Advertisement

ತುಂಬಿದ ಗೃಹದಲ್ಲಿ ಹಾಡುಗಳ ಬಿಡುಗಡೆ

11:34 AM Feb 23, 2018 | Team Udayavani |

ಮೊದಲೇ ಹೇಳಿಬಿಟ್ಟಿದ್ದರು ಎಚ್‌.ಎಸ್‌. ವೆಂಕಟೇಶಮೂರ್ತಿ. ಅಧ್ಯಕ್ಷರು ಬಿಟ್ಟು, ಇನ್ನೆಲ್ಲರೂ 10 ನಿಮಿಷದೊಳಗೆ ಮಾತು ಮುಗಿಸಿಬಿಡಬೇಕು. ಅದನ್ನು ಕೇಳಿಯೇ ಸುಚಿತ್ರಾ ಆಡಿಟೋರಿಯಂನಲ್ಲಿ ತುಂಬಿ ತುಳುಕುತ್ತಿದ್ದ ಜನರು ಗಾಬರಿಪಟ್ಟರು. ವೇದಿಕೆ ಮೇಲೆ ಅಧ್ಯಕ್ಷರನ್ನು ಬಿಟ್ಟು 10ಕ್ಕೂ ಹೆಚ್ಚು ಜನರಿದ್ದಾರೆ. ಅವರೆಲ್ಲಾ 10 ನಿಮಿಷ ಮಾತಾಡಿದರೂ 100 ನಿಮಿಷ.

Advertisement

ಅದರ ಜೊತೆಗೆ ಅಧ್ಯಕ್ಷರ ಮಾತು ಸೇರಿಸಿದರೆ ಎಷ್ಟು ಹೊತ್ತು ಆಗಬಹುದು ಎಂಬ ಗುಣಾಕಾರ, ಬಾಗಾಕಾರ, ಲೆಕ್ಕಾಚಾರ ಜನರ ತಲೆಯಲ್ಲೇ ನಡೆಯುತ್ತಲೇ ಇತ್ತು. ಆದರೆ, ವೇದಿಕೆಯಲ್ಲಿದ್ದವರು ಅಷ್ಟೇನು ತ್ರಾಸು ಕೊಡಲಿಲ್ಲ. ಎಲ್ಲರೂ ಒಂದೇ ಗಂಟೆಯೊಳಗೆ ಮಾತನಾಡಿ ಮುಗಿಸಿದರು. ಇದಾಗಿದ್ದು “ಹಸಿರು ರಿಬ್ಬನು’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ.

ಹಿರಿಯ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿಗಳು ಸದ್ದಿಲ್ಲದೆ “ಹಸಿರು ರಿಬ್ಬನು’ ಚಿತ್ರವನ್ನು ನಿರ್ದೇಶಿಸಿ ಮುಗಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾದವು. ಉಪಾಸನಾ ಮೋಹನ್‌ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ನಾಡೋಜ ನಿಸಾರ್‌ ಅಹ್ಮದ್‌, ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ, ರಕ್ಷಿತ್‌ ಶೆಟ್ಟಿ, ಪತ್ರಕರ್ತರಾದ ಜೋಗಿ, ಗಿರಿಜಾ ಲೋಕೇಶ್‌, ನಿವೃತ್ತ ಐ.ಪಿ.ಎಸ್‌ ಅಧಿಕಾರಿ ಕೆ.ವಿ.ಆರ್‌. ಠ್ಯಾಗೋರ್‌ ಮುಂತಾದವರು ಬಂದಿದ್ದರು.

ಜೊತೆಗೆ ನಿರ್ಮಾಪಕ ಆರ್‌.ಎಸ್‌. ಕುಮಾರ್‌, ನಟ ನಿಖೀಲ್‌ ಮಂಜು, ಉಪಾಸನಾ ಮೋಹನ್‌ ಮುಂತಾದವರು ಇದ್ದರು. ಇನ್ನು ವೆಂಕಟೇಶಮೂರ್ತಿಯವರ ನೂರಾರು ಅಭಿಮಾನಿಗಳು ಸಭಾಂಗಣದಲ್ಲಿ ತುಂಬಿ, ಕೂರುವುದಿರಲಿ ನಿಲ್ಲುವೂ ಕಷ್ಟವಾಗಿತ್ತು. ಮೊದಲು ಚಿತ್ರ ಹಾಡುಗಳನ್ನು ಮತ್ತು ಟ್ರೇಲರ್‌ ತೋರಿಸಿ, ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು, ಮೈಕು ಹಿಡಿದರು ಎಚ್‌.ಎಸ್‌. ವೆಂಕಟೇಶಮೂರ್ತಿ.

“60 ವರ್ಷವಾದ ಮೇಲೆ ಹೊಸ ಸಾಹಸ ಮಾಡಬಾರದು ಅಂತ ಹೇಳುತ್ತಾರೆ. ನಾನು 70 ವರ್ಷ ಆದ್ಮೇಲೆ ಹೊಸ ಸಾಹಸಕ್ಕೆ ಕೈಹಾಕಿದ್ದೇನೆ. ಈ ಸಾಹಸಕ್ಕೆ ಒತ್ತಾಸೆಯಾಗಿ ನಿಂತವರು ನಿಖೀಲ್‌ ಮಂಜು. ಒಂದು ದಿನ ಕುಮಾರ್‌ ಅವರನ್ನು ಕರೆದುಕೊಂಡು ಬಂದು, ಈ ಚಿತ್ರ ಮಾಡಿ ಎಂದು ಹೇಳಿದರು. ನನಗೆ ಸಿಡಿಲು ಹೊಡೆದಷ್ಟು ಶಾಕ್‌ ಆಯಿತು. ಕೊನೆಗೆ ಒಪ್ಪಿಕೊಂಡೆ. ನನಗೆ ಉಪಾಸನಾ ಮೋಹನ್‌ ಅವರ ಮೇಲೆ ವಿಲಕ್ಷಣವಾದ ಭರವಸೆ ಇದೆ.

