Advertisement

ಚುಂಚನಗಿರಿಯ ದಿವ್ಯ ಚೇತನಕ್ಕೆ ನಮಿಸುತ್ತಾ..

12:54 AM Jan 10, 2021 | Team Udayavani |

ಪುರಾಣ ಪ್ರಸಿದ್ಧ ಪವಿತ್ರ ಶ್ರೀ ಆದಿಚುಂಚನಗಿರಿ ಸುಕ್ಷೇತ್ರವು ತಪಸ್ವಿಗಳಿಗೆ ಪುಣ್ಯ ತಪೋವನವಾಗಿ, ಭಕ್ತರುಗಳಿಗೆ ಭಕ್ತಿಯ ನೆಲೆವೀಡಾಗಿ, ಪ್ರಕೃತಿ ಪ್ರಿಯರಿಗೆ  ಸೌಂದರ್ಯ ಶಾಂತಿವನವಾಗಿ, ಧರ್ಮಜ್ಞರಿಗೆ ಧರ್ಮಧಾಮವಾಗಿ, ಪ್ರಾಚೀನ ಕಾಲದಿಂದಲೂ ಸಿದ್ದರು, ಸಂತರು, ಸಾಧುಗಳು, ಋಷಿಗಳು, ಯೋಗಿಗಳು ಮತ್ತು ತಪಸ್ವಿಗಳು ಜೀವನ ಪರಮ ಗುರಿಯನ್ನು ಸಾಧಿಸಿದ ತಪೋ ಭೂಮಿಯಾಗಿ ಕಂಗೊಳಿಸುತ್ತಿದೆ.

Advertisement

ಸುಮಾರು 2,000 ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀ ಕ್ಷೇತ್ರವು ಮಯೂರಗಳ ತಾಣವಾಗಿದ್ದು,  ಮಯೂರವನ  ಎಂದು ಕರೆಯುವರು. ಪುರಾಣದಲ್ಲಿ ಉಲ್ಲೇಖ ವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದದ್ದು ತ್ರೇತಾಯುಗದಲ್ಲಿ, ಪರಮೇ ಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್‌ ಪರಶಿವನೇ ಶ್ರೀ ಗಂಗಾಧರೇಶ್ವರನಾಗಿ ನೆಲೆ ನಿಂತಿದ್ದಾನೆ. ನಾಥ ಸಂಪ್ರದಾಯದ ದ್ವಾದಶ ಪೀಠಗಳಲ್ಲಿ ಆದಿ ಪೀಠವೇ ಶ್ರೀಆದಿಚುಂಚನಗಿರಿ ಪೀಠ. ಈ  ಮಠದ ಗುರುಪರಂಪರೆಯು ಸುದೀ  ರ್ಘ‌ವಾದುದು, ಇದುವರೆಗೂ 72 ಧರ್ಮ ಗುರುಗಳು ಮಠಾಧಿಪತಿಗಳಾಗಿದ್ದಾರೆ.  1928 ರಲ್ಲಿ ಪಾಂಡವಪುರ ಸಮೀಪದ ದಸರಗುಪ್ಪೆ ಗ್ರಾಮದ ಗುರುರಾಮಯ್ಯ ಅವರನ್ನು ಭಕ್ತ ನಾಥಸ್ವಾಮಿಗಳೆಂದು ನಾಮಕರಣ ಮಾಡಿ,  ಪೀಠಾಧಿಕಾರಿಗಳನ್ನಾಗಿ ಪಟ್ಟಾಭಿಷೇಕ ಮಾಡಿ ದರು. ಇದಕ್ಕೆ ಮೈಸೂರು ಮಹಾರಾಜರು ಅಂಗೀ ಕಾರವನ್ನಿತ್ತರು. ಅವರು 40 ವರ್ಷ ಪೀಠಾಧಿಪತಿಯಾಗಿದ್ದು  ಶಿವೈಕ್ಯರಾದರು. 1967ರಲ್ಲಿ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ನೇಮಕವಾದರು. ಇವರು ಮಠದಲ್ಲಿ  ಮಾಧ್ಯಮಿಕ ಶಾಲೆ  ಮತ್ತು ಉಚಿತ ವಿದ್ಯಾರ್ಥಿನಿಲಯಗಳನ್ನು ತೆರೆದರು. ಅನಂತರ ರಾಮಾನಂದನಾಥ ಸ್ವಾಮಿಗಳವರ ಗದ್ದುಗೆಗಳು ಸ್ಮಾರಕವಾಗಿದ್ದು, ಭಕ್ತರಿಂದ ಪೂಜಿಸಲ್ಪಡುತ್ತಿವೆ.

