Advertisement

ಕುಂಟಾರಿನಲ್ಲಿ ಸರಣಿ ಕಟ್ಟ ನೀರಿನ ಕೊರತೆಗೆ ಪರಿಹಾರ

08:03 PM Jan 07, 2020 | mahesh |

ಬದಿಯಡ್ಕ: ನೀರಿಲ್ಲದೆ ಒದ್ದಾಡುವ ದಿನಗಳಿಗೆ ವಿದಾಯ ಹೇಳಲು ಜನರು ಎಚ್ಚೆತ್ತುಕೊಂಡಿದ್ದಾರೆ. ನಮ್ಮೂರಲ್ಲಿ ಸಾಕಷ್ಟು ತೋಡುಗಳ ನೀರು ಸಮುದ್ರ ಸೇರುತ್ತದೆ. ಹೀಗೆ ಹರಿದು ಹೋಗುವ ತೋಡುಗಳಿಗೆ ಕಟ್ಟವನ್ನು ಕಟ್ಟಿ ನೀರನ್ನು ಹಿಡಿದಿಡುವ ಪ್ರಯತ್ನ ಸಾರ್ವತ್ರಿಕವಾಗುತ್ತಿದೆ. ಈ ಯೋಜನೆಗೆ ಕುಂಟಾರಿನ ಜನರು ಸಹ ಕೈ ಜೋಡಿಸುತ್ತಿದ್ದಾರೆ.

Advertisement

ಕಾರಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದ ಕುಂಟಾರಿನ ಮೂಲಕ ತೋಡುಗಳು ಹರಿದು ಪಯಸ್ವಿನಿ ನದಿಯನ್ನು ಸೇರುತ್ತವೆ. ಈ ತೋಡುಗಳಿಗೆ ಹಲವು ವರ್ಷಗಳ ಹಿಂದೆ ಕಟ್ಟವನ್ನು ಕಟ್ಟಿ ಕೃಷಿ ಮಾಡುತ್ತಿದ್ದರು. ಕ್ರಮೇಣ ಈ ಸಂಪ್ರದಾಯ ಮರೆಯಾಯಿತು. ಆದರೆ ಕಟ್ಟಕಟ್ಟುವುದನ್ನು ನಿಲ್ಲಿಸಿದ ಪರಿಣಾಮವಾಗಿ ನೀರಿನ ಕೊರತೆಯನ್ನು ಅನುಭವಿಸಬೇಕಾಯಿತು. ಕೆರೆ-ಬಾವಿಗಳ ನೀರು ಬೇಗನೇ ಬತ್ತಿ ನೀರಿಗಾಗಿ ಹಾಹಾಕಾರ ನಮ್ಮದಾಯಿತು. ಕುಡಿಯಲೂ ನೀರಿಲ್ಲ; ಕೃಷಿಗೂ ಇಲ್ಲ. ಈ ಸಂದರ್ಭದಲ್ಲಿ ಕೊಳವೆ ಬಾವಿ ತೋಡುವುದಕ್ಕೆ ಮುಂದಾದರೂ ಅದೂ ನಿಷ್ಪ್ರಯೋಜಕವಾದಾಗ ನೀರನ್ನು ಹಿಡಿದಿಡುವ ಯೋಜನೆಗಳು ಅನಿವಾ ರ್ಯವಾದವು. ನೀರಿಂಗಿಸುವ ಬೇರೆ ಬೇರೆ ಕ್ರಮಗಳನ್ನು ಅನುಸರಿಸಲು ಮುಂದಾಗಿರುವುದು ಆಶಾದಾಯಕ. ಈಗ ಹೆಚ್ಚು ಜನರ ಒಲವು ಕಟ್ಟಗಳ ಕಡೆಗೆ. ಹುಣ್ಸೆಡ್ಕ-ನಡುಬಯಲು ಮೂಲಕ ತೋಡಿನಲ್ಲಿ ನೀರು ಸುಮಾರು ಜನವರಿ ಕೊನೆಯ ತನಕ ಹರಿಯುತ್ತಿರುತ್ತದೆ. ಈ ನೀರನ್ನು ಕಟ್ಟ ಕಟ್ಟಿ ಹಿಡಿದಿಡುವ ಪ್ರಯತ್ನಕ್ಕೆ ಕುಂಟಾರಿನ ಜನರು ಮುಂದಾದರು. ಸ್ಥಳೀಯರು 2 ಕಟ್ಟಗಳನ್ನು ನಿರ್ಮಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾ ಯತ್‌ ಸದಸ್ಯರಾದ ಮುಹಮ್ಮದ್‌, ಮಾಜಿ ಸದಸ್ಯೆ ಮಿಥಿಲಾಕ್ಷಿ ಅವರ ನೇತೃತ್ವದಲ್ಲಿ ಸ್ಥಳೀಯರಾದ ಬಾಲಕೃಷ್ಣ ಭಟ್‌ ಮತ್ತು ದಿಲೀಪ ಇವರ ಬೆಂಬಲದೊಂದಿಗೆ, ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ಸಹಕಾರದಿಂದ ಇನ್ನೂ ಮೂರು ಕಟ್ಟಗಳನ್ನು ಕಟ್ಟುವ ಮೂಲಕ ಸರಣಿಕಟ್ಟಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಬೇಕಾದ ವಸ್ತುಗಳನ್ನು ಸ್ಥಳೀಯ ಸಹƒದಯಿಗಳು ನೀಡಿ ಸಹಕರಿಸಿದರು.

