ಒಟ್ಟಾವ: ಕೆನಡಾದ ಬ್ರಿಟನ್ ಕೊಲಂಬಿಯಾ ಪ್ರಾಂತ್ಯದಲ್ಲಿ 1978ರಲ್ಲಿ ಮುಚ್ಚಲ್ಪಟ್ಟಿದ್ದ ಕ್ಯಾಮ್ಯೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ಎಂಬ ಮಕ್ಕಳ ವಸತಿ ಶಾಲೆಯೊಂದರಲ್ಲಿ 215 ಮಕ್ಕಳ ಪಳೆಯುಳಿಕೆಗಳು ಪತ್ತೆಯಾ ಗಿದ್ದು, ಎಲ್ಲರನ್ನೂ ದಿಗ್ಭ್ರಮೆಗೀಡು ಮಾಡಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಅವರು ಇದನ್ನು “ಹೃದಯ ವಿದ್ರಾವಕ’ ಸಂಶೋಧನೆ ಎಂದು ಬಣ್ಣಿಸಿದ್ದಾರೆ.
ನೆಲವನ್ನು ಭೇದಿಸಬಲ್ಲ ರೇಡಾರ್ ಕಿರಣಗಳ ತಂತ್ರಜ್ಞಾನದ ಸಹಾಯದಿಂದ ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎಂದು “ಟೆಸ್ ಶುವಾಪ್’ ಎಂಬ ಸಂಶೋಧಕರ ತಂಡ ತಿಳಿಸಿದೆ.
ಏನಿದರ ಮರ್ಮ?: ಅಸಲಿಗೆ, 2015ರಿಂದ ನಡೆಸಲಾಗಿರುವ ಸಂಶೋಧನೆ ಇದು. ಶತಮಾನಗಳ ಹಿಂದೆ ಕೆನಡಾದಲ್ಲಿ ಸ್ಥಳೀಯ ನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಕರೆತಂದು ವಸತಿ ಶಾಲೆಗಳಲ್ಲಿಟ್ಟು ಬೆಳೆಸುವಂಥ ನಿರ್ದಯ ಕಾನೂನು ಜಾರಿಯಲ್ಲಿತ್ತು.
1840ರಿಂದ 1990ರ ದಶಕದವರೆಗೆ ಕೆನಡಾದಾದ್ಯಂತ ಇದ್ದ ಇಂಥ ಶಾಲೆಗಳಲ್ಲಿ 1.5 ಲಕ್ಷ ಮಕ್ಕಳು ಓದುತ್ತಿದ್ದರು. ಅವರಲ್ಲಿ ಸುಮಾರು 4,100 ಮಕ್ಕಳು ದೈಹಿಕ ಹಿಂಸೆ, ಅಪೌಷ್ಟಿಕತೆ, ಅತ್ಯಾಚಾರದಂಥ ದೌರ್ಜನ್ಯಗಳಿಂದ ಸಾವನ್ನಪ್ಪಿದ್ದಾರೆಂದು ದಾಖಲೆಗಳು ಹೇಳುತ್ತವೆ. ಆದರೆ ಅವುಗಳಲ್ಲಿ ಕ್ಯಾಮ್ಯೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಸತ್ತ ಮಕ್ಕಳ ಅಂಕಿ-ಅಂಶ ಸೇರಿಸಿರಲಿಲ್ಲ. ಹಾಗಾಗಿ ಸಂಶೋಧನೆ ನಡೆಸಲಾಗಿತ್ತೆಂದು ಟೆಸ್ ಶುವಾಪ್ ತಂಡ ತಿಳಿಸಿದೆ.