ಆದಿಚುಂಚನಗಿರಿ ಮಹಾಸಂಸ್ಥಾನ ಒಂದು ಬೆಟ್ಟವಾಗಿತ್ತು. 1974ರಲ್ಲಿ  ಪರಮಪೂಜ್ಯ ಶ್ರೀ  ಬಾಲಗಂಗಾಧರನಾಥ  ಮಹಾಸ್ವಾಮಿಗಳವರ ಪಾದಾರ್ಪಣೆಯಾಗುತ್ತಿರುವಂತೆ, ಶ್ರೀಕ್ಷೇತ್ರ ನವ ಚೈತನ್ಯ ಪಡೆಯಿತು. ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿ ಪೂಜ್ಯ ಶ್ರೀಗಳು ಇಡೀ ಕ್ಷೇತ್ರಕ್ಕೆ ಚೈತನ್ಯವನ್ನು  ತಂದರು.  ಮಹಾತ್ಮರು ಜನಿಸುವುದು ಭುವನದ ಭಾಗ್ಯ ಎಂಬ ಮಾತು ಚೈತನ್ಯ ಸ್ವರೂಪಿಯಾಗಿದ್ದಂತಹ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರಿಗೆ ಯಥಾವತ್ತಾಗಿ ಅನ್ವಯಿ ಸುತ್ತದೆ.   ಶಿಥಿಲ ಸ್ಥಿತಿಯಲ್ಲಿದ್ದ ಶ್ರೀಮಠವನ್ನು ಭೂಮಿಯಿಂದ ಬಾನೆತ್ತರಕ್ಕೆ ಬೆಳೆಸಿದ್ದರು. ಭೈರವನ ಭಕ್ತರಿಗೆ ಸೀಮಿತವಾಗಿದ್ದ  ಕ್ಷೇತ್ರವನ್ನು ಮಹಾನ್‌ ಕ್ಷೇತ್ರವಾಗಿಸಿ, ಧರ್ಮಪೀಠವನ್ನಾಗಿ ರೂಪಿಸಿದರು. ತ್ರಿವಿಧ ದಾಸೋಹಿಗಳು ಆದ ಶ್ರೀಗಳವರು, ಜನ ಸಾಮಾನ್ಯರ ಉದ್ಧಾರಕ್ಕಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಕಳು, ಪರಿಸರ ಕ್ಷೇತ್ರಗಳಲ್ಲಿ ಆಂದೋಲನವನ್ನೇ ಮಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಉದ್ಧಾರವಾಗ ಬೇಕಾದರೆ ಮೊದಲು ಆ ಭಾಗದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ದೃಷ್ಟಿಯಿಂದ ನಾಡಿನಾದ್ಯಂತ 475ಕ್ಕೂ ಹೆಚ್ಚು ಶಾಲಾ ಕಾಲೇಜು ಗಳನ್ನು ಪ್ರಾರಂಭಿಸಿ,  ವಿದ್ಯಾರ್ಥಿನಿಲಯಗಳನ್ನು ತೆರೆದು,  ಸಾಕ್ಷರತೆಯ ಕ್ರಾಂತಿಯನ್ನೇ ಮಾಡಿ, ಅಕ್ಷರ ವಂಚಿತ ಮಕ್ಕಳ ಬಾಳಲ್ಲಿ ಜ್ಞಾನದ ಬೆಳಕನ್ನು ಮೂಡಿಸಿದರು. ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತೀ ವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಯಿಂದ ಸಂಸ್ಕೃತ ವೇದಾಗಮ ಹಾಗೂ ತಾಂತ್ರಿಕ,  ವೈದ್ಯಕೀಯ ವಿಜ್ಞಾನದವರೆಗೆ ಯಾವುದೇ ಜಾತಿ,  ಮತ,  ಲಿಂಗಭೇದವಿಲ್ಲದೆ ವ್ಯಾಸಂಗ ಮಾಡುತ್ತಿರುವುದು ಅವರು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೊಂದಿದ್ದ ಕಳಕಳಿಗೆ ಸಾಕ್ಷಿಯಾಗಿದೆ. ಶ್ರೀಮಠವನ್ನು ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆ ಯನಾಗಿಸಿದ ಸ್ವಾಮಿಗಳವರು, ಗ್ರಾಮೀಣ ಯುವಕರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲೆಂದು ಅವರಿಗೆ ಕೃಷಿ, ತೋಟಗಾರಿಕೆ, ಎಲೆಕ್ಟ್ರಿಕಲ್‌ ವೈರಿಂಗ್‌ ಮುಂತಾದ ವೃತ್ತಿಪರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಪರಮಪೂಜ್ಯರು ಶ್ರೀಮಠದ ಮೂಲಕ ಕೇವಲ ಒಂದು ಸಮಾಜವನ್ನು ಅಷ್ಟೇ ಉದ್ಧರಿಸಿದವರಲ್ಲ ಯಾವ ಹಿಂದುಳಿದ ಸಮಾಜಕ್ಕೆ ಸಂಘಟಿತ ಶಕ್ತಿ ಇರಲಿಲ್ಲವೋ, ಆಧುನಿಕ ಜ್ಞಾನದ ಅರಿವೂ ಇರಲಿಲ್ಲವೋ,  ಯಾವ ಸಮಾಜ ಸಾಂಸ್ಕೃತಿಕವಾಗಿ ಪರಾವಲಂಬಿಯಾಗಿತ್ತೋ ಅಂತಹ ಸಮಾಜದ ಜನಮಾನಸಕ್ಕೆ  ಚೇತನ ಶಕ್ತಿಯಾದವರು. ಮಾನವನ ಕುಲದ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಜಡವಾಗಿದ್ದ ಸಮಾಜವನ್ನು ಜಾಗೃತಗೊಳಿಸಿದ್ದು  ಮಾತ್ರವಲ್ಲ, ಸಮಷ್ಟಿಯ ಉದ್ಧಾರ ಮಾಡಿದ ಮನುಕುಲೋ ದ್ಧಾರಕರೆನಿಸಿದ್ದರು.

