Advertisement

ಅಧ್ಯಯನ ತಂಡ ಬಂದಾಗಲೇ ಪರಿಹಾರ ಬಿಡುಗಡೆ

03:30 PM Sep 09, 2022 | Team Udayavani |

ಕಲಬುರಗಿ: ಈ ಹಿಂದೆ ಬರ ಇಲ್ಲವೇ ಅತಿವೃಷ್ಟಿ ಹಾನಿಗೆ ಕೇಂದ್ರ ಅಧ್ಯಯನ ತಂಡ ಬಂದು ಹೋದ ಹಲವು ತಿಂಗಳುಗಳ ಬಳಿಕ ಹಾನಿಗೆ ಪರಿಹಾರ ಬಿಡುಗಡೆಯಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿನ ಅತಿವೃಷ್ಟಿಯಾದ ಬೆಳೆ ಹಾನಿ ವೀಕ್ಷಿಸಲು ಗುರುವಾರ ಕೇಂದ್ರ ಅಧ್ಯಯನ ತಂಡ ಆಗಮಿಸಿದ್ದಾಗಲೇ ರೈತರ ಖಾತೆಗಳಿಗೆ ಪರಿಹಾರದ ಮೊತ್ತ ಜಮೆಯಾಗಿದ್ದು ವಿಶೇಷವಾಗಿತ್ತು.

Advertisement

ಪರಿಹಾರ ಬಿಡುಗಡೆ ಆಗಿರುವುದನ್ನು ಡಿಸಿ ಯಶವಂತ ಗುರುಕರ್‌ ಅಂಕಿ ಅಂಶಗಳೊಂದಿಗೆ ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದರು. ಕಳೆದ ಆಗಸ್ಟ್‌ ತಿಂಗಳ ಮೊದಲ 10ದಿನದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ 1,11,400 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 805ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಆರು ಜನರಿಗೆ ತೊಂದರೆಯಾಗಿದೆ. ಪ್ರಸ್ತುತ ಬೆಳೆ ಹಾನಿ ಪರಿಹಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬುಧವಾರ 33,487 ರೈತರ ಖಾತೆಗೆ 30.79 ಕೋಟಿ ರೂ. ಮೊದಲನೇ ಕಂತಿನ ರೂಪದಲ್ಲಿ ಜಮೆ ಮಾಡಲಾಗಿದೆ ಎಂದು ಡಿಸಿ ವಿವರಣೆ ನೀಡಿದರು.

ಕೇಂದ್ರ ಅಧ್ಯಯನ ತಂಡ: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ|ಕೆ. ಮನೋಹರನ್‌ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಯ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿತು. ಕಳೆದ ಜುಲೈ-ಆಗಸ್ಟ್‌ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಾಳಾದ ಬೆಳೆಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ತಂಡದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್‌.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್‌.ಜಗದೀಶ ಜತೆಯಲ್ಲಿದ್ದರು.

ಆರಂಭದಲ್ಲಿ ಕಲಬುರಗಿ ತಾಲೂಕಿನ ಹೊನ್ನ ಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್‌ ಬಿ. ಅವರ 1.30ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಬೆಳೆ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿ ಪ್ರಮಾಣದ ಮಾಹಿತಿ ಪಡೆದರು.

ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್‌, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಮಾತನಾಡಿ, ಗ್ರಾಮದಲ್ಲಿ 3,291 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ, ಹತ್ತಿ, ಕಡಲೆ ಬೆಳೆಯಲಾಗಿತ್ತು, ಇದರಲ್ಲಿ 50 ಹೆಕ್ಟೇರ್‌ ಹತ್ತಿ ಸೇರಿದಂತೆ ಒಟ್ಟು 680 ಹೆಕ್ಟೇರ್‌ ಪ್ರದೇಶ ಹಾಳಾಗಿದೆ. ಇದರಲ್ಲಿ ಬಹುತೇಕ ತೊಗರಿ ಬೆಳೆ ಹೆಚ್ಚಾಗಿದೆ. 1,481 ರೈತರ ಹೊಲಕ್ಕೆ ನೀರು ಹೊಕ್ಕು ಬೆಳೆ ನಾಶವಾಗಿದೆ. ಇಲ್ಲಿ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 4ರಿಂದ 5ಸಾವಿರ ರೂ. ವ್ಯಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ನಂತರ ಇದೇ ಗ್ರಾಮದ ವಿನೋದ ಬಸನಾಳಕರ್‌ ಅವರ 10ಎಕರೆ ಪ್ರದೇಶದಲ್ಲಿ ಬೆಳೆದ ಹಾನಿಯಾದ ತೊಗರಿ ಬೆಳೆ ವೀಕ್ಷಿಸಲಾಯಿತು. ರೈತ ವಿನೋದ ಬಸನಾಳಕರ್‌ ಮಾತನಾಡಿ, ಶೇ.80ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿ ವಿಸ್ತರಿಬೇಕು ಎಂದು ಮನವಿ ಮಾಡಿದರು.

ನಂತರ ತಂಡವು ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ ಭಾಗಶಃ ಹಾನಿಯಾದ ಮಲ್ಲಿಕಾರ್ಜುನ ಡೂಗನಕರ್‌, ಧರ್ಮಣ್ಣಾ, ಮರೆಮ್ಮ ಗಂಡ ಕಾಳಪ್ಪ ಅವರ ಮನೆ ವೀಕ್ಷಿಸಿತು. ಜೇವರ್ಗಿ ತಾಲೂಕಿನ ಪ್ರಭಾರಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ್‌ ಅವರು ಜೇವರ್ಗಿ ಪಟ್ಟಣದಲ್ಲಿ ನಾಲ್ಕು ಸೇರಿ ತಾಲೂಕಿನಾದ್ಯಂತ 160ಮನೆ ಹಾನಿಗೊಳಗಾಗಿವೆ. ಭಾಗಶಃ ಹಾನಿಯಾದ ಮನೆಗಳಿಗೆ ತಕ್ಷಣ 10ಸಾವಿರ ರೂ. ತದನಂತರ 40 ಸಾವಿರ ರೂ. ಸೇರಿ ಒಟ್ಟು 50 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದರು.

ಕಲಬುರಗಿ ತಹಶೀಲ್ದಾರ್‌ ಪ್ರಕಾಶ ಕುದರಿ ಸೇರಿದಂತೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು. ನಂತರ ತಂಡವು ವಿಜಯಪುರ ಜಿಲ್ಲೆಗೆ ಪ್ರಯಾಣಿಸಿತು. ಇದಕ್ಕೂ ಮುನ್ನ ಕಲಬುರಗಿ ನಗರದ ಐವಾನ-ಎ-ಶಾಹಿ ಅತಿಥಿಗೃಹದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರದ ತಂಡವು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಬೆಳೆ ಹಾನಿ, ಮಾನವ-ಪ್ರಾಣಿ ಹಾನಿ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next