ಹೀಗೆ ಈಗಾಗಲೇ 5 ಕಟ್ಟಗಳನ್ನು ಈ ಒಂದು ತೋಡಿಗೆ ನಿರ್ಮಿಸಲಾಗಿದ್ದು ಇನ್ನೂ ಹೆಚ್ಚಿನ ಕಟ್ಟಗಳನ್ನು ನಿರ್ಮಿಸುವ ಯೋಜನೆಯೂ ಇದೆ. ಉದ್ಯೋಗ ಖಾತರಿ ಕಾರ್ಮಿಕರು ಸಂಬಳ ರಹಿತವಾಗಿ ಈ ಕಟ್ಟ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜವಾಗಿಯೂ ಶ್ಲಾಘನೀಯ. ಈ ಕಟ್ಟ ಕಟ್ಟಿದ ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು ಹರಿದು ಪೋಲಾಗುವ ನೀರು ಕೆರೆ, ಬಾವಿ, ಅಡಿಕೆ ತೋಟಗಳೇ ಮೊದಲಾದ ಕೃಷಿ ಪ್ರದೇಶಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ. ನೀರಿಂಗುವಿಕೆ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ನೀರಿನ ತತ್ವಾರವನ್ನು ದೂರಮಾಡಲು ಸಾಧ್ಯಮಾಡಬಹುದು. ಹೀಗಾಗಿ ಸಾಧ್ಯವಾದಷ್ಟು ರೀತಿಯಲ್ಲಿ ನೀರು ಸುಮ್ಮನೆ ಪೋಲಾಗದ ಯೋಜನೆಗಳನ್ನು ಮಾಡಿದರೆ ನೀರಿಗೆ ಬರ ಬರಲಾರದು. ಕಾರಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಾಕಷ್ಟು ತೋಡುಗಳ ನೀರು ಹರಿದು ನದಿಪಾಲಾಗಿ ಸಮುದ್ರವನ್ನು ಸೇರುತ್ತದೆ. ಹೀಗೆ ಹರಿಯುವ ತೋಡುಗಳಿಗೆ ಕಟ್ಟಕಟ್ಟಿ ನೀರನ್ನು ಸಂಗ್ರಹಿಸಿಟ್ಟರೆ ಬೇಸಗೆಯಲ್ಲಿ ನೀರಿಗಾಗಿ ಪರದಾಡುವ ಸಂದರ್ಭವೇ ಬರಲಾರದು. ತಡಮಾಡದೆ ನೀರನ್ನು ಸಂರಕ್ಷಿಸುವ ಯೋಜನೆಗೆ ಮುಂದಾಗುವ. ಕೆಲವು ವರ್ಷಗಳ ಹಿಂದೆ ತೋಡುಗಳಿಗೆ ಕಟ್ಟ ಕಟ್ಟಿ ಅದರ ನೀರನ್ನು ಉಪಯೋಗಿಸಿ ಬೇಸಾಯ ಮಾಡುತ್ತಿದ್ದರು. ಈಗ ಬೇಸಾಯ ಮಾಡುವವರೂ ಕಡಿಮೆ. ಗದ್ದೆಗಳು ಹಡಿಲಾಗುತ್ತಿವೆ. ಬೇಸಾಯ ಮಾಡಿದರೂ ಬಾವಿ, ಬೋರ್‌ನ ನೀರಿಗೆ ಶರಣು ಹೋಗುತ್ತಾರೆ. ನೀರಿಂಗುವಿಕೆ ಕಡಿಮೆಯಾಗಿ ಅಂತರ್ಜಲಮಟ್ಟ ಪಾತಾಳಕ್ಕಿಳಿಯುತ್ತಿದೆ. ಈ ಸಮಸ್ಯೆಗೆ ಒಂದಷ್ಟು ಪರಿಹಾರವೇ ಕಟ್ಟ. ಗ್ರಾಮ ಸಭೆಗಳ ಮೂಲಕ ಇಂತಹ ಯೋಜನೆಗಳು ಪ್ರಚಾರ ಪಡೆಯಬೇಕು.

ಈಗಲೇ ಸುಸಂದರ್ಭ
ನೀರಿಗೆ ಭಾರೀ ತತ್ವಾರ ಎದುರಿಸುತ್ತಿರುವ ಕಾರಡ್ಕ ಗ್ರಾಮ ಪಂಚಾಯತ್‌ ಇಂತಹ ಯೋಜನೆಗಳಿಗೆ ಅಂಗೀಕಾರ ನೀಡಬೇಕಾಗಿದೆ. ಹಾಗೆಯೇ ಜನರ ಸಹಕಾರವೂ ಅತೀ ಅಗತ್ಯ. ಊರಿನ ಕೃಷಿಕರು ಮತ್ತೆ ಕೃಷಿ ಚಟುವಟಿಕೆಗಳತ್ತ ವಾಲಬೇಕು. ನೀರು ಪ್ರತಿಯೊಬ್ಬರಿಗೂ ಅನಿವಾರ್ಯ. ಹೀಗಾಗಿ ಎಲ್ಲರೂ ಒಂದಾಗಿ ನೀರನ್ನು ಬಂದಿಸುವ ಕಟ್ಟಗಳ ನಿರ್ಮಾಣಕ್ಕೆ ಕೈಜೋಡಿಸಬೇಕು. ಮುಂದೆ ನೀರಿನ ಸಮಸ್ಯೆ ಎದುರಾಗದಂತೆ ಮಾಡಲು ಈಗಲೇ ಸುಸಂದರ್ಭ. ನಾವು ನೀರಿಲ್ಲದಾಗ ಚಿಂತಿಸುವ ಬದಲು ನೀರನ್ನು ಹಿಡಿದಿಟ್ಟು ನೆಮ್ಮದಿಯ ಜೀವನ ನಡೆಸುವುದು ಸೂಕ್ತ. ಅದಕ್ಕಿರುವ ಒಂದು ಮಾರ್ಗವೇ ಸರಣಿ ಕಟ್ಟಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next