Advertisement

ಪೀಠಾಧಿಪತಿಯಾಗಿ ಸಿದ್ಧ ಸಿಂಹಾಸನಾರೋಹಣ ಮಾಡಿದ ಅನಂತರ ಪ್ರತೀ ವರ್ಷ ತಮ್ಮ ವಾರ್ಷಿಕ ಪಟ್ಟಾಭಿಷೇಕದ ಶುಭ ಸಂದರ್ಭದಲ್ಲಿ ಜನಪದ ಕಲೆ,  ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಹಾಗೂ ಜನಪದ ಕಲಾವಿದರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕಳೆದ 40 ವರ್ಷಗಳಿಂದಲೂ ಶ್ರೀಕ್ಷೇತ್ರವೂ ಆದಿಚುಂಚನಗಿರಿ ರಾಜ್ಯಮಟ್ಟದ ಜಾನಪದ ಕಲಾಮೇಳಗಳನ್ನು ಆಯೋಜಿಸಿ, ತನ್ಮೂಲಕ ಜನಪದ ಹಾಗೂ ಜನಪದರ ಬದುಕನ್ನು ಸುವ್ಯವಸ್ಥಿತ ಗೊಳಿಸುವಲ್ಲಿ ಅಪೂರ್ವ ಕೊಡುಗೆ ನೀಡಿದೆ.  ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿರುವ ಸಮಾಜದ ಸೇವಾಪರರನ್ನು  ಗುರುತಿಸಿ ಗೌರವಿಸಲಾಗುತ್ತದೆ. 20 ವರ್ಷದಿಂದ ಪ್ರತೀ ವರ್ಷ ಇಂಥ 5 ಮಂದಿ ಗಣ್ಯರಿಗೆ ಚುಂಚಶ್ರೀ ಪ್ರಶಸ್ತಿಯನ್ನು ನೀಡಿ  ಗೌರವಿಸುತ್ತಿದ್ದರು ಸ್ವಾಮೀಜಿ.

