Advertisement

ಮೊದಲ ಚುನಾವಣೆ ನೆನಪು; ಸಜ್ಜನರು ರಾಜಕಾರಣ ಮಾಡುವ ಕಾಲ ಹೋಯಿತು..!

12:35 AM Jan 16, 2023 | Team Udayavani |

ಬಾಳಾಸಾಹೇಬ ವಡ್ಡರ, ಮಾಜಿ ಶಾಸಕರು ಚಿಕ್ಕೋಡಿ
ನಮ್ಮಂಥವರು ಚುನಾವಣೆ ಮಾಡೋ ಕಾಲ ಹೋಯ್ತು. ನಾವು ಆಗ ನಿಜವಾದ ಚುನಾವಣೆ ಮಾಡ್ತಿದ್ವಿ. ಈಗ ಚುನಾವಣೆ ಹೆಸರಲ್ಲಿ ಖರೀದಿ ಮತ್ತು ವ್ಯಾಪಾರ ನಡೆದಿದೆ. ರಾಜಕಾರಣ ಎಂಬುದು ನೂರಕ್ಕೆ ನೂರರಷ್ಟು ವ್ಯಾಪಾರವಾಗಿ ಬದಲಾಗಿದೆ. ನಮ್ಮ ಕಾಲದಲ್ಲಿ ಲಕ್ಷ ಲಕ್ಷ ಎಂದರೇ ಹೆದರಿಕೆಯಾಗ್ತಿತ್ತು. ಆದರೆ ಈಗಿನ ನಾಯಕರು ಕೋಟಿ ಕೋಟಿ ಎಂದರೂ ಅಂಜೋದಿಲ್ಲ…

Advertisement

ಇದು 1994ರ ಚುನಾವಣೆಯಲ್ಲಿ ಬೆಳ ಗಾವಿ ಜಿಲ್ಲೆಯ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಜಯಗಳಿಸಿ ಮೊಟ್ಟಮೊದಲ ಬಾರಿಗೆ ಶಾಸಕರಾಗಿದ್ದ ಬಾಳಾಸಾಹೇಬ ವಡ್ಡರ ಅವರ ಅನುಭವದ ಮಾತು.

ನಮ್ಮ ಚುನಾವಣೆಗೂ ಈಗಿನ ಚುನಾವಣೆಗೂ ಅಜಗಜಾಂತರ. ನಾನು 1994ರಲ್ಲಿ 1.93 ಲಕ್ಷ ರೂ.ಗಳಲ್ಲಿ ಇಡೀ ಚುನಾವಣೆ ಮಾಡಿದ್ದೇನೆ. ಪಕ್ಷದವರು ಚುನಾವಣ ವೆಚ್ಚಕ್ಕಾಗಿ 50 ಸಾವಿರ ರೂ. ನೀಡಿದ್ದರು. ನನ್ನ ಬಳಿ 50 ಸಾವಿರ ರೂ. ಇತ್ತು. ಕೆಲವು ಗೆಳೆಯರು ಸೇರಿಸಿ 40 ಸಾವಿರ ರೂ. ನೀಡಿದ್ದರು. ಇಷ್ಟೇ ಅಲ್ಲ ಅನೇಕ ಜನರು ಖುದ್ದಾಗಿ ಹಣಕಾಸಿನ ಸಹಾಯ ಮಾಡಿದ್ದರು. ಅದರಲ್ಲೇ ಚುನಾವಣ ಪ್ರಚಾರ, ಕಾರ್ಯಕರ್ತರ ಊಟ, ಚಹಾ ಇತ್ಯಾದಿ ನೋಡಿಕೊಂಡಿದ್ದೆ. ನಾವು ಚುನಾವಣೆ ಎದುರಿಸಿದಾಗ ಊಟದ ಪಾರ್ಟಿಗಳಿರಲಿಲ್ಲ. ಇದ್ದರೂ ಬಹಳ ಕಡಿಮೆ, ಬಾಡೂಟ ಬಹಳ ವಿರಳ.

ಬಹುತೇಕ ಕಡೆ ಚಹಾ ಮತ್ತು ಚುರುಮರಿಯಲ್ಲೇ ಕಾರ್ಯಕ್ರಮ ಮುಗಿಸಿದ್ದೇನೆ. ಈಗ ಮೀಸಲು ಕ್ಷೇತ್ರದಲ್ಲೇ ಚುನಾವಣೆ ಮಾಡಬೇಕಾದರೆ ಕನಿಷ್ಠ 25 ಕೋಟಿ ರೂ. ಬೇಕು. ಇನ್ನು ಸಾಮಾನ್ಯ ಕ್ಷೇತ್ರದಲ್ಲಿ ಇದು 30 ಕೋಟಿ ದಾಟುತ್ತದೆ. ಹೀಗಾಗಿ ಈಗಿನ ರಾಜಕಾರಣ, ಚುನಾವಣೆ ಹಾಗೂ ರಾಜಕಾರಣಿಗಳನ್ನು ನೆನಸಿಕೊಳ್ಳುವುದಿರಲಿ ಊಹಿಸಲೂ ಹೆದರಿಕೆಯಾಗುತ್ತದೆ. ಇದು ನಮ್ಮಂಥವರು ಮಾಡುವ ಚುನಾವಣೆ ಅಲ್ಲ.

ಸಜ್ಜನಿಕೆಯ ರಾಜಕಾರಣ ಉಳಿದಿಲ್ಲ. ಸಜ್ಜನ ರಾಜಕಾರಣಿಗಳಿದ್ದರೂ ಅವರಿಗೆ ಯಾವ ಬೆಲೆಯೂ ಇಲ್ಲ. ಜನ ಗುರುತಿಸುತ್ತಾರೆ. ಮರ್ಯಾದೆ ಕೊಡುತ್ತಾರೆ. ಅದು ಒಂದು ಕಡೆ. ಆದರೆ ಪಕ್ಷದವರೇ ಗೌರವದಿಂದ ನಡೆದುಕೊಳ್ಳುವದಿಲ್ಲ. ಇನ್ನು ಅವಕಾಶವಂತೂ ದೂರವೇ ಉಳಿಯಿತು. ನಮ್ಮ ಕಾಲದಲ್ಲಿ ಕಾರ್ಯಕರ್ತರ ದೊಡ್ಡ ಪಡೆಯೇ ಇತ್ತು. ವಿಶೇಷ ಎಂದರೆ ಪ್ರತಿಯೊಬ್ಬ ಕಾರ್ಯಕರ್ತರು ನಾನೇ ಚುನಾವಣೆಗೆ ನಿಂತಿದ್ದೇನೆ ಎನ್ನುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಪ್ರತಿಯೊಬ್ಬರಲ್ಲೂ ನಿಷ್ಠೆ ಇತ್ತು. ಅದೇ ರೀತಿ ಮತದಾರರೂ ಸಹ. ಆಗ ಅವರಲ್ಲಿ ಯಾವುದೇ ಅಪೇಕ್ಷೆ ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ದುಡ್ಡು ಕೊಟ್ಟವರ ಕಡೆ ನಿಷ್ಠೆ. ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಗಾಡಿ ಕೊಡಲೇಬೇಕು. ಪ್ರಾಮಾಣಿಕತೆಯ ಚುನಾವಣೆ ಮಾಯವಾಗಿದೆ.

Advertisement

-ಕೇಶವ ಆದಿ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next