Advertisement

ಚಂದಳಿಕೆ ಸರಕಾರಿ ಶಾಲೆ ಮಕ್ಕಳಿಗೆ 1.25 ಲಕ್ಷ ರೂ. ವಿಮೆ

07:38 AM Apr 02, 2018 | |

ವಿಟ್ಲ: ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಲವಾರು ಸೌಲಭ್ಯಗಳನ್ನು ಒದಗಿಸುವುದುಂಟು. ಇಂದು ಸರಕಾರಿ ಶಾಲೆಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸರಕಾರವೇ ಬಿಸಿಯೂಟ, ಸಮವಸ್ತ್ರ, ಸೈಕಲ್‌, ಹಾಲು ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ವಿಟ್ಲ ಸಮೀಪದ ಚಂದಳಿಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಇನ್ನೂ ಒಂದು ಹೆಜ್ಜೆ ಮುಂದೆ ನಿಂತಿದೆ. ಮುಂದಿನ, 2018-19ರ ಶೈಕ್ಷಣಿಕ ವರ್ಷದಿಂದ ತನ್ನ ವಿದ್ಯಾರ್ಥಿಗಳಿಗೆ ತಲಾ 1.25 ಲಕ್ಷ ರೂ. ಆರೋಗ್ಯ ವಿಮೆ ಇಳಿಸುವ ವಿಶೇಷ ಸೌಲಭ್ಯವನ್ನು ಘೋಷಿಸಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂಬ ಚಂದಳಿಕೆ ವಿದ್ಯಾವರ್ಧಕ ಸಂಘದ ಪ್ರಯತ್ನದ ಅಂಗವಾದ ಈ ವಿಶೇಷ ಕೊಡುಗೆಯು ಶಾಲೆಯಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಇನ್ನೊಂದು ಆಯಾಮ ಒದಗಿಸಬಲ್ಲುದು.

Advertisement

28ರಿಂದ 65ಕ್ಕೆ
1ರಿಂದ 7ರ ತನಕ ತರಗತಿಗಳು ಇರುವ ಈ ಶಾಲೆಯಲ್ಲಿ 2015-16ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 28ಕ್ಕೆ ಕುಸಿದು ಮುಚ್ಚುವ ಹಂತದಲ್ಲಿತ್ತು. ಸುತ್ತ ಮುತ್ತಲ ವಿದ್ಯಾಭಿಮಾನಿಗಳು ಸೇರಿ ವಿದ್ಯಾ ವರ್ಧಕ ಸಂಘವನ್ನು ರೂಪಿಸಿ ಈ ಶಾಲೆಯ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡಿದರು. ಅದರ ಫಲವಾಗಿ 2016-17ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 65ಕ್ಕೇರಿದೆ. ನಾಲ್ವರು ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸಬೇಕು. ಆದರೆ ಸಮರ್ಪಕವಾಗಿ ಕರ್ತವ್ಯ ನಿರ್ವ ಹಿಸು ವವರು ಇಬ್ಬರೇ. ಮುಖ್ಯೋಪಾಧ್ಯಾಯರ ಹುದ್ದೆ ಖಾಲಿಯಾಗಿದೆ. ಇಲ್ಲಿದ್ದ ಓರ್ವ ಶಿಕ್ಷಕಿಯನ್ನು ಕಲ್ಲಡ್ಕಕ್ಕೆ ನಿಯೋ ಜನೆ ಗೊಳಿಸ ಲಾಗಿದೆ. ಮತ್ತೋರ್ವ ಶಿಕ್ಷಕಿ ತನ್ನ ಮಗುವಿನ ಆರೋಗ್ಯ ಸಮಸ್ಯೆ ಯಿಂದಾಗಿ ಈ ಶಾಲೆಗೆ ಭೇಟಿ ನೀಡು ವುದು ವರ್ಷಕ್ಕೊಮ್ಮೆ. ಮಾರ್ಚ್‌ ಕೊನೆಗೆ ಅಂದರೆ, ಶೈಕ್ಷಣಿಕ ವರ್ಷದ ಕೊನೆಗೆ ಈ ಶಿಕ್ಷಕಿ ಹಾಜರಾಗಿ ಸಹಿ ಹಾಕಿ ತೆರಳಿದರೆ ಮತ್ತೆ ಮುಂದಿನ ವರ್ಷ ಮಾರ್ಚ್‌- ಎಪ್ರಿಲ್‌ ತಿಂಗಳಲ್ಲಿ ಹಾಜರಾಗುತ್ತಾರೆ. ಇದು ಇಲ್ಲಿನ ವಿದ್ಯಾವರ್ಧಕ ಸಂಘದ ಎಲ್ಲ ಪ್ರಯತ್ನಗಳಿಗೆ ತಣ್ಣೀರೆರಚುವಂತಿದೆ. ಆದರೂ ಸಂಘವು ಗೌರವ ಶಿಕ್ಷಕಿಯರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳ ವ್ಯಾಸಂಗ ಸಮರ್ಪಕವಾಗಿ ನಡೆಯುವಂತೆ ಭಗೀರಥ ಪ್ರಯತ್ನ ಪಡುತ್ತಿದೆ. ಪ್ರಸ್ತುತ ಇಬ್ಬರು ಗೌರವ ಶಿಕ್ಷಕಿಯ ರಿದ್ದು, ಮುಂದಿನ ವರ್ಷ ಇನ್ನೊಬ್ಬರು ಶಿಕ್ಷಕಿಯನ್ನು ನೇಮಿಸಿ ಕೊಳ್ಳುವ ಯೋಜನೆ ಹಾಕಿಕೊಂಡಿದೆ. 