ಅಪಾರ ಭಕ್ತವೃಂದವನ್ನು ಹೊಂದಿರುವ ಶ್ರೀಕ್ಷೇತ್ರ ಕನ್ನಡ ನಾಡಿನಲ್ಲಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಭಾರತದ ರಾಜ್ಯಗಳಲ್ಲಿಯೂ ಹಾಗೂ ವಿದೇಶಗಳಲ್ಲಿಯೂ ಅಪಾರ ಭಕ್ತವೃಂದವನ್ನು ಹೊಂದಿದೆ. ಪೂಜ್ಯ ಗುರೂಜಿಯವರು ಗ್ರಾಮೀಣ ಪ್ರದೇಶದಲ್ಲಿ ಬೃಹತ್ತಾದ, ಸುಸಜ್ಜಿತವಾದ ಆಸ್ಪತ್ರೆಗಳನ್ನು ತೆರೆದು ಬಡಜನರ ಆರೋಗ್ಯ ಸಂರಕ್ಷಣೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಂದರೆ ಮಂಡ್ಯ ಜಿಲ್ಲೆಯ ಬಿ. ಜಿ. ನಗರ,  ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರಲ್ಲಿ ಅತ್ಯಾಧುನಿಕ ಆಸ್ಪತ್ರೆ ತೆರೆದು ಜನರ ಆರೋಗ್ಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜತೆಗೆ ಭಾರತೀಯ ವೈದ್ಯ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಚಿಂತಿಸಿ ಬೆಂಗಳೂರಿನ ವಿಜಯನಗರದಲ್ಲಿ, ಜಯನಗರದಲ್ಲಿ 1996 ರಲ್ಲಿಯೇ ಹತ್ತು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ  ಶ್ರೀ ಕಾಲ ಭೈರವೇಶ್ವರಸ್ವಾಮಿ ಆಯುರ್ವೇದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯವನ್ನು ತೆರೆದು ಭಾರತೀಯ ವೈದ್ಯ ಪದ್ಧತಿಯಂತೆ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ್ದರು.  ಅಲ್ಲದೆ ಅಂಧ ಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದರು. ಪರಿಸರ ಮಾಲಿನ್ಯ ಗಿಡ-ಮರಗಳ ನಾಶವನ್ನು ಪರಿಹರಿ ಸಲು ಪರಮಪೂಜ್ಯರು ತಮ್ಮ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ವರ್ಗದ ಧರ್ಮಗುರುಗಳನ್ನು ಒಳಗೊಂಡ ಕರ್ನಾಟಕ ವನ ಸಂವರ್ಧನ ಟ್ರಸ್ಟನ್ನು  ಪ್ರಾರಂಭಿಸಿ, ರಾಜ್ಯಾದ್ಯಂತ 5 ಕೋಟಿ ಜನಸಂಖ್ಯೆಗೆ ಅನುಗುಣವಾಗಿ 5 ಕೋಟಿ ಸಸಿಗಳನ್ನು ನೆಡುವ ಪವಿತ್ರ ಕಾರ್ಯಕ್ರಮವನ್ನು ಪೂರೈಸಿದರು. ಜಾನು ವಾರುಗಳು ಕಸಾಯಿಖಾನೆಗೆ ಹೋಗುತ್ತಿರುವುದನ್ನು ತಪ್ಪಿಸಲು ಮಂಡ್ಯ, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ಇನ್ನಿತರ ಶಾಖಾಮಠಗಳ ವ್ಯಾಪ್ತಿಗಳಲ್ಲಿ  ಗೋಶಾಲೆಗಳನ್ನು ತೆರೆದರು.

ಸ್ವಾಮಿಗಳವರ ಜನ್ಮೋತ್ಸವ ಎಂದರೆ ಕೇವಲ ಹಾರ- ತುರಾಯಿಗಳ ಅಭಿನಂದನೆಗಳ ಸುರಿಮಳೆ ಮಾತ್ರ ಆಗಿರುವುದಿಲ್ಲ, ಅದೊಂದು ಸಾಂಸ್ಕೃತಿಕ ಸಮಾವೇಶ ಆಗಿರುತ್ತಿತ್ತು.  ಈ ಸಂದರ್ಭದಲ್ಲಿ ಒಂದು ವರ್ಷ ಸಾವಿರಾರು ಮಕ್ಕಳಿಗೆ, ಬಡಜನತೆಗೆ ಬಟ್ಟೆಯನ್ನು ವಿತರಿಸಿದರೆ, ಮತ್ತೂಂದು ವರ್ಷ ಸಾವಿರಾರು ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸುತ್ತಿದ್ದರು, ಅದೇ ರೀತಿ ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು,  ಕೃತಕ ಕಾಲುಗಳನ್ನು, ಗ್ರಾಮೀಣ ಪ್ರದೇಶದಲ್ಲಿ ಶಿಥಿಲಗೊಂಡಿರುವ ನೂರಾರು ದೇವಾಲಯಗಳ ಜೀರ್ಣೋದ್ಧಾರ, ದೇವಾಲ ಯಗಳಲ್ಲಿ ರಥಗಳನ್ನು ನಿರ್ಮಿಸಿ ಕೊಡುವುದು, ಯುವಕರಿಗೆ, ನಿರ್ಗತಿಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು, ಕಂಪ್ಯೂಟರ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದರು. ಸ್ವಾಮೀಜಿಯವರು ಭೌತಿಕವಾಗಿ ಇಲ್ಲದಿರಬಹುದು, ಆದರೆ ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದ ಯಶಸ್ಸಿನ ಹಿಂದೆ ಸ್ವಾಮಿಗಳವರ ಉಪಸ್ಥಿತಿಯನ್ನು ಇಂದಿಗೂ ಕಾಣಬಹುದು.

 

– ರಾ. ಹ. ತಿಮ್ಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next