ಬೆಂಗಳೂರು: ನಗರದಲ್ಲಿ ಸೋಂಕಿತರ ಆರೈಕೆ ಕೇಂದ್ರವಾಗಿ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ 308 ಹಾಸಿಗೆ ವ್ಯವಸ್ಥೆಯ ಸಿದ್ಧತೆ ಏಕಾಏಕಿ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜಿಗೆ ಸ್ಥಳಾಂತರ ಮಾಡಲಾಗಿದೆ. ಕೋವಿಡ್ 19 ಸೋಂಕಿನ ಲಕ್ಷಣಗಳಿಲ್ಲದ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಕಂಠೀರವ ಒಳಾಂಗಣದಲ್ಲಿ ಸಿದ್ಧತೆ ಪ್ರಾರಂಭಿಸಿತ್ತು.
ಆದರೆ, ರಾಜಕಾರಣಿಯೊಬ್ಬರ ಒತ್ತಡಕ್ಕೆ ಮಣಿದು ದಿಢೀರ್ ಆರೈಕೆ ಕೇಂದ್ರ ಬದಲಾಯಿಸಿರುವ ಆರೋಪ ಕೇಳಿ ಬಂದಿದೆ. ಸೋಂಕಿತರ ಸಂಖ್ಯೆ ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರಿಗೆ ಹಾಸಿಗೆ ಕೊರತೆ ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆ ಬಯಲು ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದೇ ನಿಟ್ಟಿನಲ್ಲಿ ಕಂಠೀವರ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ಬೆಳಗ್ಗೆ ಕೋವಿಡ್ 19 ಆರೈಕೆ ಕೇಂದ್ರಕ್ಕೆ ಬೇಕಾದ ಹಾಸಿಗೆ ಸೇರಿದಂತೆ ಮತ್ತಿತರ ವ್ಯವಸ್ಥೆಯನ್ನು ಬಿಬಿಎಂಪಿ ಪ್ರಾರಂಭಿಸಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಕಂಠೀರವ ಸ್ಟೇಡಿಯಂ ನಿಂದ ಕೋವಿಡ್ 19 ಆರೈಕೆ ಕೇಂದ್ರವನ್ನು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್‌ಗೆ ಸ್ಥಳಾಂತರ ಮಾಡಲಾಗಿದೆ. ಪಾಲಿಕೆಯ ಏಕಾಏಕಿ ನಿರ್ಣಯದ ಹಿಂದೆ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿದೆ ಎಂಬ ದೂರುಗಳು ಕೇಳಿಬಂದಿವೆ.
ವಿಧಾನ ಪರಿಷತ್ತು ಸದಸ್ಯ ಕೆ. ಗೋಂವಿಂದ ರಾಜ್ ಪ್ರತಿಕ್ರಿಯಿಸಿ, ಕಳೆದ ವಾರ ಆರೋಗ್ಯ ಇಲಾಖೆ ಆಯುಕ್ತರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ನಗರದ ವಿವಿಧ ಕ್ರೀಡಾಂ ಗಣಗಳನ್ನು ಮೊದಲ ಹಂತದಲ್ಲಿ ಆರೈಕೆ ಕೇಂದ್ರವನ್ನಾಗಿ ಬಳಸಿಕೊಳ್ಳಿ. ಇದಾದ ಮೇಲೆ ಅಗತ್ಯ ಬಿದ್ದಲ್ಲಿ ಕಂಠೀರವ ಕ್ರೀಡಾಂಗಣ ಬಳಸಿ ಕೊಳ್ಳುವಂತೆ ಮನವಿ ಮಾಡಿದ್ದೆ. ಆರೈಕೆ ಕೇಂದ್ರ ಬೇರೆ ಕಡೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ಕೋವಿಡ್ 19 ಆರೈಕೆ ಕೇಂದ್ರ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೆವು. ಶನಿವಾರ ಮಧ್ಯಾಹ್ನ ಆರೈಕೆ ಕೇಂದ್ರವನ್ನು ಕೋರಮಂಗಲಕ್ಕೆ ಸ್ಥಳಾಂತರ ಮಾಡುವಂತೆ ನಿರ್ದೇಶನ ಬಂದ ಹಿನ್ನೆಲೆಯಲ್ಲಿ ಆರೈಕೆ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ.
-ಪಲ್ಲವಿ , ಬಿಬಿಎಂಪಿ ಜಂಟಿ ಆಯುಕ್ತೆ, ಪೂರ್ವ ವಲಯ