Advertisement

ಸಂಸ್ಕೃತಿ, ಪರಂಪರೆಯ ಉಳಿವಿಗೆ ಧಾರ್ಮಿಕ ದಿನ ನಾಂದಿಯಾಗಲಿ

10:53 PM Mar 31, 2022 | Team Udayavani |

ರಾಜ್ಯದಲ್ಲಿ ಇನ್ನು ಮುಂದೆ ಪ್ರತೀ ವರ್ಷ ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ಸರಕಾರ ನಿರ್ಧರಿಸಿದೆ. ಅದರಂತೆ ಈ ಬಾರಿ ಎ. 2ರ ಚಾಂದ್ರಮಾನ ಯುಗಾದಿಯಂದು ಇದೇ ಮೊದಲ ಬಾರಿಗೆ ಧಾರ್ಮಿಕ ದಿನವನ್ನು ಆಚರಿಸಲಾಗುತ್ತಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಬರುವ ಎಲ್ಲ “ಎ’ ಮತ್ತು “ಬಿ’ ದರ್ಜೆಯ ದೇವಸ್ಥಾನಗಳಲ್ಲಿ ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದೆ. ಅಷ್ಟೇ ಅಲ್ಲದೆ, ಯುಗಾದಿ ದಿನದಂದು ಕೊಳೆಗೇರಿ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ಬೇವು-ಬೆಲ್ಲ ಮತ್ತು ಪ್ರಸಾದ ವಿತರಿಸುವಂತೆಯೂ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹೊಸವರ್ಷದ ಆರಂಭದ ದಿನ. ನವ ಸಂವತ್ಸರವನ್ನು ಎದುರುಗೊಳ್ಳುವ ಈ ದಿನದಂದು ಯುಗಾದಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಕ್ಯಾಲೆಂಡರ್‌ ವರ್ಷ ಜನವರಿ ಒಂದರಂದು ಆರಂಭಗೊಂಡರೂ ಸನಾತನ ಪರಂಪರೆಯ ಪ್ರಕಾರ ಯುಗಾದಿಯೇ ಹೊಸ ವರ್ಷದ ಮೊದಲ ದಿನ. ಬದಲಾದ ಕಾಲಘಟ್ಟದಲ್ಲಿ ನಾವು ಪಾಶ್ಚಾತ್ಯ ಸಂಸ್ಕೃತಿ, ಆಚಾರ- ವಿಚಾರ, ಜೀವನಶೈಲಿಗೆ ಮಾರುಹೋಗುತ್ತಿರುವ ಸಂದರ್ಭದಲ್ಲಿ ನಮ್ಮತನವನ್ನು ಉಳಿಸಿಕೊಂಡು ಅದನ್ನು ಇಂದಿನ ಯುವಪೀಳಿಗೆ ಮತ್ತು ಮಕ್ಕಳಿಗೆ ಪರಿಚಯಿಸಿ, ಅದನ್ನು ಬೆಳೆಸುವ ವಿಶಾಲ ದೃಷ್ಟಿಕೋನದೊಂದಿಗೆ ರಾಜ್ಯದ ದೇವಸ್ಥಾನಗಳಲ್ಲಿ ಯುಗಾದಿಯನ್ನು ಧಾರ್ಮಿಕ ದಿನವಾಗಿ ಆಚರಿಸಲು ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಯುಗಾದಿ ಹಬ್ಬ ಕೇವಲ ಮನೆ, ದೇಗುಲಗಳಿಗೆ ಸೀಮಿತವಾಗದೆ ಅದೊಂದು ಸಾಮುದಾಯಿಕ ಹಬ್ಬವಾಗಿ ಆಚರಿಸಲ್ಪಡಬೇಕೆಂಬ ಪರಿಕಲ್ಪನೆಯೂ ಸರಕಾರದ ಈ ನಿರ್ಧಾರದ ಹಿಂದೆ ಅಡಗಿದೆ ಎಂಬುದನ್ನು ಮರೆಯಬಾರದು.

ಯಾವುದೇ ಹಬ್ಬವಿರಲಿ, ಅದು ಇಂದಿನ ದುಬಾರಿ ಜಗತ್ತಿನಲ್ಲಿ ಕೇವಲ ಶ್ರೀಮಂತ ಮತ್ತು ಮಧ್ಯಮ ವರ್ಗದವರ ಸಂಭ್ರಮಕ್ಕೆ ಮಾತ್ರವೇ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಸರಕಾರ ಯುಗಾದಿಯನ್ನು ಧಾರ್ಮಿಕ ದಿನವಾಗಿ ಘೋಷಿಸುವ ಮೂಲಕ ಈ ಸಡಗರದಲ್ಲಿ ಇಡೀ ಸಮಾಜ ಪಾಲ್ಗೊಳ್ಳಲು ಮತ್ತು ಸಂಭ್ರಮಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ದೇಗುಲಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯುಗಾದಿ ಹಬ್ಬವನ್ನು ಆಚರಿಸುವುದರ ಜತೆಯಲ್ಲಿ ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಕೊಳೆಗೇರಿ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ಪ್ರಸಾದ ವಿತರಿಸಲು ಸೂಚನೆ ನೀಡಿರುವುದೂ ಪ್ರೇರಣಾದಾಯಕ ಹೆಜ್ಜೆ.

ಯುಗಾದಿಯನ್ನು ಧಾರ್ಮಿಕ ದಿನವಾಗಿ ಆಚರಿಸುವ ಸರಕಾರದ ಉದ್ದೇಶವೇನೊ ಶ್ಲಾಘನೀಯವೇ. ಇದು ಕೇವಲ ಬೆರಳೆಣಿಕೆಯ ದೇಗುಲಗಳಿಗೆ, ಸಮಾಜದ ಮುಖ್ಯವಾಹಿನಿಯಲ್ಲಿರುವವರಿಗೆ ಮಾತ್ರ ಸೀಮಿತವಾಗದೆ ಪ್ರತಿ ಮನೆ-ಮನಗಳಲ್ಲಿ ಈ ಸಂಭ್ರಮ ನೆಲೆಗೊಳ್ಳು ವಂತಾಗಬೇಕು. ದೇಗುಲಗಳ ಹಣವನ್ನು ಯಾವ್ಯಾವುದೋ ಕಾರ್ಯಕ್ಕೆ ವಿನಿಯೋಗಿಸುವ ಬದಲಾಗಿ ಜನರಲ್ಲಿ ಧಾರ್ಮಿಕತೆ, ಪರಂಪರೆ, ಸಂಸ್ಕೃತಿ ಬಗೆಗೆ ಜಾಗೃತಿ ಮೂಡಿಸಿ, ನಮ್ಮ ನೆಲದ ಅಸ್ಮಿತೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಧಾರ್ಮಿಕ ದಿನದ ಆಚರಣೆ ನಾಂದಿ ಹಾಡಲಿ.

Advertisement

Udayavani is now on Telegram. Click here to join our channel and stay updated with the latest news.

Next