ಇಲಾಖೆಯೂ ಸಹಕರಿಸಲಿ
2 ವರ್ಷಗಳ ಹಿಂದೆ ಊರಿನ ವಿದ್ಯಾಭಿಮಾನಿಗಳು ಜತೆಗೂಡಿ ವಿದ್ಯಾವರ್ಧಕ ಸಂಘವನ್ನು ಕಟ್ಟಿಕೊಂಡಿದ್ದಾರೆ. ಭವಾನಿ ರೈ ಕೊಲ್ಯ ಅಧ್ಯಕ್ಷ ರಾಗಿ, ನೋಣಯ್ಯ ಪೂಜಾರಿ ಕಲ್ಲಕಟ್ಟ ಉಪಾಧ್ಯಕ್ಷರಾಗಿ, ಪುರಂದರ ಕೂಟೇಲು ಕಾರ್ಯದರ್ಶಿಯಾಗಿ, ದೇಜಪ್ಪ ಪೂಜಾರಿ ನಿಡ್ಯ ಜತೆ ಕಾರ್ಯದರ್ಶಿಯಾಗಿ, ಗೌತಮ್‌ ಶೆಟ್ಟಿ ಕೊಲ್ಯ ಕೋಶಾಧಿಕಾರಿಯಾಗಿ ಇನ್ನುಳಿದ 15 ಮಂದಿ ಸದಸ್ಯರ ಜತೆಗೂಡಿ ಶ್ಲಾಘನಾರ್ಹ ಕಾರ್ಯ ಮಾಡುತ್ತಿದ್ದಾರೆ. 

ವಿಮೆ ಸೌಲಭ್ಯ ಹೇಗೆ?
ಜೂನ್‌ನಲ್ಲಿ ತರಗತಿ ಆರಂಭವಾಗುವ ಸಂದರ್ಭದಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಈ ವಿಮೆ ಸೌಲಭ್ಯವನ್ನು ವಿದ್ಯಾವರ್ಧಕ ಸಂಘವೇ ಮಾಡಿಸಿಕೊಡುತ್ತದೆ. ಅಂದರೆ ಪ್ರತೀ ವಿದ್ಯಾರ್ಥಿಗೂ ತಲಾ 1.25 ಲಕ್ಷ  ರೂ. ಮೊತ್ತದ ವಿಮೆಯನ್ನು ಇಳಿಸಲಾಗುತ್ತದೆ. ಅದರ ಪ್ರೀಮಿಯಂ ಮೊತ್ತವನ್ನು ಸಂಘವೇ ಪಾವತಿಸಲಿದೆ. ಸಹಜವಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿರುವಾಗ ಮಾತ್ರವಲ್ಲ; 24 ತಾಸು ಕೂಡ ಈ ವಿಮಾ ಸೌಲಭ್ಯ ಅನ್ವಯವಾಗುತ್ತದೆ. ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿಯ ಈ ವಿಮಾ ಯೋಜನೆಯ ಹೆಸರು “ಸ್ಟೂಡೆಂಟ್‌ ಸೇಫ್ಟಿ ಪ್ಲಾನ್‌’. ಯೋಜನೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆರೋಗ್ಯ ಕವರೇಜ್‌ ಮತ್ತು ಅಪಘಾತ ಕವರೇಜ್‌ಗಳನ್ನು ಈ ವಿಮೆ ಹೊಂದಿದೆ.

