Advertisement

ರಿಲ್ಯಾಕ್ಸ್ ಮೂಡ್ ನಲ್ಲಿ ಸತ್ಯ

09:39 AM Nov 09, 2019 | mahesh |

“ಇಲ್ಲಿಯವರೆಗೆ ಸತ್ಯ ಅಂಥ ಹೆಸರಿಟ್ಟುಕೊಂಡು ಬಂದ ಯಾವ ಸಿನಿಮಾಗಳೂ ಸೋತಿಲ್ಲ. ತೆಲುಗಿನಲ್ಲಿ ರಾಮ್‌ ಗೋಪಾಲ್‌ ವರ್ಮ ಅವರಿಂದ ಹಿಡಿದು ಕನ್ನಡದಲ್ಲಿ ಉಪೇಂದ್ರ, ಶಿವಣ್ಣ ಅವರವರೆಗೆ ಸತ್ಯ ಅಂಥ ಹೆಸರನ್ನು ಇಟ್ಟುಕೊಂಡು ಬಂದಿರುವ ಎಲ್ಲಾ ಸಿನಿಮಾಗಳು, ಪಾತ್ರಗಳು ಜನರಿಗೆ ಇಷ್ಟವಾಗಿದೆ. ಹಾಗಾಗಿ, ನಮ್ಮ ಸಿನಿಮಾನೂ ಜನಕ್ಕೆ ಇಷ್ಟವಾಗುತ್ತದೆ ಅನ್ನೋ ನಂಬಿಕೆ ಇದೆ’ ಹೀಗೆ ಸತ್ಯ ಅನ್ನೊ ಹೆಸರಿಟ್ಟುಕೊಂಡ ಚಿತ್ರಗಳು ಮತ್ತು ಪಾತ್ರಗಳ ಬಗ್ಗೆ ಮಾತಿಗಿಳಿದವರು ನಟ ಪ್ರಭು ಮುಂಡ್ಕೂರ್‌.

Advertisement

ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ “ರಿಲ್ಯಾಕ್ಸ್‌ ಸತ್ಯ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಅನ್ನು ಅದ್ಧೂರಿಯಾಗಿ ಹೊರತಂದಿದೆ. ಇದೇ ವೇಳೆ “ರಿಲ್ಯಾಕ್ಸ್‌ ಸತ್ಯ’ನ ಬಗ್ಗೆ ತುಂಬಾ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಮಾತಿಗಿಳಿದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು. “ಚಿತ್ರದಲ್ಲಿ ನಾಯಕನ ಹೆಸರು ಸತ್ಯ ಅಂಥ. ತುಂಬಾ ಅಗ್ರೆಸಿವ್‌ ಆಗಿರುವ ನಾಯಕ ಯಾವಾಗಲೂ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಇರಬೇಕಾದ್ರೆ, ತನಗೇ ತಾನು “ರಿಲ್ಯಾಕ್ಸ್‌ ಸತ್ಯ’ ಅಂಥ ಹೇಳಿಕೊಳ್ಳುತ್ತಿರುತ್ತಾನೆ. ಅದು ಏಕೆ? ಹೇಗೆ? ಅನ್ನೋದನ್ನ ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ನಿರ್ದೇಶಕ ನವೀನ್‌ ರೆಡ್ಡಿ. ಜಿ. ಈ ಹಿಂದೆ ಅನೀಶ್‌ ತೇಜೇಶ್ವರ್‌ ಅಭಿನಯದ “ಅಕಿರ’ ಚಿತ್ರವನ್ನು ನಿರ್ದೇಶಿಸಿದ್ದ ನವೀನ್‌ ರೆಡ್ಡಿ. ಜಿ “ರಿಲ್ಯಾಕ್ಸ್‌ ಸತ್ಯ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ರೆಡ್‌ ಡ್ರ್ಯಾಗನ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಮೋಹನ್‌ ಕುಮಾರ್‌ ಹೆಚ್‌.ಆರ್‌, ಜಿ. ಮೋಹನ್‌ ರೆಡ್ಡಿ, ಚೇತನ್‌ ಆರ್‌.ಬಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಆನಂದ್‌ ರಾಜಾವಿಕ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಯೋಗಿ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ ಕಾರ್ಯವಿದೆ. ಹೆಸರೇ ಹೇಳುವಂತೆ, “ರಿಲ್ಯಾಕ್ಸ್‌ ಸತ್ಯ’ ಚಿತ್ರ “ಸತ್ಯ’ ಎನ್ನುವ ಪಾತ್ರದ ಸುತ್ತ ನಡೆಯುವಂಥದ್ದು. ಚಿತ್ರದಲ್ಲಿ “ಸತ್ಯ’ನ ಪಾತ್ರದಲ್ಲಿ ನಾಯಕ ನಟ ಪ್ರಭು ಮುಂಡ್ಕೂರ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುವ ಪ್ರಭು, “ಇದೊಂದು ಹೊಸ ಅನುಭವ ನೀಡಿದ ಚಿತ್ರ. ತುಂಬ ವಿಭಿನ್ನ ಪಾತ್ರ ಈ ಚಿತ್ರದಲ್ಲಿದೆ. ನೋಡುಗರಿಗೆ ಖಂಡಿತ ಇಷ್ಟವಾಗುತ್ತದೆ’ ಎನ್ನುತ್ತಾರೆ ಪ್ರಭು.

