ಗುಂಡ್ಲುಪೇಟೆ: ತಾಲೂಕಿನಲ್ಲಿ ಮಠಮಾನ್ಯಗಳ ಬಗ್ಗೆ ಜನರಲ್ಲಿ ಭಕ್ತಿ, ಗೌರವ, ಸಂಪನ್ನವಿದೆ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಾದಾಪಟ್ಟಣ ಚನ್ನಬಸವ ಮಹಾಸ್ವಾಮೀಜಿ ವಿರಕ್ತ ಮಠಾಧೀಶರಾದ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ ಶಿವಗಣಾರಾಧನೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಠ ಹಾಗೂ ಸ್ವಾಮೀಜಿಗಳ ಅನ್ಯೋನತೆ ಇದ್ದ ಕಾರಣವೇ ಮಾದಾಪಟ್ಟಣ ಮಠಕ್ಕೆ ಭಕ್ತರ ಸಮೂಹವೇ ಇದೆ. ಭಕ್ತರೇ ಸ್ವಯಂ ಪ್ರೇರಿತರಾಗಿ ಧಾರ್ಮಿಕ ಸಭೆ ನಡೆಸಿದ್ದಾರೆ ಎಂದು ಪ್ರಶಂಶಿಸಿದರು.
ಸಂತೃಪ್ತಿ ಭಾವ ಹೊಂದಿದ್ದ ಶ್ರೀಗಳು: ಮಾದಾಪಟ್ಟಣದ ಲಿಂಗೈಕ್ಯ ಸದಾಶಿವಸ್ವಾಮೀಜಿ ಸಾತ್ವಿಕ, ಸಜ್ಜನಿಕೆ ಇತ್ತು ಅಲ್ಲದೆ ಲಿಂಗೈಕ್ಯ ಶ್ರೀಗಳ ವಿರುದ್ಧ ಯಾರು ಮಾತನಾಡಿಲ್ಲ. ಮಠಕ್ಕೆ ಬರುವ ಭಕ್ತರಿಗೆ ಸಮಾನ ಗೌರವ ನೀಡುತ್ತಿದ್ದರು. ಅಲ್ಲದೆ ಶ್ರೀಗಳು ಅವರದೇ ಆದ ಜೀವನ ಶೈಲಿಯಲ್ಲಿ ನಡೆದರು. ಶ್ರೀಗಳ ಜೀವಿತ ಅವಧಿಯಲ್ಲಿ ಎಂದೂ ಲೌಕಿಕ ಸಂಗತಿ ಹಚ್ಚಿಕೊಳ್ಳದೆ ನಿರ್ಲಿಪ್ತರಾಗಿದ್ದರು. ಮಠ ಮತ್ತು ಭಕ್ತರೇ ಸೀಮಿತ ಅಂತು ತಿಳಿದಿದ್ದರು. ಸಂತೃಪ್ತಿ ಭಾವ ಹೊಂದಿದ್ದರು. ಶ್ರೀಗಳಲ್ಲಿ ಕೃತಕತೆ ಇರಲಿಲ್ಲ ಅಲ್ಲದೆ ಸಹಜವಾಗಿ ಇರಲು ಕಾರಣ. ನೇರ, ನಡೆ, ನುಡಿಯ ಜೊತೆಗೆ ಮುಕ್ತ ಮನಸ್ಸು ಹೊಂದಿದ್ದರು. ಯಾವುದೇ ವಿಚಾರದಲ್ಲೂ ನೇರವಾಗಿ ಹಂಚಿಕೊಳ್ಳುವ ಸ್ವಭಾವ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿ ಪ್ರೀತಿಸುತ್ತಿದ್ದರು. ಸಂಗೀತ ಪ್ರೇಮಿಯಾಗಿದ್ದರು ಎಂದು ಬಣ್ಣಿಸಿದರು.
ಶ್ರೀಗಳ ತಾಳ್ಮೆ ಅಗಾಧವಾಗಿತ್ತು: ಶಾಸಕ ಸಿ.ಎಸ್ .ನಿರಂಜನ್‌ಕುಮಾರ್ ಮಾತನಾಡಿ, ಸರಳತೆ ಹಾಗೂ ಭಕ್ತರಿಗೆ ಸದಾ ಕಾಲ ಸಿಗುತ್ತಿದ್ದ ಶ್ರೀಗಳ ತಾಳ್ಮೆ ಅಗಾಧವಾಗಿತ್ತು. ವಚನಗಳ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀಗಳ ಅಗಲಿಕೆ ನಂಬಲು ಅಸಾಧ್ಯ ಎಂದರು.
Related Articles
ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ಲಿಂಗೈಕ್ಯ ಶ್ರೀಗಳು ನನ್ನ ತಂದೆ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್‌ರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಶ್ರೀಗಳ ಸಾವನ್ನು ಅರಗಿಸಿಕೊಳ್ಳಲಿ ಕಷ್ಟ ಎಂದು ತಿಳಿಸಿದರು.
ಪಡಗೂರು ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ದೇವನೂರು ಮಠಾಧೀಶ ಮಹಂತ ಸ್ವಾಮೀಜಿ, ಬೆಟ್ಟದಪುರ ಸಲೀಲಾಖ್ಯ ಮಠಾಧೀಶ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಸೋಮಹಳ್ಳಿ ಮಠಾಧೀಶ ಸಿದ್ಧಮಲ್ಲ ಸ್ವಾಮೀಜಿ, ಚಾ.ನಗರ ಮಠಾಧೀಶ ಚನ್ನಬಸವ ಸ್ವಾಮೀಜಿ, ಮುಡುಕನಪುರ, ರೇಚಂಬಳ್ಳಿ, ಚಿಕ್ಕತುಪ್ಪೂರು ಶ್ರೀಗಳು ಹಾಗೂ ಚಾಮುಲ್ ಮಾಜಿ ಅಧ್ಯಕ್ಷ ಎಚ್. ಎಸ್.ನಂಜುಂಡಪ್ರಸಾದ್, ಮಾದಾಪಟ್ಟಣ ಚನ್ನಬಸವ ವಿರಕ್ತ ಮಠಾಧೀಶ ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು.
ಪ್ರಸಾದ ವಿನಿಯೋಗ: ಲಿಂಗೈಕ್ಯ ಸದಾಶಿವಸ್ವಾಮೀಜಿ ಅವರ ಶಿವಗಣಾರಾಧನೆ ಹಾಗೂ ಧಾರ್ಮಿಕ ಸಮಾರಂಭಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಎಂ.ಶಾಂತಪ್ಪ, ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ ಸೇರಿದಂತೆ ನೂರಾರು ಸ್ವಾಮೀಜಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಮುಖಂಡರಾದ ಕಬ್ಬಹಳ್ಳಿ ಶಾಂತಪ್ಪ, ಪಿ.ಬಿ.ರಾಜಶೇಖರ್, ಹಂಗಳ ಎಚ್.ಎಂ.ಮಹದೇವಪ್ಪ, ಎಚ್.ಎಂ.ಮಹೇಶ್, ಡಿ.ಪಿ.ಜಗದೀಶ್, ನಿಟ್ರೆ ನಾಗರಾಜಪ್ಪ, ಮುಖಂಡರಾದ ಸದಾನಂದ, ಶ್ರೀಕಂಠಪ್ಪ ಸೇರಿದಂತೆ ಸಾವಿರಾರು ಮಂದಿ ಇತರರು ಇದ್ದರು.