ಏನೇನು ಅಗತ್ಯ?
ಶಾಲೆಯ ವಿದ್ಯಾರ್ಥಿಗಳು ವಿಮೆ ಮಾಡಿಸಿಕೊಳ್ಳುವುದಕ್ಕಾಗಿ ವಾಸ್ತವ್ಯ, ವಿಳಾಸದ ಆಧಾರವಾಗಿ ತಂದೆ, ತಾಯಿ ಮತ್ತು ಸ್ವಂತ ಆಧಾರ್‌ ಕಾರ್ಡ್‌ ಹಾಗೂ ಫೋಟೋ ನೀಡಬೇಕು. ಇದು ಗ್ರೂಪ್‌ ಇನ್ಶೂರೆನ್ಸ್‌ ಯೋಜನೆಯಾಗಿದ್ದು, ಪ್ರತೀ ವಿದ್ಯಾರ್ಥಿಗೆ ತಲಾ 200 ರೂ. ಪ್ರೀಮಿಯಂ ಒದಗುತ್ತದೆ. ಆರೋಗ್ಯ ವಿಮೆಯಾದ್ದರಿಂದ ವಾರ್ಷಿಕವಾಗಿ ನವೀಕರಣ ಮಾಡಿಕೊಳ್ಳಬೇಕಿದೆ.

Advertisement

ಶಿಕ್ಷಕರಿಗೆ ಉದ್ಯೋಗ ಖಾತ್ರಿ, ಮೆಡಿಕಲ್‌ ರಜೆ, ವೇತನರಹಿತ ರಜೆ ಸೌಲಭ್ಯಗಳು ಇವೆ. ಇಲ್ಲಿನ ಶಿಕ್ಷಕಿಯೊಬ್ಬರ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದು, ಅವರು ಈ ರಜೆಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಸಮಸ್ಯೆ ಉಂಟಾಗಿದೆ. ಅವರು ಶಿಕ್ಷಕ ಹುದ್ದೆಯನ್ನು ತ್ಯಜಿಸ ಬೇಕು. ಇಲ್ಲವಾದಲ್ಲಿ ಚಂದಳಿಕೆ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದೇವೆ. ಅವರು ಇನ್ನಾದರೂ ಎಚ್ಚರವಾಗಬೇಕು.
ನಾರಾಯಣ ಗೌಡ ಬಿಆರ್‌ಪಿ, ಬಂಟ್ವಾಳ

ಶಿಕ್ಷಣ ಇಲಾಖೆಯು ಜವಾ ಬ್ದಾರಿ ಯುತ ಹಾಗೂ ಸೇವಾ ಮನೋಭಾವವುಳ್ಳ ಶಿಕ್ಷಕರನ್ನು ಒದಗಿಸಿದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಚಂದಳಿಕೆ ಸರಕಾರಿ ಶಾಲೆಯನ್ನು ಅತ್ಯುತ್ತಮ ಶಿಕ್ಷಣ ಕೇಂದ್ರವನ್ನಾಗಿ ಮಾಡುವ ಹೊಣೆ ನಮ್ಮದು.
ಭವಾನಿ ರೈ ಕೊಲ್ಯ ಅಧ್ಯಕ್ಷರು, ಚಂದಳಿಕೆ ವಿದ್ಯಾವರ್ಧಕ ಸಂಘ

ಉದಯಶಂಕರ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next