“ರಿಲ್ಯಾಕ್ಸ್‌ ಸತ್ಯ’ ಚಿತ್ರದಲ್ಲಿ ನಾಯಕಿಯಾಗಿ ಮಾನ್ವಿತಾ ಕಾಮತ್‌, “ಮಾಯಾ’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಉಗ್ರಂ ಮಂಜು, ಕಡ್ಡಿಪುಡಿ ಚಂದ್ರು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸಸ್ಪೆನ್ಸ್‌-ಥ್ರಿಲ್ಲರ್‌ ಜೊತೆಗೆ ನವಿರಾದ ಕಾಮಿಡಿ ಕೂಡ ಚಿತ್ರದಲ್ಲಿದೆ. ಇಂಥದ್ದೇ ಜಾನರ್‌ ಸಿನಿಮಾ ಮಾಡಬೇಕು ಅಂಥ ಈ ಸಿನಿಮಾ ಮಾಡಿಲ್ಲ. ನಮ್ಮ ಪ್ರಕಾರ ಇದು ನಿರ್ದಿಷ್ಟವಾಗಿ ಯಾವುದೋ ಒಂದು ಜಾನರ್‌ಗೆ ಸೇರುವ ಚಿತ್ರವಲ್ಲ. ಇದೇ ಒಂದು ಹೊಸ ಜಾನರ್‌ ಚಿತ್ರ’ ಎನ್ನುತ್ತದೆ ಚಿತ್ರತಂಡ. ಇನ್ನು “ರಿಲ್ಯಾಕ್ಸ್‌ ಸತ್ಯ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, “ಚಿತ್ರದ ಟ್ರೇಲರ್‌ ನೋಡಿದ್ರೆ, ಭರವಸೆದಾಯಕವಾಗಿದೆ. ಹೊಸಬರ ಪ್ರಯತ್ನ ಚೆನ್ನಾಗಿ ಇರುವಂತೆ ಕಾಣುತ್ತದೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟರಾದ ಅನೀಶ್‌ ತೇಜೇಶ್ವರ್‌, ಸೂರಜ್‌ ಗೌಡ, ನಟಿ ಮೇಘನಾ ಗಾಂವ್ಕರ್‌, ಕೃಷಿ ತಾಪಂಡ, ನಿರ್ದೇಶಕ ಎ.ಪಿ ಅರ್ಜುನ್‌ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು, ರಾಜಕೀಯ ಮುಖಂಡರು “ರಿಲ್ಯಾಕ್ಸ್‌ ಸತ್ಯ’ನ ಟ್ರೇಲರ್‌ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next