ್ತಿಲ್ಲದಿದ್ದರೆ ಹೀಗಾಗುತ್ತದೆ. ನಾವು ಯಾಕಾಗಿ ಜನ್ಮ ತಾಳಿದ್ದೇವೆ ಎಂಬುದು ಬಹಳ ದೊಡ್ಡ ಅಧ್ಯಾತ್ಮದ ಪ್ರಶ್ನೆಯಾಗ ಬಹುದು. ಸರಳ ಪ್ರಶ್ನೆಗಳನ್ನು ಕೇಳಿಕೊಳ್ಳೋಣ: ಒಬ್ಬ ವಿದ್ಯಾರ್ಥಿಯಾಗಿ ನಾನು ಹೇಗಿರಬೇಕು, ಉದ್ಯೋಗಿ ಯಾಗಿ ಹೇಗಿರಬೇಕು, ಸಂಸಾರದಲ್ಲಿ ಹೇಗಿರಬೇಕು… ಹೀಗೆ. ಆಯಾ ಸ್ಥಾನಗಳಲ್ಲಿ ಹೇಗಿರಬೇಕೋ ಹಾಗಿದ್ದರೆ ಬದುಕು ಬಹಳ ಸುಂದರವಾಗಿ ಸಾಗುತ್ತದೆ.
ರಮಣರು ಹೇಳಿದ “ನೀವು ಇಲ್ಲಿಗೆ ಬಂದಿರುವ ಉದ್ದೇಶವನ್ನು ನೆನಪಿಟ್ಟುಕೊಳ್ಳಿ’ ಎಂಬ ಮಾತು ಬಹಳ ಉನ್ನತ ಅರ್ಥವನ್ನು ಹೊಂದಿದೆ. ಎಲ್ಲರೂ ಅವರವರ ಜವಾಬ್ದಾರಿ ಯನ್ನು ಅರಿತು ಸಮರ್ಥವಾಗಿ ನಿಭಾಯಿಸಿ ದರೆ ಗೊಂದಲಗಳು, ಸಂಕಷ್ಟಗಳು, ಕಿರಿಕಿರಿಗಳು ಹುಟ್ಟಿಕೊಳ್ಳುವುದಕ್ಕೆ ಆಸ್ಪದವೇ ಇರುವುದಿಲ್ಲ. ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ನಮ್ಮ ಬದುಕಿನ ಉದ್ದೇಶ ನಮ್ಮಲ್ಲಿ ಸ್ಪಷ್ಟವಾಗಿರಬೇಕು. ಆಗ ಬದುಕು ಅರ್ಥವತ್ತಾದುದೂ ಆಗುತ್ತದೆ.
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.