ಸಿಡ್ನಿ: ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಆಸ್ಟ್ರೇಲಿಯಾ ವ್ಯಕ್ತಿಯೊಬ್ಬರ ಮೃತದೇಹದ ಅವಶೇಷ ಎರಡು ಮೊಸಳೆಯೊಳಗೆ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Stray dogs: ಬೀದಿ ನಾಯಿ ದಾಳಿಗೆ ಬಲಿಯಾದ 12 ವರ್ಷದ ಬಾಲಕ
ಆಸ್ಟ್ರೇಲಿಯಾ ಮಾಧ್ಯಮಗಳ ವರದಿಯಂತೆ, ಮೃತ ವ್ಯಕ್ತಿಯನ್ನು ಕೇವಿನ್ ದಾರ್ಮೋಡೈ ಎಂದು ಗುರುತಿಸಲಾಗಿದೆ. ಈತ ಉತ್ತರ ಕ್ವೀನ್ಸ್ ಲ್ಯಾಂಡ್ ನಲ್ಲಿ ಶನಿವಾರ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ನೀರಿಗೆ ಬಿದ್ದು ನಾಪತ್ತೆಯಾಗಿದ್ದರು ಎಂದು ವರದಿ ತಿಳಿಸಿದೆ.
ನೀರಿಗೆ ಬಿದ್ದ ಕೇವಿನ್ ಅವರನ್ನು ಮೊಸಳೆಗಳು ಎಳೆದೊಯ್ಯುತ್ತಿದ್ದು, ಈ ಸಂದರ್ಭದಲ್ಲಿ ಇತರ ಮೀನುಗಾರರು ಕೂಗಿ ರಕ್ಷಿಸಲು ಮುಂದಾಗಿದ್ದರೂ ಸಹ ಕೇವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಲೇಕ್ ಫೀಲ್ಡ್ ರಾಷ್ಟ್ರೀಯ ಉದ್ಯಾನವನದೊಳಗಿನ ಕೊಳದಲ್ಲಿದ್ದ ಎರಡು ಮೊಸಳೆಗಳನ್ನು ರೇಂಜರ್ ಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಒಂದು ಮೊಸಳೆ 14 ಅಡಿ ಉದ್ದ ಹಾಗೂ ಇನ್ನೊಂದು ಮೊಸಳೆ 9 ಅಡಿ ಉದ್ದ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಮೊಸಳೆಯ ದೇಹದೊಳಗೆ ಕೇವಿನ್ ಶವದ ಅವಶೇಷಗಳು ಪತ್ತೆಯಾಗಿದೆ. ಇದೊಂದು ದುರಂತ ಘಟನೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹ್ಯಾಂಡರ್ಸನ್ ತಿಳಿಸಿದ್ದು, ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಜನರು ಜಾಗರೂಕತೆಯಿಂದ ಇರಬೇಕೆಂದು ಎಚ್ಚರಿಸಿದ್ದಾರೆ.