ಭದ್ರಾವತಿ: ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಬೆರೆಸಬಾರದು. ಧರ್ಮ ಒಡೆಯುವ ರಾಜಕಾರಣ ಖಂಡನೀಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಪಟ್ಟಣದ ಮಹಾತ್ಮಗಾಂಧಿ ರಸ್ತೆಯ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಜರಂಗ ದಳದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕನ್ನಡ ಧ್ವಜ ಪ್ರತ್ಯೇಕಿಸುವುದು ಸೇರಿದಂತೆ ಲಿಂಗಾಯತ ಧರ್ಮವನ್ನು ಒಡೆಯುವ ಮೂಲಕ ಇಡೀ ದೇಶವನ್ನು ಒಡೆಯುವ ರಾಜಕಾರಣ ನಡೆಸಲು ಮುಂದಾಗಿದೆ. ಕಲ್ಲಡ್ಕ ಶಾಲೆಗೆ ಕೊಲ್ಲೂರಿನಿಂದ ಬರುತ್ತಿದ್ದ ಅನ್ನಪ್ರಸಾದವನ್ನು ಕೇವಲ ಹಿಂದುತ್ವ ಪ್ರತಿಪಾದಿಸುವ ಶಾಲೆಯೆಂದು ಪರಿಗಣಿಸಿ ತಡೆ ಹಿಡಿದಿದ್ದಾರೆ. ಇಂತಹ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಹಿಂದೂ ಸಮಾಜ ದುರ್ಬಲವಲ್ಲ. ಅಧಿಕಾರಕ್ಕಾಗಿ ಹೋರಾಟ ಮಾಡಿದ ಸಮಾಜವಲ್ಲ. ಸಂಸ್ಕೃತಿ, ಆಚರಣೆ ಉಳಿಸಲು ಅನಾದಿ ಕಾಲದಿಂದಲೂ ಹೋರಾಟ ಮಾಡುತ್ತಾ ಬಂದ ಸಶಕ್ತ ಸಮಾಜವಾಗಿದೆ. ಹಿಂದೂ ಧರ್ಮ, ಸಂಸ್ಕೃತಿ ಉಳಿಯಬೇಕಾದರೆ ಸಮಾಜ ಉಳಿಯಬೇಕು. ಸಮಾಜ ಉಳಿಯಲು ಜನಸಂಖ್ಯೆ ಹೆಚ್ಚಾಗಬೇಕು. ಜನಸಂಖ್ಯೆ ಜಗತ್ತಿನ ಅತ್ಯಂತ ದೊಡ್ಡ ಶಕ್ತಿ ಇದ್ದಂತೆ. ಇಡೀ ಜಗತ್ತಿನ ಎಲ್ಲಾ ಎಲ್ಲಾ ಜೀವರಾಶಿಗಳ ಒಳಿತಿಗೆ ಹಿಂದೂ ಸಮಾಜ ಇರಲೇಬೇಕು ಎಂದರು.
ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಭಾರತಕ್ಕೆ ಬಂದಿದ್ದು ಕೇವಲ ಸಂಪತ್ತು ಲೂಟಿ ಮಾಡಲು ಮಾತ್ರವಲ್ಲ. ಬದಲಾಗಿ ಈ ದೇಶವನ್ನು ಕ್ರೈಸ್ತ, ಮುಸ್ಲಿಂಮಯ ಮಾಡುವುದೇ ಅವರ ಮೂಲ ಉದ್ದೇಶವಾಗಿತ್ತು. ಹೊರಗಿನ ದೇಶದ ದೇವರನ್ನು ಇಲ್ಲಿಗೆ ತಂದು ಮತಾಂತರದ ಮೂಲಕ ಗಂಡಾಂತರ ಸೃಷ್ಟಿಸುತ್ತಿದ್ದಾರೆ. ಬಜರಂಗ ದಳ ಹಿಂದೂ ಸಮಾಜದ ಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಬ್ಬ
ಹಿಂದೂಗಳು ಅದಕ್ಕೆ ಬೆಂಬಲಿಸಬೇಕೆಂದರು. ಇದೀಗ ಲವ್ ಜಿಹಾದ್ ಹೆಸರಿನಲ್ಲಿ ಮೋಸ, ವಂಚನೆ, ಷಡ್ಯಂತ್ರಗಳು ನಡೆಯುತ್ತಿವೆ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಬೇಕಾಗಿದೆ. ಅತ್ಯಾಚಾರ, ಅನಾಚಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಬಜರಂಗ ದಳ ಪ್ರತಿ ಮನೆಯಲ್ಲಿಯೂ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾಧ್ಯಕ್ಷ ರಮೇಶ್ ಬಾಬು, ಜಿಲ್ಲಾ ಸಂಚಾಲಕ ದೀನದಯಾಳ್, ಸಹ ಸಂಚಾಲಕ ಸುನಿಲ್ ಕುಮಾರ್, ವಿನೋದ್, ವಡಿವೇಲು, ಕೀರ್ತಿಗುಜ್ಜಾರ್, ಬಿ.ವಿ. ಚಂದನ್ ರಾವ್, ಮನುಗೌಡ ಮತ್ತಿತರರು ಇದ್ದರು.