Advertisement

ತಗ್ಗಿದ ಮಳೆಯಬ್ಬರ: ನೀರಿನ ಮಟ್ಟ ಇಳಿಕೆ

06:00 AM Aug 20, 2018 | |

ಕಾಸರಗೋಡು: ಹಿಂದೆಂದೂ ಕಂಡರಿಯದ ಜಲ ಪ್ರಳಯದಿಂದ ತತ್ತರಿಸಿರುವ ಕೇರಳದ ದಕ್ಷಿಣದ ಜಿಲ್ಲೆಗಳಲ್ಲಿ ನಿಧಾನವಾಗಿ ವರುಣನ ಆರ್ಭಟ ಶಮನಗೊಳ್ಳುತ್ತಿರುವಂತೆ ರಕ್ಷಣಾಕಾರ್ಯ ಭರದಿಂದ ಸಾಗುತ್ತಿದೆ. ವರುಣನ ಕರುಣೆಯಿಂದಾಗಿ ಪ್ರಳಯ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಕೆಳಕ್ಕಿಳಿಯುತ್ತಿದೆ. ಇದೇ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಗೂ ಕಾರಣವಾಗಿದೆ.

Advertisement

ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಇಳಿಯತೊಡಗಿದ್ದು, ಅದರಿಂದಾಗಿ ಇಡುಕ್ಕಿ ಜಿಲ್ಲೆಯ ಚೆರುತ್ತೋಣಿ ಅಣೆಕಟ್ಟಿನ ಎರಡು ಶಟರ್‌ಗಳನ್ನು ಆದಿತ್ಯವಾರ ಮತ್ತೆ ಮುಚ್ಚಲಾಗಿದೆ. ಮಹಾಪ್ರಳಯದಿಂದ ಶನಿವಾರ ವಿವಿಧ ಜಿಲ್ಲೆಗಳಲ್ಲಾಗಿ 39 ಮಂದಿ ಸಾವಿಗೀಡಾಗಿದ್ದಾರೆ. ಆದಿತ್ಯವಾರ ಬೆಳಗ್ಗೆ ಎರಡು ಮೃತ ದೇಹಗಳು ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ 193 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 359ಕ್ಕೇರಿದೆ. ಚೆಂಗನ್ನೂರು ಸಮೀಪದ ಪಾಂಡಕ್ಕಾಡಿನಲ್ಲಿ ರಕ್ಷಾ ಕಾರ್ಯಾಚರಣೆಗಳಿದ ಬೋಟ್‌ ದಿಢೀರ್‌ ನಾಪತ್ತೆಯಾಗಿದ್ದು, ಅದರಲ್ಲಿ ಆರು ಮಂದಿ ಇದ್ದರು. ಅವರ ಪತ್ತೆಗಾಗಿ ಹೆಲಿಕಾಪ್ಟರ್‌ನಲ್ಲಿ ಶೋಧ ನಡೆಯುತ್ತಿದೆ. ಸೇನೆ, ವ್ಯೋಮ, ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಗಳು ರಕ್ಷಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮೃತ ದೇಹಗಳು ನೀರಿನಲ್ಲಿ ತೇಲಿ ಬರುತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಸಂತ್ರಸ್ತ ಶಿಬಿರಗಳಲ್ಲಿ 6.5 ಲಕ್ಷ ಮಂದಿ ಕಳೆಯುತ್ತಿ ದ್ದಾರೆ. 58,506 ಕುಟುಂಬಗಳು ನಿರಾಶ್ರಿತಗೊಂಡಿದೆ. ಸಂತ್ರಸ್ತ ಶಿಬಿರಗಳಲ್ಲಿ ಕಳೆಯುತ್ತಿರುವ ಜನರು ಆಹಾರ ಮತ್ತು ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಆಸ್ಪತ್ರೆಗಳಲ್ಲೂ ಭಾರೀ ನೀರಿನ ಸಮಸ್ಯೆ ತಲೆದೋರಿದೆ. ಸರಕಾರದ ಲೆಕ್ಕಾಚಾರಕ್ಕೆ ಸಿಗದಷ್ಟು ಸಾವು ನೋವು ಸಂಭವಿಸಿದೆ. ಮಳೆ ನಿಧಾನವಾಗಿ ಹಿಂದೆ ಸರಿಯುತ್ತಿರುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ರೆಡ್‌ ಅಲರ್ಟ್‌ ನಿಂದ ಹೊರತುಪಡಿಸಲಾಗಿದೆ. ಮಳೆ ಶಮನಗೊಂಡರೂ ಎರ್ನಾಕುಳಂ, ಕೊಚ್ಚಿ, ಇಡುಕ್ಕಿ, ಕಣ್ಣೂರು, ತೃಶೂರು ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಪದೇ ಪದೇ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪ್ರಳಯದಿಂದ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕೆಲಸಕ್ಕೂ ಭರದಿಂದ ಚಾಲನೆ ನೀಡಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

6,61,887 ಮಂದಿ ನಿರಾಶ್ರಿತರು
ಜಲ ಪ್ರಳಯದಲ್ಲಿ ಸಿಲುಕಿ ನಿರ್ಗತಿಕರಾಗಿರುವವರ ಸಂರಕ್ಷಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3446 ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದೆ. ಇದರಲ್ಲಿ 1,69,935 ಕುಟುಂಬಗಳ 6,61,887 ಮಂದಿ ನಿರಾಶ್ರಿತರಿದ್ದಾರೆ.

ನೀರಿನಲ್ಲಿ ತೇಲಿ ಬರುತ್ತಿರುವ ಮೃತದೇಹಗಳು
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ  ಕಾರ್ಯಾಚರಣೆ ನಡೆದು ಬರುತ್ತಿರುವಂತೆಯೇ ಹಲವು ಜಿಲ್ಲೆಗಳಲ್ಲಿ ನೀರಿನಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ಈ ಕಾರಣದಿಂದ ಪ್ರಾಕೃತಿಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ನಿಖರ ಅಂಕಿಅಂಶ ಲಭಿಸದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next