ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ನಂಬುವುದೇ ಕಷ್ಟ. ಬೆಳಗ್ಗೆ ತುಂಬಾ ಸದ್ದು ಮಾಡಿದ ವಿಡಿಯೋ ಅಥವಾ ಸುದ್ದಿ, ಸಂಜೆಯೊಳಗಾಗಲೇ ಆ ಸುದ್ದಿ ಸುಳ್ಳು ಎಂದು ವೈರಲ್ ಆಗುತ್ತದೆ. ಇದಕ್ಕೆ ಸಾಕ್ಷಿಯಂತಿದೆ ಈ ಸುದ್ದಿ. ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಷಯ ಹರಿದಾಡುತ್ತಿದೆ.
ಅದೇನೆಂದರೆ ಬಿಹಾರದ ಒಬ್ಬ ರೈತ ‘ಹಾಪ್ ಶೂಟ್’ ಎಂಬ ತರಕಾರಿಯನ್ನು ಬೆಳೆದಿದ್ದು, ಇದರ ಬೆಲೆ ಕೆಜಿಗೆ ಬರೋಬ್ಬರಿ ಒಂದು ಲಕ್ಷ ಎಂದು ಸುಪ್ರಿಯಾ ಸಾಹು ಐಎಎಸ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಆ ನಂತರ ಎಲ್ಲಾ ಕಡೆ ಈ ಸುದ್ದಿ ಭಾರೀ ಸದ್ದು ಮಾಡಿದ್ದು, ಇದೀಗ ಈ ಸುದ್ದಿನೇ ಸುಳ್ಳು ಎನ್ನಲಾಗುತ್ತಿದೆ.
ಈ ಹಾಪ್ ಶೂಟ್ ಬೆಳೆಯನ್ನು ಬೆನ್ನು ಹತ್ತಿ ಮಾಹಿತಿ ಕಲೆ ಹಾಕಬೇಕೆಂದು ಹಿಂದಿಯ ‘ದೈನಿಕ ಜಾಗರಣ್’ ಪತ್ರಿಕೆಯ ತಂಡ ಬಿಹಾರದ ಅಮರೇಶ್ ಸಿಂಗ್ ಜಮೀನಿಗೆ ಹೋಗಿದ್ದಾರೆ. ಆದ್ರೆ ಅಲ್ಲಿ ಈ ರೀತಿಯ ಯಾವ ಬೇಳೆಯನ್ನೂ ಬೆಳೆದಿಲ್ಲ. ನಂತರ ಅಮರೇಶ್ ಅವರನ್ನು ಸಂಪರ್ಕ ಮಾಡಿದಾಗ ನಳಂದ ಜಿಲ್ಲೆಯಲ್ಲಿ ಬೆಳೆಯಲಾಗಿದೆ ಎಂದಿದ್ದಾರೆ. ಅಲ್ಲಿಗೂ ಹುಡುಕಿಕೊಂಡು ಹೋದಾಗ, ಔರಂಗಬಾದ್ ನಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ ಎಂದು ಅಮರೇಶ್ ಹೇಳಿದ್ದಾರೆ.
ನಂತರ ಔರಂಗಬಾದ್ ಜಿಲ್ಲಾಧಿಕಾರಿಯನ್ನು ವಿಚಾರಿಸಿದಾದ ಹಾಪ್ ಶೂಟ್ ಹೆಸರಿನ ಯಾವುದೇ ಬೆಳೆಯನ್ನು ಈ ಜಿಲ್ಲೆಯಲ್ಲಿ ಬೆಳೆಯಲಾಗಿಲ್ಲ ಎಂದು ಉತ್ತರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನಲಾಗಿದೆ.
ಫೋಟೋದಲ್ಲಿ ತರಕಾರಿ ಜೊತೆ ಇರುವ ಅಮರೇಶ್ ಅವರು ಕೇವಲ ಕಪ್ಪು ಭತ್ತ ಮತ್ತು ಗೋಧಿಯನ್ನು ಬೇಳೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.