Advertisement

ಬಾಕಿ ಸಂಭಾವನೆ ಬಿಡುಗಡೆಗೆ ಆಗ್ರಹ

09:47 PM Dec 30, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅರ್ಥಶಾಸ್ತ್ರದ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂಪನ್ಮೂಲ ಉಪನ್ಯಾಸಕರಿಗೆ ಸಂಭಾವನೆ, ಪ್ರಯಾಣ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ನಗರದ ಸೆಂಟ್‌ ಜೋಸೆಫ್ ಕಾಲೇಜು ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

Advertisement

ಆಕ್ರೋಶ: ತರಬೇತಿ ಕಾರ್ಯಾಗಾರದಲ್ಲಿ 28 ಅಧಿವೇಶನಗಳನ್ನು ನಡೆಸಲಾಗಿತ್ತು. ಇಲಾಖೆ ನಿಗದಿಪಡಿಸಿರುವಂತೆ ಒಂದು ಅಧಿವೇಶನಕ್ಕೆ ಸಂಪನ್ಮೂಲ ಉಪನ್ಯಾಸಕರ ಸಂಭಾವನೆ 2100 ರೂ., ಪ್ರಯಾಣ ಭತ್ಯೆ 500 ರೂ.ನಂತೆ ಉಪನ್ಯಾಸಕರಿಗೆ ಇಲಾಖೆ ವತಿಯಿಂದ ಮೊದಲ ಕಂತಿನಲ್ಲಿ 10,780 ರೂ., ಎರಡನೇ ಕಂತಿನಲ್ಲಿ 16,720 ರೂ. ಬಿಡುಗಡೆಗೊಳಿಸಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಉಪನ್ಯಾಸಕರಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರತಿಭಟನಾನಿರತ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ ಘೋಷಣೆ ಕೂಗಿದರು.

30 ಉಪನ್ಯಾಸಕರು ಭಾಗಿ: ಈ ಸಂದರ್ಭದಲ್ಲಿ ಮಾತನಾಡಿದ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮುನಿರೆಡ್ಡಿ, 2018-19 ನೇ ಸಾಲಿನಲ್ಲಿ ಒಟ್ಟು ಏಳು ದಿನಗಳ ಅರ್ಥಶಾಸ್ತ್ರ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿತ್ತು. ಇದರಲ್ಲಿ 30 ಉಪನ್ಯಾಸಕರು ಭಾಗವಹಿಸಿದ್ದರು. ಆದರೆ ಇಲ್ಲಿವರೆಗೆ ಇಲಾಖೆಯಿಂದ ಉಪನ್ಯಾಸಕರಿಗೆ ಸಂಭಾವನೆ, ಪ್ರಯಾಣ ಭತ್ಯೆ ನೀಡಿಲ್ಲ ಎಂದು ಆರೋಪಿಸಿದರು.

ಎಚ್ಚರಿಕೆ: ಕಾರ್ಯಾಗಾರದಲ್ಲಿ ಭಾಗವಹಿಸಿದ ಉಪನ್ಯಾಸಕರಿಗೆ ಹಣ ಬಿಡುಗಡೆಗೊಳಿಸುವಂತೆ ಅನೇಕ ಬಾರಿ ಇಲಾಖೆಯ ಉಪನಿರ್ದೇಶಕರಿಗೆ ಲಿಖೀತ ದೂರು ನೀಡಿ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ಕೂಡಲೇ ಇಲಾಖೆ ತರಬೇತಿಯಲ್ಲಿ ಭಾಗವಹಿಸಿದ ಸಂಪನ್ಮೂಲ ಉಪನ್ಯಾಸಕರಿಗೆ ಸಂಭಾವನೆ, ಪ್ರಯಾಣ ಭತ್ಯೆ ವಿತರಿಸಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಕಾರ್ಯಾಗಾರದಲ್ಲಿ ಉಪನ್ಯಾಸಕರು ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ರವಿಚಂದ್ರ, ಖಜಾಂಚಿ ನಂಜಿರೆಡ್ಡಿ, ಉಪನ್ಯಾಸಕರಾದ ಚಂದ್ರಶೇಖರ್‌, ಸುರೇಶ್‌, ನರಸಿಂಹರೆಡ್ಡಿ, ಶಂಕರಪ್ಪ, ರೆಡ್ಡಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

ಸಮಸ್ಯೆ ಬಗೆಹರಿಸುವ ಭರವಸೆ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್‌ ಮಾತನಾಡಿ, ಅರ್ಥಶಾಸ್ತ್ರ ಕಾರ್ಯಾಗಾರದಲ್ಲಿ ಜಿಲ್ಲೆಯ ಒಟ್ಟು 30 ಉಪನ್ಯಾಸಕರು ಭಾಗವಹಿಸಿದ್ದರು. ಇದರಲ್ಲಿ 11 ಮಂದಿಗೆ ಮಾತ್ರ ಇಲಾಖೆ ಹಣ ಬಿಡುಗಡೆಗೊಳಿಸಿದೆ. ಇನ್ನೂ 19 ಉಪನ್ಯಾಸಕರಿಗೆ 53,276 ರೂ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಪಿಯು ಉಪ ನಿರ್ದೇಶಕ ಸೀತಾರಾಮರೆಡ್ಡಿ ಭೇಟಿ ನೀಡಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next