ಕಲಬುರಗಿ: ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸನ್ನದ್ಧಗೊಂಡಿದ್ದು, ಇನ್ನೇರಡು ದಿನಗಳಲ್ಲಿ ಸ್ಪರ್ಧಾ ಅಭ್ಯರ್ಥಿಗಳ ಪಟ್ಡಿ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾವು ಸಿದ್ದ ಆಗಿದ್ದೇವೆ. ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿಯಾಗಿ ಚುನಾವಣೆಯನ್ನು ಎದುರಿಸಲಿದೆ. ಈಗಾಗಲೇ ಶೇಕಡ 75ರಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಿದ್ದೇವೆ.ಇಂದು ಅಥವಾ ನಾಳೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ ಎಂದರು.
ಇದಾದ ಮೇಲೆ ನಾವು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದೇವೆ. ಚುನಾವಣಾ ಪ್ರಚಾರಕ್ಕೆ 5 ವಿಭಾಗ ಮಾಡಿ ಐವರು ಮುಖ್ಯಸ್ಥರನ್ನು ನೇಮಕ ಮಾಡುತ್ತೇವೆ. ಈ ಐವರು ಮುಖ್ಯಸ್ಥರು ಎಲ್ಲೆಡೆ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
ನಂತರ ಮಾತಾನಾಡಿದ ಅವರು ಬಿಜೆಪಿ-ಶಿವಸೇನೆ ಸರ್ಕಾರ ವೈಫಲ್ಯತೆ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಬಡವರು, ರೈತರು, ದಲಿತರ ವಿಚಾರದಲ್ಲಿ ಧೋರಣೆ ಹೊಂದಿರುವ ಸರ್ಕಾರದ ವಿರುದ್ಧ ಜನ ರೊಚ್ಚಿ ಗೆದ್ದಿದ್ದಾರೆ. ಮತದಾರರು ಈ ಸಲ ಬಿಜೆಪಿ-ಶಿವಸೇನೆಗೆ ಮತ ಕೊಡಲ್ಲ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ವಿಚಾರ ರಾಜ್ಯದ ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ಲೀಡರ್ ಎಲ್ಲರೂ ಸೇರಿ ಅಭ್ಯರ್ಥಿಗಳ ಆಯ್ಕೆ ಮಾಡ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದರು.