Advertisement

ಕೈದಿಗಳೇ ರಚಿಸಿದ ಕವನ ಸಂಕಲನ ಬಿಡುಗಡೆ

09:39 AM Aug 17, 2019 | Suhan S |

ಧಾರವಾಡ: ಕೈದಿಗಳೇ ರೂಪಿಸಿರುವ ರಾಷ್ಟ್ರೀಯ ಲಾಂಛನ, ಕೈದಿಗಳ ಮಕ್ಕಳಿಗಾಗಿಯೇ ಆರಂಭವಾಗಿರುವ ಶಿಶುವಿಹಾರ ಹಾಗೂ ಕೈದಿಗಳೇ ಬರೆದಿರುವ ‘ಬಂಧನದ ಬದುಕು’ ಕವನ ಸಂಕಲನ ಬಿಡುಗಡೆ ಸಮಾರಂಭ ನಗರದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಜರುಗಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಡಿಸಿ ದೀಪಾ ಚೋಳನ್‌ ಮಾತನಾಡಿ, ವ್ಯಕ್ತಿ ಮಾಡಿದ ತಪ್ಪಿಗೆ ಅವರ ಮಕ್ಕಳಿಗೂ ಸರಿಯಾದ ಸೌಲಭ್ಯಗಳು ಸಿಗದೆ ಶಿಕ್ಷೆ ಅನುಭವಿಸುವಂತಾಗಬಾರದು. ಎಲ್ಲರ ಮಕ್ಕಳಂತೆ ಆ ಮಕ್ಕಳಿಗೂ ಆಟ-ಪಾಠದೊಂದಿಗೆ ನಲಿಯುವ ಆಸೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಕ್ಕಳಿಗೆ ಶಿಶುವಿಹಾರ ಆರಂಭಿಸಿರುವುದು ಉತ್ತಮ ಕಾರ್ಯ. ಶಿಶುವಿಹಾರದಲ್ಲಿ ಎಲ್ಲ ಕಲಿಕಾ ಹಾಗೂ ಮನರಂಜನಾ ಸಾಮಗ್ರಿಗಳು ಸಿಗುವಂತೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಬ್‌ಜೈಲ್ನ ಹಳೇ ಕಟ್ಟಡದ ಕಲ್ಲು, ಕಬ್ಬಿಣ, ಇಟ್ಟಿಗೆ ಬಳಸಿ ಜೈಲು ಆವರಣದಲ್ಲಿ ಕೈದಿಗಳೇ ಅತ್ಯಂತ ಸುಂದರವಾಗಿ, ಆಕರ್ಷಕವಾಗಿ ರಾಷ್ಟ್ರೀಯ ಲಾಂಛನ ನಿರ್ಮಿಸಿದ್ದಾರೆ. ಅದರ ಪಕ್ಕದಲ್ಲಿ ಕರ್ನಾಟಕ ನಕ್ಷೆ ಮತ್ತು ಕಾರಾಗೃಹ ಇಲಾಖೆ ಲಾಂಛನ ಮಾಡಿದ್ದಾರೆ. ಇದು ನೂರಾರು ವರ್ಷ ಉಳಿಯುವ ಐತಿಹಾಸಿಕ ಕಾರ್ಯ. ಇದಕ್ಕೆ ಪ್ರೋತ್ಸಾಹ ನೀಡಿದ ಜೈಲು ಅಧೀಕ್ಷಕರು ಸೇರಿದಂತೆ ಎಲ್ಲ ಅಧಿಕಾರಿಗಳು ಅಭಿನಂದನಾರ್ಹರು ಎಂದರು.

ಕ್ರಿಯಾಶೀಲವಾದ ಸೃಜನಾತ್ಮಕ ಕಾರ್ಯಗಳಲ್ಲಿ ಕೈದಿಗಳು ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಮನ ಪರಿವರ್ತನೆಯಾಗುತ್ತದೆ. ನೋವು, ಸಿಟ್ಟು, ಸೇಡು ಮರೆತು ಅವರು ಉತ್ತಮ ಜೀವನ ನಡೆಸಲು ಮುಂದಾಗುತ್ತಾರೆ. ಇಂತಹ ವಿವಿಧ ಕಾರ್ಯ ಚಟುವಟಿಕೆ ಆಯೋಜಿಸುವ ಮೂಲಕ ಧಾರವಾಡ ಕೇಂದ್ರ ಕಾರಾಗೃಹ ಇತರ ಕಾರಾಗೃಹಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧಿಧೀಶ ಆರ್‌.ಎಸ್‌. ಚಿನ್ನಣ್ಣವರ ಮಾತನಾಡಿ, ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಮಾರ್ಗದರ್ಶನದಿಂದ ಇಲ್ಲಿನ ಬಹುತೇಕ ಕೈದಿಗಳು ಸನ್ನಡತೆ ಹೊಂದಿದ್ದಾರೆ. ಶಿಕ್ಷೆಯ ಅವಧಿ ಪೂರೈಸಿ ಹೊರಬಂದಾಗ ಅವರಿಗೆ ನೆಮ್ಮದಿಯ ಬದುಕು ಸಿಗುವಂತೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಹಿರಿಯ ಕವಿ ನರಸಿಂಹ ಪರಾಂಜಪೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಗಿರಿಧರ ಕುಕನೂರ ಮಾತನಾಡಿದರು. ಜ್ಯೋತಿ ಕೆ. ಪ್ರಾರ್ಥಿಸಿದರು. ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ| ಅನಿತಾ ಆರ್‌. ಸ್ವಾಗತಿಸಿದರು. ಮಾಯಾ ರಾಮನ್‌ ನಿರೂಪಿಸಿ, ವಂದಿಸಿದರು.

Advertisement

ಯಾವುದೋ ಕೆಟ್ಟ ಗಳಿಗೆಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಕಾರಾಗೃಹ ಸೇರುವ ಕೈದಿಗಳು ಸುಧಾರಣೆಯಾಗಿ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ನಿಜವಾದ ಪರಿವರ್ತನೆ. ಜೈಲಿನಿಂದ ಬಿಡುಗಡೆಯಾದ ನಂತರ ಪ್ರತಿಯೊಬ್ಬರೂ ಸನ್ನಡತೆಯಿಂದ ಬದುಕಬೇಕು. ಅಂದಾಗ ಮಾತ್ರ ಸುಧಾರಣಾ ಕಾರ್ಯಕ್ಕೆ ಅರ್ಥ ಬರುತ್ತದೆ. • ದೀಪಾ ಚೋಳನ್‌, ಜಿಲ್ಲಾಧಿಕಾರಿ

ನೋವು-ನಲಿವುಗಳ ಅಕ್ಷರ ರೂಪವೇ ಈ ಕೃತಿ

ಭಾವನೆಗಳನ್ನು ಹಾಡು, ಬರವಣಿಗೆ, ಚಿತ್ರಗಳ ಮೂಲಕ ಸಮರ್ಥವಾಗಿ ವ್ಯಕ್ತಪಡಿಸಬಹುದು. ಜೈಲು ಜೀವನ, ವೈಯಕ್ತಿಕ ಜೀವನ, ಪಶ್ಚಾತ್ತಾಪ, ಬಿಡುಗಡೆ ನಂತರದ ಬದುಕು ಮತ್ತು ಹೊರ ಜಗತ್ತಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅನೇಕ ಕೈದಿಗಳು ತಮ್ಮ ಕವನಗಳ ಮೂಲಕ ವ್ಯಕ್ತಪಡಿಸಿದ್ದಾರೆ. ‘ಬಂಧನದ ಬದುಕು’ ಎಂಬ ಹೆಸರೇ ಹೇಳುವಂತೆ ತಮ್ಮ ಅಂತರಾಳದ ನೋವು-ನಲಿವುಗಳನ್ನು ಅಕ್ಷರದ ರೂಪ ನೀಡಿ ಕವನಗಳಲ್ಲಿ ಕೈದಿಗಳು ಕಟ್ಟಿಕೊಟ್ಟಿದ್ದಾರೆ. ಇದೊಂದು ಉತ್ತಮ ಕವನ ಸಂಕಲನವಾಗಿದೆ. ಮುಂದಿನ ದಿನಗಳಲ್ಲಿ ಬರೆಯುವ ಆಸಕ್ತಿ ಇರುವ ಕೈದಿಗಳಿಗೆ ಹಿರಿಯ ಸಾಹಿತಿ, ಕಥೆಗಾರರಿಂದ ತರಬೇತಿ ಆಯೋಜಿಸಿ ಕಾದಂಬರಿ, ಸಣ್ಣ ಕಥೆ ಬರೆಯಲು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.
ಕಾವ್ಯಕ್ಕೆ ಕ್ರಾಂತಿಯನ್ನು ಹುಟ್ಟು ಹಾಕುವ ಶಕ್ತಿ ಇದೆ. ಕವನಗಳಲ್ಲಿ ತಮ್ಮ ಆಂತರಿಕ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಪ್ರತಿ ಕೈದಿಯು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಉತ್ತಮ ನಾಗರಿಕ ಜೀವನಕ್ಕೆ ಹಾತೊರೆಯುತ್ತಿರುವುದು ವ್ಯಕ್ತವಾಗಿದೆ. ಶಿಕ್ಷೆ ಅನುಭವಿಸುವುದರೊಂದಿಗೆ ಜೀವನ ಶಿಕ್ಷಣ ಪಡೆಯುತ್ತಿರುವುದು ಬದಲಾವಣೆ, ಸುಧಾರಣೆಯ ಸಂಕೇತ. • ಸಿದ್ಧಲಿಂಗ ಪಟ್ಟಣಶೆಟ್ಟಿ, ಹಿರಿಯ ಸಾಹಿತಿ
Advertisement

Udayavani is now on Telegram. Click here to join our channel and stay updated with the latest news.

Next