Advertisement

ನಾನು 100 ಪರ್ಸೆಂಟ್‌ ಹೇಳಿದರೆ, ಅವರು 110 ಪರ್ಸೆಂಟ್‌ ಮಾಡುತ್ತಾರೆ. ಅಷ್ಟೇ ಅಲ್ಲ, ಚೆನ್ನಾಗಿ ಬರುವವರೆಗೂ ಬೇರೆಯವರನ್ನೂ ಬಿಡುವುದಿಲ್ಲ. ಎಲ್ಲರ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಹಾಡುಗಳು ಬಿಡುಗಡೆಯಗಿದೆ’ ಎಂದರು. ವೆಂಕಟೇಶಮೂರ್ತಿ ಅವರ ಜೊತೆಗೆ ನಾಗಾಭರಣರು ಹಲವು ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ದಾರೆ.

“ಚಿನ್ನಾರಿ ಮುತ್ತ’ ಚಿತ್ರವು 25 ವಾರ ಏನಾದರೂ ಓಡಿದ್ದರೆ ಅದಕ್ಕೆ ಕಾರಣ ಅವರೇ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೂ, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಅವರು ಈಗ ತಾನೇ ಹುಟ್ಟಿದ ನಿರ್ದೇಶಕರಾದರೂ, ಹಲವು ನಿರ್ದೇಶಕರಿಗೆ ಸಾಮಗ್ರಿ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಅವರು ಮಹಾ ನಿರ್ದೇಶಕ ಎಂದರೆ ತಪ್ಪಿಲ್ಲ. ಇವತ್ತು ಅವರ ಅಭಿಮಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿದ್ದಾರೆ.

ಈ ಚಪ್ಪಾಳೆ, ಶಿಳ್ಳೆಗಳು ಟಿಕೆಟ್‌ಗಳಾಗಿ ಪರಿವರ್ತನೆಯಾಗಲಿ’ ಎಂದರು. ಇನ್ನು ಠ್ಯಾಗೋರ್‌ ಅವರು ಮಾತನಾಡಿ, “ಚಿತ್ರವು ಕಣ್ಣೀರು ಬರಸುವ ಜೊತೆಗೆ ಒರೆಸುವಂತಾಗಲೀ’ ಎಂದು ಹಾರೈಸಿದರು. ನಾಡೋಜ ನಿಸಾರ್‌ ಅಹ್ಮದ್‌ ಅವರಿಗೆ ವೆಂಕಟೇಶಮೂರ್ತಿಗಳು ಶಿಷ್ಯರಷ್ಟೇ ಅಲ್ಲ, ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ. ತಮ್ಮಿಬ್ಬರ 50 ವರ್ಷಗಳ ಬಾಂಧವ್ಯವನ್ನು ನಿಸಾರರು ಮೆಲಕು ಹಾಕಿದರು.

“ಮೂರ್ತಿ ಹಳೆಗನ್ನಡವನ್ನು ಚೆನ್ನಾಗಿ ಅರಗಿಸಿಕೊಂಡಿದ್ದಾನೆ. ಹಾಗಾಗಿ ಅವನಿಗೆ ಕಾವ್ಯ ಸಿದ್ಧಿಸಿದೆ. ಅವನ ಕಾವ್ಯಗಳಲ್ಲಿ ಪು.ತಿ.ನ ಮತ್ತು ಕೆ.ಎಸ್‌.ನ ಅವರ ಪ್ರಭಾವವನ್ನು ನೋಡಬೇಕು. ನಾವು ಬೆಳೆಯಬೇಕಾಗಿದ್ದು ಅದೇ ರೀತಿಯಲ್ಲಿ. ಬೇರೆಯವರ ನೆರಳಲ್ಲಿ ಬೆಳೆಯಬೇಕು. ಈ ಚಿತ್ರಕ್ಕೆ ಮೂರ್ತಿ ಕಥೆ, ಗೀತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾನೆ ಎಂದು ಕೇಳಿದೆ. ಅಷ್ಟೊಂದು ಜವಾಬ್ದಾರಿ ಹೇಗೆ ನಿಭಾಯಿಸಿದನೋ ಗೊತ್ತಿಲ್ಲ.

ಇಂಥದ್ದೊಂದು ಆಶ್ಚರ್ಯಕರ ವಿಷಯ ಕೇಳಿಲ್ಲ’ ಎಂದು ವೆಂಕಟೇಶಮೂರ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಿಸಾರ್‌ ಅಹ್ಮದ್‌. ಅಂದು ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಬಿ.ಆರ್‌. ಲಕ್ಷ್ಮಣರಾವ್‌, ಎಂ.ಎನ್‌. ವ್ಯಾಸರಾವ್‌, ದುಂಡಿರಾಜ್‌ ಸೇರಿದಂತೆ ಹಲವರು ಹಾಜರಿದ್ದು, ತಮ್ಮ ಮಿತ್ರನ ಮೊದಲ ನಿರ್ದೇಶನದ ಚಿತ್ರಕ್ಕೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next