ಜಿ.ಕೆ.ವೆಂಕಟಶಿವಾರೆಡ್ಡಿ,
ಮಾಜಿ ಶಾಸಕರು ಶ್ರೀನಿವಾಸಪುರ
ಕೋಲಾರ: ನಾನು ಮೊ ದಲ ಬಾರಿಗೆ ಚುನಾವಣೆ ಎದುರಿಸಿದ್ದು 1983 ರಲ್ಲಿ. ಕಾಂಗ್ರೆಸ್‌ನಿಂದ ಕಣಕ್ಕಿಳಿದು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ವಿಶೇಷವೆಂದರೆ, ಅದು ಕಾಸೇ ಬೇಡವಾಗಿದ್ದ ಚುನಾವಣೆಯಾಗಿತ್ತು!
ಇದು ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಶ್ರೀನಿವಾಸಪುರ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಅವರ ಹಿಂದಿನ ದಿನಗಳ ನೆನಪು. ರಾಜಕೀಯ ಪ್ರವೇಶಿಸಿ 40 ವರ್ಷಗಳಾದವು ಎಂದು ನೆನಪಿಸಿಕೊಂಡಿರುವ ಅವರು, ಕಾಸಿಲ್ಲದ ಚುನಾವಣೆಯ ಬಗ್ಗೆ ವರ್ಣಿಸಿದ್ದಾರೆ. ಮತದಾರರು ಅಭ್ಯರ್ಥಿಯನ್ನು ನೇರ ಭೇಟಿಗಾಗಿ ಅಪೇಕ್ಷೆ ಮಾಡದ ದಿನಗಳವು. ಹೋಬಳಿ ಅಥವಾ ದೊಡ್ಡ ಗ್ರಾಮಗಳಲ್ಲಿ ಸಭೆ ಮಾಡಿ ಮುಖಂಡರೊಂದಿಗೆ ಮಾತನಾಡಿ ಪ್ರಚಾರ ಕಾರ್ಯ ಮುಗಿಸುತ್ತಿದ್ದೆವು. ಜನರೇ ಬಾಯಿ ಮಾತಿನ ಪ್ರಚಾರ ಮಾಡಿಕೊಳ್ಳುತ್ತಿದ್ದರು. ಪಕ್ಷದ ಕಾರ್ಯಕರ್ತರು ಹೆಚ್ಚಿನ ಓಡಾಟ ಮಾಡುತ್ತಿರಲಿಲ್ಲ. ಚುನಾವಣೆಯ ದಿನ ಕೇವಲ ಎಲೆ, ಅಡಿಕೆ, ಹೂ ಕೊಟ್ಟು ಮತದಾರರ ಕೈಗೆ ಚೀಟಿ ಕೊಡುತ್ತಿದ್ದೆವು. ಮತದಾರರು ನಗು ಮುಖದಿಂದ ಏನನ್ನು ಅಪೇಕ್ಷಿಸದೆ ನಮ್ಮ ಮೇಲೆ ನಂಬಿಕೆ ಇಟ್ಟು ಮತ ಚಲಾವಣೆ ಮಾಡುತ್ತಿದ್ದರು. ಮತಗಟ್ಟೆಗೆ ದೂರದ ಊರುಗಳಿಂದ ಬರುವವರು ವಾಹನ ವ್ಯವಸ್ಥೆ ಮಾಡಲು ಸೌಲಭ್ಯಗಳಿರಲಿಲ್ಲ. ಎತ್ತಿನ ಬಂಡಿಯಲ್ಲಿ ಗುಂಪಾಗಿ ಬಂದು ಮತ ಚಲಾ ಯಿಸಿ ಹೋಗುತ್ತಿದ್ದರು. ಮೊದಲ ಚುನಾವಣೆಯ ಎಲ್ಲ ಖರ್ಚು ಕೇವಲ ಒಂದೆರೆಡು ಲಕ್ಷಗಳು ಮಾತ್ರ. ಈಗ ಕೋಟಿಗಳು ಸಾಲುತ್ತಿಲ್ಲ.
1983ರಿಂದಲೂ ಎಲ್ಲ ಚುನಾವಣೆಗಳನ್ನು ಎದುರಿ ಸುತ್ತಲೇ ಇದ್ದೇನೆ. ನಾಲ್ಕು ಬಾರಿ ಶಾಸಕನಾಗಿದ್ದೇನೆ. ಚುನಾವಣೆಯಿಂದ ಚುನಾವಣೆಗೆ ಪ್ರಚಾರದ ವೈಖರಿ, ಮತದಾರರ ಮನಸ್ಥಿತಿ ಬದಲಾಗುತ್ತಲೇ ಇದೆ. ಹಣಕಾಸಿನ ಖರ್ಚು ಒಂದೊಂದು ಚುನಾವಣೆಗೂ ದುಪ್ಪಟ್ಟಾಗುತ್ತಲೇ ಇದೆ. ಮತ್ತೇ ಕಾಸಿಲ್ಲದ ಚುನಾವಣೆ ನಡೆಸುವ ಆ ದಿನಗಳು ಮರುಕಳಿಸಲಾರವು ಎನಿಸುತ್ತಿದೆ.
-ಕೆ.ಎಸ್.ಗಣೇಶ್