Advertisement

ಧಾರ್ಮಿಕ |ಪೆರ್ಮುದೆ ಇಗರ್ಜಿಯಲ್ಲಿ ಸಂಭ್ರಮದಿಂದ ಪಾಸ್ಖ ಹಬ್ಬ ಆಚರಣೆ

07:15 PM Apr 21, 2019 | Team Udayavani |

ಕಾಸರಗೋಡು: ಪೆರ್ಮುದೆ ಸೈಂಟ್‌ ಲಾರೆನ್ಸ್‌ ದಿ ಮಾರ್ಟಿರ್‌ ಇಗರ್ಜಿಯಲ್ಲಿ ಕ್ರೈಸ್ತ ಬಾಂಧವರು ಭಕ್ತಿ-ಸಡಗರದೊಂದಿಗೆ ಪಾಸ್ಖ ಹಬ್ಬ ಆಚರಿಸಿದರು.

Advertisement

ನಲ್ವತ್ತು ದಿನಗಳ ಕಾಲ ಅಲಂಕಾರ, ಪುಷ್ಪಾರ್ಪಣೆ ಗಳಿಲ್ಲದ ದೇವಾಲಯ, ಮನೆಗಳು ಶನಿವಾರ ರಾತ್ರಿ ವಿಶೇಷವಾಗಿ ಅಲಂಕೃತಗೊಂಡವು. ಕಥೋಲಿಕ ಕ್ರೈಸ್ತ ದೇವಾಲಯಗಳಲ್ಲಿ ಶನಿವಾರ ರಾತ್ರಿ ಜಾಗರಣೆಯ ರಾತ್ರಿ, ರವಿವಾರ ಪಾಸ್ಖ ಹಬ್ಬದ ಅಂಗವಾಗಿ ಸಂಭ್ರಮದ ದಿವ್ಯಬಲಿಪೂಜೆ ಹಾಗೂ ವಿವಿಧ ವಿಧಿವಿಧಾನಗಳು ನಡೆದವು. ದೇವರ ಪ್ರಜೆ ಎಂದು ಕರೆಯುವ ಇಸ್ರಾಯೇಲ್‌ ಜನಾಂಗ ಈಜಿಪ್ಟಿನ ರಾಯರ ಬಂಧನ ದಿಂದ ವಿಮುಕ್ತವಾದ ದಿನವನ್ನು ಪಾಸ್ಖ ಹಬ್ಬ ಎಂದು ಕ್ರಿಸ್ತ ಪೂರ್ವದಲ್ಲೂ ಆಚರಿಸಲಾಗುತ್ತಿತ್ತು. ಆದರೆ ಪಾಸ್ಖ ಹಬ್ಬದಂದು ಯೇಸು ಪುನರುತ್ಥಾನ ಹೊಂದಿದ್ದು, ಈ ಹಬ್ಬಕ್ಕೆ ಹೊಸ ಅರ್ಥ ಬಂತು. ಅಂಧಕಾರದಿಂದ ಬೆಳಕಿಗೆ, ಮರಣದಿಂದ ಬದುಕಿಗೆ, ಪಾಪದಿಂದ ವಿಮೋಚನೆಗೆ ದಾಟಿಸುವ ಹಬ್ಬವಾಗಿ ಪಾಸ್ಖ ಮಾರ್ಪಾಡುಗೊಂಡಿತ್ತು. ಕ್ರೈಸ್ತಗೆ ಇದು ಬೆಳಕಿನ ಹಬ್ಬ. ಶುಭ ಶುಕ್ರವಾರದ ಮರುದಿನ ಕ್ರೈಸ್ತರು ಜಾಗರಣೆಯ ರಾತ್ರಿಯಾಗಿ ಆಚರಿಸುತ್ತಾರೆ. ಶನಿವಾರ ರಾತ್ರಿ ಕ್ರೈಸ್ತ ದೇವಾಲಯಗಳಲ್ಲಿ ಹೊಸ ಬೆಳಕಿನ ಜ್ವಲನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆಯಾಯಿತು. ಬಲಿಪೂಜೆ ಮುನ್ನ ದೇವಾಲಯದ ಒಳಗಿನ ಹಾಗೂ ಹೊರಗಿನ ಬೆಳಕನ್ನು ನಂದಿಸಿ ದೇವರ ಆಶೀರ್ವಾದ ಪಡೆದು ಹೊಸ ದೀಪವನ್ನು ಬೆಳಗಿಸಲಾಯಿತು.

