ಮಂಗಳೂರು: ನಗರದ ಕೇಂದ್ರ ಭಾಗದಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂ ವನ್ನು ಇಂದು ಮಧ್ಯಾಹ್ನ ಮೂರರಿಂದ ಸಂಜೆ ಆರರವರೆಗೆ ಸಡಿಲಿಸಿರುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ಧಾರೆ.
ನಗರದ ಸರ್ಕಿಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಜನರ ಮನವಿಯ ಮೇರೆಗೆ ಇಂದು ಮೂರು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗುವುದು. ರವಿವಾರ ರಾತ್ರಿ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದೆ. ಸೋಮವಾರದಿಂದ ಸಂಪೂರ್ಣ ಕರ್ಫ್ಯೂ ತೆರವು ಮಾಡಲಾಗುತ್ತದೆ ಎಂದು ಹೇಳಿದರು.
ಸೋಮವಾರದಿಂದ ಮಂಗಳೂರು ನಗರದಲ್ಲಿ ಕರ್ಫ್ಯೂ ತೆರವು ಮಾಡಿದರೂ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಆದರೆ ಕ್ರಿಸ್ ಮಸ್ ಸೇರಿ ಯಾವುದೇ ಆಚರಣೆಗೆ ಅಡ್ಡಿಯಾಗುವುದಿಲ್ಲ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.
ಮಂಗಳೂರು ಹಿಂಸಾಚಾರ ಘಟನೆಯಿಂದ ನೋವಾಗಿದೆ ಎಂದ ಸಿಎಂ ಯಡಿಯೂರಪ್ಪ, ಪೊಲೀಸ್ ಗುಂಡೇಟಿಗೆ ಬಲಿಯಾದವರ ಕುಟುಂಬಿಕರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಕೇರಳ ಮೂಲದ ಪತ್ರಕರ್ತರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಎಸ್ ವೈ, ಕೇರಳದ ಪತ್ರಕರ್ತರು ಯಾವುದೇ ದಾಖಲೆಗಳಿಲ್ಲದೆ ಆಗಮಿಸಿದ್ದರು. ಈ ಪ್ರಕರಣದ ಕುರಿತು ಸಮರ್ಪಕ ತನಿಖೆಗೆ ಸೂಚಿಸಿದ್ದೇವೆ ಎಂದರು.