Advertisement

ನೆನಪಿರಲಿ ಆಕೆಗೂ ಒಂದು ಮನಸ್ಸಿದೆ…

04:00 PM Jul 25, 2021 | Team Udayavani |

ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಹಬ್ಬದ ಸಂಭ್ರಮ. ಮನೆಗೆ ಲಕ್ಷ್ಮೀ ಬಂದಳು ಎಂಬ ಸಂತೋಷ. ಆ ಮಗುವಿನ ಬೆಳವಣಿಗೆಯ ಒಂದೊಂದು ಹಂತವನ್ನೂ ನೋಡುತ್ತಾ, ಅದರ ಚಟುವಟಿಕೆಯನ್ನು ಕಣ್ತುಂಬಿಕೊಳ್ಳುತ್ತಾರೆ ಮನೆಯವರು. ತುಂಟ ಮಗುವಿನ ಗೆಜ್ಜೆನಾದ, ತೊದಲು ನುಡಿಯಿಂದ ಮನೆಯಲ್ಲಿ ಪ್ರತಿದಿನವೂ ಸಂತಸ, ಸಂಭ್ರಮ.

Advertisement

ಕೆಲ ಹೆತ್ತವರು ಮಗಳು ಶಾಲೆಗೆ ಹೋಗಲಾರಂಭಿಸಿದಾಗಲೇ ಮದುವೆ ಮಾಡಿ ಕೊಟ್ಟರೇನೋ ಎಂಬಂತೆ ಅಳುತ್ತಾರೆ! ಮಗಳು ಪ್ರೌಢಾವಸ್ಥೆಗೆ ಬಂದ ಮೇಲಂತೂ ಮತ್ತಷ್ಟು ಜವಾಬ್ದಾರಿ, ಜತೆಗೆ ಸಂತೋಷ, ಕಾಳಜಿ. ಈ ಸಮಾಜ ಮಗಳನ್ನು ಯಾವ ರೀತಿ ನೋಡುತ್ತದೆಯೋ? ಏನು ತೊಂದರೆ ಮಾಡುತ್ತದೆಯೋ ಎಂಬ ಅಂಜಿಕೆ ಮನದೊಳಗೆ. ಆಗಲೇ ಮನಸ್ಸು ದೊಡ್ಡದೊಂದು ಅಗಲುವಿಕೆಗೆ ನಿಧಾನವಾಗಿ ಸಿದ್ಧವಾಗತೊಡಗುತ್ತದೆ.

ಈಗ ಹೆಣ್ಮಕ್ಕಳಿಗೂ ಸಮಾನ ಹಕ್ಕುಗಳಿವೆ. ಅವರೂ ಕಲಿತು, ದುಡಿದು ತಾವೇ ಅಪ್ಪ-ಅಮ್ಮನನ್ನು ಸಾಕುವ ನಿದರ್ಶನಗಳು ಸಾಕಷ್ಟಿವೆ. ತಂದೆ- ತಾಯಿಗೆ ಹೆಣ್ಮಕ್ಕಳೆಂದರೆ ವಿಶೇಷ ಪ್ರೀತಿ, ಬೇಕಾದ್ದನ್ನೆಲ್ಲ ತೆಗೆದುಕೊಡುತ್ತಾರೆ. ವಿಚಿತ್ರವೆಂದರೆ ಜೀವನವನ್ನೇ ನಿರ್ಧರಿಸುವ ಮದುವೆ ವಿಷಯದಲ್ಲಿ ಮಾತ್ರ ತಾವು ಹೇಳಿದ್ದೇ ಆಗಬೇಕೆಂದು ಬಯಸುತ್ತಾರೆ. ಏಕೆ ಹೀಗೆ?

ಹೆಣ್ಣು ಪ್ರೀತಿಸಿ ಮದುವೆಯಾಗಿ ಕಷ್ಟಪಟ್ಟರೆ ಸಮಾಜ ಅವಳನ್ನು ದೂಷಿಸಲು ತುದಿಗಾಲ ಮೇಲೆ ನಿಂತಿರುತ್ತದೆ. ಮನೆಯವರು ಮಾಡಿದ ಮದುವೆ ಫ‌ಲಕಾಣದೇ ಇದ್ದಾಗಲೂ ತಪ್ಪು ಆಕೆಯದ್ದೇ! ಸಮಾಜ ಅದು ಅವಳ “ಹಣೆಬರಹ’ ಎಂದುಬಿಡುತ್ತದೆ!

ಪ್ರತೀ ಹೆಣ್ಣು ತಿಂಗಳ 4 ದಿನ ನೋವು ತಿನ್ನುತ್ತಾಳೆ. ಮಗುವಿಗೆ ಜನ್ಮ ನೀಡುವ ಸಮಯವಂತೂ ಆಕೆಗೆ ಮರುಹುಟ್ಟಿದ್ದಂತೆ. ಆ ದೈಹಿಕ, ಮಾನಸಿಕ ನೋವನ್ನು ಹಂಚಿಕೊಳ್ಳಲು ಯಾರೂ ಬಾರರು. ಅದು ಆಕೆಯ ಕರ್ಮ ಎಂಬಂತೆ ಕಾಣುವ ಸಮಾಜಕ್ಕೆ ಏನನ್ನಬೇಕು. ಅಲ್ಲೂ ದುರಾದೃಷ್ಟವಶಾತ್‌ ಏನಾದರೂ ಸಂಭವಿಸಿದರೆ, ಸಮಾಜ ಮತ್ತೆ ದೂರುವುದು ಹೆಣ್ಣನ್ನೇ ಆಕೆಯ ನಿರ್ಲಕ್ಷ್ಯ ಎಂದೋ, ಅತಿಯಾದ ಆರೈಕೆ ಎಂದೋ ಅಂತೂ ಗುರಿ ಆಕೆಯೇ!

Advertisement

ಅವಳೂ ಮನುಷ್ಯಳು, ಅವಳಿಗೂ ಒಂದು ಮನಸ್ಸಿದೆ ಎಂಬುದನ್ನು ಒಪ್ಪಿಕೊಳ್ಳಿ, ಸ್ಪಂದಿಸಿ. ಅವಳ ಕನಿಷ್ಟ ಆಸೆ ಆಕಾಂಕ್ಷೆಯನ್ನು ಕೇಳಿ ಸಾಧ್ಯವಾದಷ್ಟು ನೆರವೇರಿಸಿ. ಕಣ್ಣೀರು ಹಾಕುವಂತೆ ಮಾಡಬೇಡಿ. ಆಕೆಗೆ ಗೌರವ ಕೊಡಲಾಗದಿದ್ದರೂ ದಯವಿಟ್ಟು ಕೀಳಾಗಿ ಕಾಣಬೇಡಿ. ಪ್ರೀತಿಯಿಂದ ನೋಡಿಕೊಂಡರೆ ಆಕೆಯೆಂದೂ ನಿಮ್ಮ ಕೈ ಬಿಡಳು, ಸದಾ ನಿಮ್ಮ ರಕ್ಷಣೆ ಮಾಡುತ್ತಾಳೆ. ಯಶಸ್ಸು ತಂದುಕೊಡುತ್ತಾಳೆ.

ನೆನಪಿರಲಿ, ಸ್ತ್ರೀ ಜನ್ಮವೇ ಶ್ರೇಷ್ಠ ಜನ್ಮ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ.

 

 ವೈಷ್ಣವಿ ಎಂ.

ವಿ.ವಿ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next