Advertisement

ಶಾಸಕ ನೆಹರು ಓಲೇಕಾರ್‌ಗೆ ಹೈಕೋರ್ಟ್‌ನಿಂದ “ರಿಲೀಫ್”

03:15 PM Mar 04, 2023 | Team Udayavani |

ಬೆಂಗಳೂರು: ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಅವರಿಗೆ ಹೈಕೋರ್ಟ್‌ನಿಂದ “ರಿಲೀಫ್’ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2023ರ ಫೆ.13ರಂದು ಹೊರಡಿಸಿದ್ದ ತೀರ್ಪನ್ನು ಅಮಾನತ್ತಿನಲ್ಲಿಟ್ಟು, ಅಲ್ಲದೇ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಆದೇಶಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶಾಸಕ ನೆಹರು ಓಲೇಕಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

Advertisement

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸ್ವರೂಪ್‌ ಆನಂದ್‌ ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ದೂರು ದಾಖಲಿಸಲು ದೂರುದಾರರು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನೇ ಪಡೆದಿಲ್ಲ. ಪೂರ್ವಾನುಮತಿ ಪಡೆಯದೇ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿ ಅರ್ಜಿದಾರರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನುಬಾಹಿರವಾಗಿದೆ. ಇನ್ನೂ ಪ್ರಕರಣದ ಇತರೆ ಆರೋಪಗಳ ಜೊತೆಗೆ ಅರ್ಜಿದಾರ ಶಾಸಕರು ಅಪರಾಧಿಕ ಒಳಸಂಚು ರೂಪಿಸಿಲ್ಲ.
ಆದ್ದರಿಂದ ಅರ್ಜಿದಾರರನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯದ ಹೊರಡಿಸಿದ ಆದೇಶವನ್ನು ಅಮಾನತ್ತಿನಲ್ಲಿರಿಸಬೇಕು. ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಿ ನೆಹರು ಓಲೇಕಾರ್‌ಗೆ ಜಾಮೀನು ನೀಡಿ ಆದೇಶಿಸಿತು.

2008-13ರವರೆಗೆ ಶಾಸಕರಾಗಿದ್ದ ಅವಧಿಯಲ್ಲಿ ನೆಹರು ಓಲೇಕಾರ್‌ ಅವರು ಹಾವೇರಿ ನಗರಸಭೆಯ ಕಾಮಗಾರಿಗಳನ್ನು ತಮ್ಮ ಪುತ್ರಿಗೆ ಗುತ್ತಿಗೆ ಕೊಡಿಸಿದ್ದರು. ಐದು ಕಾಮಗಾರಿಗಳನ್ನು ನಡೆಸದಿದ್ದರೂ, ಕಾಮಗಾರಿಗಳು ನಡೆದಿವೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಒಟ್ಟು 5.35 ಕೋಟಿ ರೂ. ಪಡೆದು ಸರ್ಕಾರಕ್ಕೆ ವಂಚನೆ ಮಾಡಿದ್ದರು. ಜತೆಗೆ, ಪುತ್ರರಿಗೇ ಗುತ್ತಿಗೆ ಕೊಡಿಸಿ ಸ್ವಜನ ಪಕ್ಷಪಾತ ಮಾಡಿದ್ದಾರೆ. ಪ್ರಕರಣದಲ್ಲಿ ಇತರೆ ಆರೋಪಿಗಳ ಜೊತೆಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ್‌ ಮಹದೇವಪ್ಪ ಹಳ್ಳಿಕೆರೆ ಹಾವೇರಿಯ ಲೋಕಾಯುಕ್ತ ಕೊರ್ಟ್‌ಗೆ ಖಾಸಗಿ ದೂರು ಸಲ್ಲಿಸದ್ದಿರು. ದೂರಿನ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನಂತರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣವನ್ನು ಸುದೀರ್ಘ‌ ಕಾಲ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ನೆಹರು ಓಲೇಕಾರ್‌, ಅವರ ಪುತ್ರರಾದ ಮಂಜುನಾಥ್‌ ಓಲೇಕಾರ್‌, ದೇವರಾಜ್‌ ಓಲೇಕಾರ್‌, ನಿವೃತ್ತ ಅಧಿಕಾರಿಗಳಾದ ಎಚ್‌.ಕೆ. ರುದ್ರಪ್ಪ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿಯಲ್ಲಿ ದೋಷಿಯಾಗಿ ತೀರ್ಮಾನಿಸಿ 2023ರ ಫೆ.13ರಂದು ಆದೇಶಿಸಿತ್ತು. ಆದರೆ, ನೆಹರು ಓಲೇಕಾರ್‌ ಮಾತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next