ಬೆಳಗುವ ದೀಪದೊಂದಿಗೆ ಧರ್ಮಗುರುಗಳು ದೇವಾಲಯದ ಒಳಗೆ ಪ್ರವೇಶಿಸಿದ ಬಳಿಕ ದೇವಾಲಯದ ಎಲ್ಲ ದೀಪಗಳನ್ನು ಬೆಳಗಿಸಿ ಹೊಸ ಜ್ಯೋತಿಯ ಪ್ರವೇಶ ನಡೆಯಿತು. ಹೊಸ ದೀಪದ ಬೆಳಕನ್ನು ಭಕ್ತರು ಹಂಚಿಕೊಂಡರು.

ಮೋಂಬತ್ತಿಗಳನ್ನು ಹಿಡಿದು ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ನೀರಿನ ಆಶೀರ್ವಚನ ನಡೆಯಿತು. ಶನಿವಾರ ಪವಿತ್ರೀಕರಿಸಿದ ನೀರನ್ನು ವರ್ಷ ಪೂರ್ತಿ ಧಾರ್ಮಿಕ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುವುದು. ಶಿಲುಬೆ ಮರಣ ಹೊಂದಿದ ಯೇಸು ಮೂರನೇ ದಿನ ಪುನರುತ್ಥಾನ ಪಡೆದರು. ಪ್ರತಿಯೊಬ್ಬರು ಮರಣದ ಮೂರನೇ ದಿನ ಪುನರುತ್ಥಾನಗೊಳ್ಳುತ್ತಾರೆ ಎಂಬುದು ಕ್ರೈಸ್ತರ ನಂಬಿಕೆ. ಆದರೆ ಯೇಸು ಶರೀರ ಸಮೇತ ಪುನರುತ್ಥಾನಗೊಂಡರು. ಮರಣದ ಬಳಿಕ ಪ್ರತಿಯೊಬ್ಬರ ಆತ್ಮ ಪುನರುತ್ಥಾನಗೊಂಡು ಶಾಶ್ವತ ವಿಶ್ರಾಂತಿಯನ್ನು ಪಡೆಯುತ್ತದೆ. ಪಾಪ-ಪುಣ್ಯಗಳ ನಿರ್ಣಯವಾಗುತ್ತದೆ ಎಂಬುದು ಕ್ರೈಸ್ತರ ನಂಬಿಕೆ ಯಾಗಿದೆ. ಯೇಸು ಪುನರ್ಜನ್ಮ ಪಡೆದ ಈ ದಿನವನ್ನು ಕ್ರೈಸ್ತರು ಈಸ್ಟರ್‌ ಹಬ್ಬವಾಗಿ ಆಚರಿಸುತ್ತಾರೆ.

ಅಲ್ಲೇಲೂಯದ ಶನಿವಾರ ಎಂದು ಕರೆಯುವ ಜಾಗರಣೆ ರಾತ್ರಿಯಾದ ಶನಿವಾರ ನಲ್ವತ್ತು ದಿನಗಳಿಂದ ಸ್ತಬ್ದವಾಗಿದ್ದ ಅಲ್ಲೇಲೂಯಾ ಗೀತೆ ಹಾಡಲಾಯಿತು. ಪವಿತ್ರ ನೀರಿನ ಆಶೀರ್ವಚನ, ಹೊಸ ಹಾಗೂ ಹಳೆ ಒಡಂಬಡಿಕೆಗಳಿಂದ ಬೈಬಲ್‌ ವಾಚನ, ಕೀರ್ತನೆಗಳ ಗಾಯನ ನಡೆಯಿತು.

Advertisement

ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ನೇತೃತ್ವ ನೀಡಿದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್‌ ಡಿ’ಸೋಜ ಪುರುಷಮಜಲು, ಕಾರ್ಯದರ್ಶಿ ಜೋನ್‌ ಡಿ’ಸೋಜ ಓಡಂಗಲ್ಲು, ಗುರಿಕ್ಕಾರರಾದ ವಿನ್ಸೆಂಟ್‌ ಮೊಂತೆರೊ ಪೆರಿಯಡ್ಕ, ಜೋಸೆಫ್‌ ಕ್ರಾಸ್ತ ಪುಟ್ಟಮಾಣಿ, ಫ್ರಾನ್ಸಿಸ್‌ ಸಂತೋಷ್‌ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next