Advertisement

ಶಾಂತಿ, ಸೌಹಾರ್ದ, ವಿಶ್ವಕಲ್ಯಾಣ, ರಾಷ್ಟ್ರದ ಪ್ರಗತಿಗೆ ಧಾರ್ಮಿಕ ಮುಖಂಡರ ಸಭೆ ನಿರ್ಣಯ

09:45 AM Nov 11, 2019 | Hari Prasad |

ಉಡುಪಿ: ಅಯೋಧ್ಯೆ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವ ಮೊದಲೇ ನಿಗದಿಯಾಗಿದ್ದ ಸಭೆ ಈಗ ತೀರ್ಪು ಬಂದ ಅನಂತರ ನಡೆದಂತಾಯಿತು.
ತೀರ್ಪು ಬಂದ ಬಳಿಕ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷದ್‌ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಈಗ ಅದೇ ಸಭೆಯನ್ನು ಶಾಂತಿ ಸಭೆಯಾಗಿ ನಡೆಸಲಾಯಿತು.

Advertisement

ಪ್ರಧಾನಮಂತ್ರಿ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ದೇಶದಲ್ಲಿ ಶಾಂತಿಯನ್ನು ಕಾಪಾಡಲು ನಿಮ್ಮ ನಿಮ್ಮ ಸಮುದಾಯಗಳಿಗೆ ತಿಳಿವಳಿಕೆ ನೀಡಬೇಕು. ಎಲ್ಲಿಯೂ ಗಲಭೆ, ಘರ್ಷಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆ ಕರೆ ನೀಡಿತು. ಮಂದಿರ ನಿರ್ಮಾಣ ಕುರಿತು ಸಮಗ್ರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.


‘ತೀರ್ಪು ವಿಶ್ವಕಲ್ಯಾಣಕ್ಕೆ ಕಾರಣವಾಗಲಿ’

ವಿವಿಧ ಮತ ಧರ್ಮಗಳಲ್ಲಿ ಭಿನ್ನತೆ ಇದ್ದರೂ ಸಾಮ್ಯಗಳೂ ಇವೆ. ನಾವು ಪರಧರ್ಮ ಸಹಿಷ್ಣುಗಳು. ಏಳು ಶತಮಾನಗಳ ಹಿಂದೆ ಉಡುಪಿಯಿಂದ ಬಂದ ಮಧ್ವಾಚಾರ್ಯರು ಉತ್ತರ ಭಾರತದ ಮುಸ್ಲಿಂ ದೊರೆಯೊಂದಿಗೆ ಸೌಹಾರ್ದ ಮಾತುಕತೆ ಮಾಡಿದ ಉಲ್ಲೇಖಗಳಿವೆ. ಅಯೋಧ್ಯೆ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲರೂ ಗೌರವಿಸಿದ್ದಾರೆ. ಇದು ವಿಶ್ವ ಕಲ್ಯಾಣ ಮತ್ತು ರಾಷ್ಟ್ರದ ಪ್ರಗತಿಗೆ ಕಾರಣವಾಗಬೇಕು. ಮುಂದಿನ ಎಲ್ಲ ಕೆಲಸಗಳಿಗೆ ಸಮನ್ವಯ ಸಮಿತಿ ರಚನೆಯಾಗಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಭೆಯಲ್ಲಿ ತಿಳಿಸಿದರು.

‘ಶಾಂತಿ, ಸಾಮರಸ್ಯ ಕಾಪಾಡಲು ಸಭೆ ನಿರ್ಣಯಿಸಿತು’ ಎಂದು ಸಭೆ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ದಿಲ್ಲಿಯಲ್ಲಿ ಪೇಜಾವರ ಶ್ರೀಗಳು ತಿಳಿಸಿದರು. ಬಳಿಕ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿಯವರು, ’40-50 ಹಿಂದೂ ಮುಸ್ಲಿಮ್‌ ಧರ್ಮಗುರುಗಳು ಏಕಕಂಠದಿಂದ ಶಾಂತಿ, ಸೌಹಾರ್ದ ಕಾಪಾಡುವ ಭರವಸೆ ನೀಡಿದರು. ತೀರ್ಪಿನ ಸರ್ವಾನುಮತದ ಸ್ವಾಗತ ಐತಿಹಾಸಿಕವಾದುದು. ಧಾರ್ಮಿಕ ಇತಿಹಾಸದಲ್ಲಿ ಇದೊಂದು ದೊಡ್ಡ ಘಟ್ಟ. ಎಲ್ಲರೂ ಜತೆ ಸೇರಿ ರಾಷ್ಟ್ರದ ಪ್ರಗತಿಗೆ ಕಾರಣವಾಗಬೇಕು ಎಂದು ಸಭೆ ನಿರ್ಧರಿಸಿತು’ ಎಂದರು.

ಈ ಮೊದಲು ಸಭೆ ನಿರ್ಣಯವಾದಾಗ ಸಭೆ ಮುಗಿದ ಬಳಿಕ ಅಪರಾಹ್ನ ಅಸ್ಸಾಂನ ಗುವಾಹಟಿಗೆ ತೆರಳಿ ಬ್ರಹ್ಮಪುತ್ರಾ ನದಿ ಸ್ನಾನ ಮಾಡಲು ಪೇಜಾವರ ಶ್ರೀಗಳು ನಿರ್ಧರಿಸಿದ್ದರು. ಸಭೆ ಮುಗಿದ ಬಳಿಕ ಗುವಾಹಟಿಗೆ ತೆರಳಿ ಬ್ರಹ್ಮಪುತ್ರಾ ನದಿ ಸ್ನಾನ ಮಾಡಲು ನಿರ್ಧರಿಸಿದ್ದ ಶ್ರೀಗಳು ಸಭೆ ಮುಗಿಯುವಾಗ ತಡವಾದ ಕಾರಣ ನೇರವಾಗಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಬಂದಿಳಿದರು.

Advertisement

ರವಿವಾರ ಬೆಳಗ್ಗೆ 6 ಗಂಟೆಯೊಳಗೆ ಉಡುಪಿಯಲ್ಲಿ ಪೂಜೆ ಮುಗಿಸಿ ಒಂದು ಲೋಟ ಹಾಲು ಕುಡಿದು ತೆರಳಿದ್ದ ಸ್ವಾಮೀಜಿ ದಿಲ್ಲಿಯ ಮಠಕ್ಕೆ ತೆರಳಿ ಅಲ್ಲಿ ಆಹಾರ ಸ್ವೀಕರಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next