ಉಡುಪಿ: ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸತ್ ಸಮಾವೇಶವು ಹಿಂದೂ ಧರ್ಮದ ದಿಕ್ಸೂಚಿಯಾಗಲಿದೆ. ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಮೂಲಭೂತವಾದಿಗಳಿಂದ ಘಾಸಿಯಾಗುತ್ತಿದ್ದು, ಅದರ ನಿವಾರಣೆಗೆ ಈ ಅಧಿವೇಶನ ಮುನ್ನುಡಿಯಾಗಲಿ ಎಂದು ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ನ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್ ಎಸ್.ಪೈ ಹೇಳಿದರು.
ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನ. 24ರಿಂದ 26ರ ವರೆಗೆ ನಡೆಯುವ ಧರ್ಮ ಸಂಸತ್ ಅಧಿವೇಶನದ ಕಾರ್ಯಾಲಯವನ್ನು ಶನಿವಾರ ಅದಮಾರು ಛತ್ರದ ಬಳಿಯ
ವಿಜಯಧ್ವಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಸಂಸತ್ ಕಾರ್ಯಾಲಯ ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ಹೆಮ್ಮೆಯ ಕ್ಷಣ. ಈ ಧರ್ಮ ಸಂಸತ್ ಸಮಾವೇಶವು ದೇಶದಲ್ಲಿ ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಲಿ ಎಂದು ಅವರು ಶುಭ ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಧರ್ಮ ಸಂಸತ್ ದೇಶದ ಇತಿಹಾಸದಲ್ಲಿ ನಕ್ಷತ್ರವಾಗಿ ಬೆಳಗಲಿ. ನಮ್ಮ ದೇಶ ತ್ಯಾಗಭೂಮಿಯಾಗಿ ಹೆಸರುವಾಸಿಯಾಗಿದ್ದು, ಸಂತರಿಗೆ ಶ್ರೇಷ್ಠ ಸ್ಥಾನ ನೀಡಿದೆ. ವೈಚಾರಿಕ ದಾಳಿ, ಲವ್ ಜೆಹಾದ್ ಹೆಸರಲ್ಲಿ ಸಾಂಸ್ಕೃತಿಕ ದಾಳಿ, ಅಹಿಂದದ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಅಧಿಕಾರದ ದಾಳಿ ಹೀಗೆ ಹಿಂದೂ ಧರ್ಮದ ಮೇಲೆ 3 ದಾಳಿಗಳಾಗುತ್ತಿದ್ದು, ಇದಕ್ಕೆ ಈ ಸಮಾವೇಶ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಆರ್‌ಎಸ್‌ಎಸ್ ವಿಭಾಗೀಯ ಕಾರ್ಯಕಾರಣಿ ಸದಸ್ಯ ಶಂಭು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿಎಚ್‌ಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು ಪ್ರಸ್ತಾವನೆ ಗೈದು, 2,500 ಶ್ರೀಗಳು ಪಾಲ್ಗೊಳ್ಳಲ್ಲಿರುವ ಧರ್ಮ ಸಂಸತ್ ಭಾರತಕ್ಕೆ ಹೊಸ ಶಕ್ತಿ ತುಂಬಲಿದೆ. ಈ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ, ಮತಾಂತರನಿಲ್ಲಬೇಕು. ಹಿಂದೂ ಸಮಾಜದಲ್ಲಿ ಸಾಮರಸ್ಯ ನೆಲೆಸಬೇಕು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಈ 4 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ವಂದಿಸಿದರು.
“ಶಾಂತಿ, ಸಾಮರಸ್ಯ ಸ್ಥಾಪನೆ’
ಧರ್ಮ ಸಂಸ್ಥಾಪನೆಗಾಗಿ ಅವತರಿಸಿರುವ ಶ್ರೀಕೃಷ್ಣ ನೆಲೆಯಾಗಿರುವ ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್ ಗೋಹತ್ಯೆ, ಮತಾಂತರ, ಸಾಮರಸ್ಯದ ಕೊರತೆ ಹಾಗೂ ರಾಮಮಂದಿರ ನಿರ್ಮಾಣದಂತಹ ಮಹಣ್ತೀದ
ನಿರ್ಣಯಕ್ಕೆ ಸಾಕ್ಷಿಯಾಗಲಿ. ಈ ಸಮಾವೇಶದಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಯಾಗಲಿದೆ. ಕೈಗೊಂಡ ನಿರ್ಣಯ ಕಾರ್ಯರೂಪಕ್ಕೆ ಬರುವಂತೆ, ಕಾರ್ಯಕ್ರಮ ಸುಸೂತ್ರವಾಗಿ ನಡೆಸಲು ಬೇಕಾದ ಶಕ್ತಿ – ಸಾಮರ್ಥ್ಯವನ್ನು ಶ್ರೀ ಕೃಷ್ಣನು ನೀಡುತ್ತಾನೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.