ಕೋಟ: ಧರ್ಮಕ್ಷೇತ್ರಗಳು ಅಭಿವೃದ್ಧಿಯಾದಂತೆ ಧಾರ್ಮಿಕ ವಾತಾವರಣ ನೆಲೆಗೊಳ್ಳುತ್ತದೆ ಹಾಗೂ ಈ ಮೂಲಕವಾಗಿ ಧರ್ಮ ರಕ್ಷಣೆ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಬಾಳೆಕುದ್ರು ಹಂಗಾರ ಕಟ್ಟೆಯ ಶ್ರೀ ಮಠದ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ಜರಗಿದ 3ನೇ ದಿನದ ಸಭಾ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಪುರಾತನ ಮಠಗಳು ನಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಪ್ರತೀಕವಾಗಿದ್ದು, ಇವು ಅಭಿವೃದ್ಧಿಯಾದಂತೆ ಧರ್ಮ ಬೆಳೆಯುತ್ತದೆ. ಬಾಳೆಕುದ್ರು ಮಠ ಜೀರ್ಣೋದ್ಧಾರಗೊಂಡಿರುವುದು ಪ್ರಶಂಸನೀಯ ಎಂದರು.
ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿ ಬಾಳೇಕುದ್ರು ಭಾಗವತ ಪರಂಪರೆಗೆ ಸೇರಿದ ಅತ್ಯಂತ ಪ್ರಾಚೀನವಾದ ಮಠ ಇದಾಗಿದೆ ಎಂದರು.ಮಠದ ಪುನರ್ ನಿರ್ಮಾಣದಲ್ಲಿ ಸಹಕರಿಸಿದ ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಅವರನ್ನು ಸಮ್ಮಾನಿಸ ಲಾಯಿತು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರದಾನ ಉಪನ್ಯಾಸ ನೀಡಿದರು.
ಶ್ರೀ ಬ್ರಹ್ಮಾನಂದ ಸ್ವಾಮಿ, ಸೀತಾರಾಮ್ ಕೆದ್ಲಾಯ, ವಿ.ಹಿಂ.ಪ. ಕುಂದಾಪುರ ಘಟಕದ ಮುಖ್ಯಸ್ಥ ಪ್ರೇಮಾನಂದ ಶೆಟ್ಟಿ ಕಟೆರೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಕೃಷ್ಣ ಪ್ರಸಾದ ಶೆಟ್ಟಿ, ಟಿ. ಶಂಭು ಶೆಟ್ಟಿ, ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಪಸ್ಥಿತ ರಿದ್ದರು. ರಶ್ಮೀ ರಾಜ್ ನಿರೂಪಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ವಿದ್ಯಾಸಂಕರ್ ವಂದಿಸಿದರು.