ಉಡುಪಿ: ದ್ವೈತ, ಅದ್ವೈತ, ವಿಶಿಷ್ಟಾದ್ವೈತದಲ್ಲಿ ಸಮನ್ವಯ ಮಾಡಿಕೊಂಡು ಹೋಗುವಂತೆ, ಪರ ಧರ್ಮಗಳ ಸೌಹಾರ್ದವೂ ಅಗತ್ಯವಾಗಿದೆ. ಶ್ರೀಕೃಷ್ಣ ಮಠದಲ್ಲಿ ಏರ್ಪಡಿಸಿದ್ದ ಈದ್ ಉಪಾಹಾರ ಕೂಟ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಪರಧರ್ಮ ಅಸಹಿಷ್ಣುತೆಯ ಪರಮಾವಧಿ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮ ಧರ್ಮಗಳ ಸಾಮರಸ್ಯ ಬೆಳೆಯ ಬೇಕಾದ ಈ ಕಾಲಘಟ್ಟದಲ್ಲಿ ಉಪಾಹಾರ ಕೂಟ ನೀಡಿರುವುದನ್ನೇ ಮುಂದೆ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಹಿಂದೂ ಧರ್ಮಕ್ಕೆ ಏನಾಗಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ? ಏನಾಗಿದೆ ಎಂದು ಮಠವನ್ನು ಶುದ್ಧಿ ಮಾಡಬೇಕು? ಪ್ರತಿಭಟನೆಯಿಂದ ನಾನೇನೂ ವಿಚಲಿತನಾಗಿಲ್ಲ. ನನ್ನ ದೈನಂದಿನ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿವೆ ಎಂದರು.
ನಾನು ಯಾವುದೇ ಅಪಚಾರ ಮಾಡಿಲ್ಲ, ಧರ್ಮಕ್ಕೂ ಅಪಚಾರವಾಗಿಲ್ಲ ಬದಲಾಗಿ ಬೆಳೆದಿದೆ. ಸುಮ್ಮನೆ ಗದ್ದಲ ಮಾಡುವವರಿಗೆ ಶಾಸ್ತ್ರಗಳ ಅರಿವಿಲ್ಲ. ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಹೋರಾಟ ಹಾಗೂ ಇತರ ಧರ್ಮಗಳೊಂದಿಗೆ ಸ್ನೇಹ ಸೌಹಾರ್ದ ಬೆಳೆಸಿಕೊಂಡು ಬಂದಿದ್ದು ಮುಂದುವರಿಸಿಕೊಂಡು ಹೋಗಲಿದ್ದೇನೆ ಎಂದರು. ಶಿವನನ್ನು ಪೂಜಿಸುವ ಶೈವರು ಶಿವನಿಗಿಂತ ಬೇರೆ ದೊಡ್ಡ ದೇವರಿಲ್ಲ ಎನ್ನುತ್ತಾರೆ. ಹೀಗೆ ಅನೇಕ ಪಂಗಡಗಳಿವೆ. ಹಾಗಿದ್ದರೆ ಇವರನ್ನು ನಾವು ಬಹಿಷ್ಕಾರ ಮಾಡುವುದೇ? ಅವರವರ ಭಾವನೆಗಳಿಗೆ ತಕ್ಕಂತೆ ಮಾಡುತ್ತಾರೆ. ಈ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ ಎಂದರು.
ಪ್ರಮೋದ್ ಮುತಾಲಿಕ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹಿಂಸೆಯ ಪ್ರಚೋ ದನೆಗೆ ಅವಕಾಶವಿಲ್ಲ. ಒಳ್ಳೆಯ ಉದ್ದೇಶದೊಂದಿಗೆ ಉಪಾಹಾರ ಕೂಟವನ್ನು ಏರ್ಪಡಿಸಿದ್ದೆ ಎಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದರು. ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಮುಂದಿನ ಬಾರಿ ನಮ್ಮ ಪರ್ಯಾಯವಿಲ್ಲ. ಈ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊಳ್ಳಲಾಗದು. ಮುಂದೆ ನೋಡೋಣ ಎಂದರು.