ಹೊಸದಿಲ್ಲಿ : ದೇಶಾದ್ಯಂತ ಇಂದು ಬುಧವಾರ ಪೆಟ್ರೋಲ್ ದರ ಲೀಟರ್‌ಗೆ 12 ಪೈಸೆ ಏರಿದೆ; ಡೀಸಿಲ್ ದರ ಲೀಟರ್‌ಗೆ 18 ಪೈಸೆ ಏರಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಒಂದೇ ಸಮನೆ ಏರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ದುಬಾರಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ಅಬಕಾರಿ ಸುಂಕವನ್ನು ರಾಜ್ಯ ಸರಕಾರಗಳು (ವ್ಯಾಟ್ ಕಡಿತದ ಮೂಲಕ) ಕಡಿಮೆ ಮಾಡಬೇಕು ಎಂಬ ಕರೆಗಳು ಮತ್ತೆ ಕೇಳಿ ಬರತೊಡಗಿವೆ.
ಈ ಹಿನ್ನೆಲೆಯಲ್ಲಿ ಇದೇ ಜನವರಿ 18ರಂದು, ನಾಳೆ ಗುರುವಾರ, ಅತೀ ಮಹತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ ಪ್ರಧಾನ ಚರ್ಚಾ ವಿಷಯವಾಗುವ ನಿರೀಕ್ಷೆ ಇದೆ.
ರಾಜ್ಯ ಸರಕಾರಗಳು ಪೆಟ್ರೋಲ್, ಡೀಸಿಲ್ ಬೆಲೆಯನ್ನು ತಕ್ಕಮಟ್ಟಿಗಾದರೂ ಕೆಳಗಿಳಿಸುವ ನಿಟ್ಟಿನಲ್ಲಿ ವ್ಯಾಟ್ ದರ ಕಡಿತ ಮಾಡುವಂತೆ ಜಿಎಸ್‌ಟಿ ಮಂಡಳಿ ಕೋರುವ ಸಾಧ್ಯತೆ ಇದೆ. ಜಿಎಸ್‌ಟಿ ಅಡಿ ಪೆಟ್ರೋಲ್, ಡೀಸಿಲ್ ತರುವುದನ್ನು ರಾಜ್ಯ ಸರಕಾರಗಳು ತೀವ್ರವಾಗಿ ವಿರೋಧಿಸುತ್ತಿವೆ. ಕಾರಣ ಇವು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಹರಿದು ಬರುವ ಭಾರೀ ಪ್ರಮಾಣದ ಆದಾಯ ಮೂಲಗಳಾಗಿವೆ.
ಡೀಸಿಲ್ ದರ ಇಂದು ಲೀಟರ್‌ಗೆ ದಾಖಲೆಯ 62.06 ರೂ. ತಲುಪಿದೆ; ಪೆಟ್ರೋಲ್ ಲೀಟರ್‌ಗೆ 71 ರೂ. ದಾಟಿದೆ. ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಲೀಟರ್ ದರ ಇಂದು 71.39 ರೂ. 2014ರ ಬಳಿಕದ ಗರಿಷ್ಠ ದರ ಇದಾಗಿದೆ.