Advertisement
ಬ್ಯಾಂಕ್ ಖಾತೆಗೆ ವೇತನ ಪಾವತಿ ಹಾಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸಿ ನೋಂದಣಿ ಮಾಡಿಕೊಂಡಿದ್ದ 45 ಸಾವಿರ ಪೌರ ಕಾರ್ಮಿಕರ ಪೈಕಿ ಅಸಲಿ ಪೌರ ಕಾರ್ಮಿಕರು ಕೇವಲ 17,400 ಎಂಬ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಒಂದೊಮ್ಮೆ ಈ ಅಕ್ರಮ ಬಯಲಾಗದಿದ್ದರೆ 27,600 ನಕಲಿ ಪೌರ ಕಾರ್ಮಿಕರು ಮಾಸಿಕ 17 ಸಾವಿರ ರೂ. ನಂತೆ ಆರು ತಿಂಗಳ ವೇತನದ ರೂಪದಲ್ಲಿ ಸುಮಾರು 200 ಕೋಟಿ ರೂ. ಪಾಲಿಕೆಯ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು!
Related Articles
Advertisement
45 ಸಾವಿರ ಮಂದಿ ನೋಂದಣಿ: ಪೌರಕಾರ್ಮಿಕರ ಹಾಜರಾತಿಯಲ್ಲಿ ಪಾರದರ್ಶಕತೆ ತರಲು ಆರಂಭಿಸಿದ ಬಯೋಮೆಟ್ರಿಕ್ ನೋಂದಣಿ ವ್ಯವಸ್ಥೆ ಅಡಿಯಲ್ಲಿ, ಪಾಲಿಕೆಯ ಎಂಟೂ ವಲಯಗಳಿಂದ ಒಟ್ಟು 45 ಸಾವಿರ ಮಂದಿ ಪಟ್ಟಿಗೆ ಹೆಸರು ಸೇರಿಸಿದ್ದರು.
ಪೌರಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ನೇರವಾಗಿ ಬ್ಯಾಂಕ್ ಖಾತೆಗೆ ವೇತನ ಜಮೆ ಮಾಡುವ ವ್ಯವಸ್ಥೆ ಜಾರಿಗೊಳಿಸಿದ ನಂತರ ಪೌರಕಾರ್ಮಿಕರ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು. ಅದನ್ನು ಲಾಭವಾಗಿಸಿಕೊಂಡಿರುವ ಕೆಲ ಗುತ್ತಿಗೆದಾರರು ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನ ಕೆಲವರಿಗೆ ಕಾಯಂ ಉದ್ಯೋಗ ಕೊಡಿಸುವ ಭರವಸೆ ನೀಡಿ,
ಒಬ್ಬೊಬ್ಬರಿಂದ 30ರಿಂದ 50 ಸಾವಿರ ರೂ. ಲಂಚ ಪಡೆದಿದ್ದರು. ನಂತರದ ಬೆಳವಣಿಗೆಯಲ್ಲಿ, ಹೀಗೆ ಲಂಚ ನೀಡಿ ಬಂದ ಪೌರಕಾರ್ಮಿಕರನ್ನು ಪಾಲಿಕೆ ಅಧಿಕಾರಿಗಳು ಕೆಲಸದಿಂದ ತೆಗೆದಿದ್ದರು. ಕೆಲಸ ಕಳೆದುಕೊಂಡ ಕಾರ್ಮಿಕರು, ತಮಗಾದ ವಂಚನೆ ಕುರಿತು ಹಿರಿಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಹಾಜರಿ ನೀಡಲು ಕಾರಲ್ಲಿ ಬರ್ತಾರೆ: ನಿತ್ಯ ಕೆಲಸಕ್ಕೆ ಹಾಜರಾಗುವ ಪೌರಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಬಯೋಮೆಟ್ರಿಕ್ ಹಾಜರಾತಿ ನೀಡಬೇಕು. ಆದರೆ, ಕೆಲವೊಂದು ವಾರ್ಡ್‌ಗಳಲ್ಲಿ ಕಾರ್ಪೊರೇಟರ್‌ಗಳ ಸಂಬಂಧಿಗಳು, ಬೆಂಬಲಿಗರು ಹಾಗೂ ಅವರ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರು, ಬೈಕ್‌ಗಳಲ್ಲಿ ಬಂದು ಹಾಜರಾತಿ ನೀಡುತ್ತಿದ್ದ ಅಂಶ ಕೂಡ ಹೊರಬಿದ್ದಿದೆ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಿಎಫ್ ಪಾವತಿಸಲು ದಾಖಲೆಯಿಲ್ಲ: ಅಕ್ರಮವಾಗಿ ಪಟ್ಟಿಗೆ ಸೇರಿಸಲಾಗಿದ್ದ ಪಾಲಿಕೆ ಸದಸ್ಯರು, ಗುತ್ತಿಗೆದಾರರ ಸಂಬಂಧಿಕರ ಹೆಸರುಗಳನ್ನು ಪೌರಕಾರ್ಮಿಕರ ಪಟ್ಟಿಯಿಂದ ಕಿತ್ತೆಸೆದಿರುವ ಪಾಲಿಕೆ ಅಧಿಕಾರಿಗಳು, ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡಿರುವ 17,400 ಅಸಲಿ ಪೌರಕಾರ್ಮಿಕರನ್ನು ಗುರುತಿಸಿದ್ದಾರೆ.
ಈ ಅಸಲಿ ಪಟ್ಟಿಯಲ್ಲಿರುವ 2ರಿಂದ 3 ಸಾವಿರ ಪೌರಕಾರ್ಮಿಕರ ಈ ಹಿಂದಿನ ಭವಿಷ್ಯನಿಧಿ (ಪಿಎಫ್) ಹಾಗೂ ಇಎಸ್‌ಐ ಖಾತೆಗೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಅಷ್ಟೂ ಕಾರ್ಮಿಕರಿಗೆ ಸಂಬಂಧಿಸಿದ ಪಿಎಫ್ ಹಣವನ್ನು ಪಾಲಿಕೆ ಪಾವತಿಸಿಲ್ಲ. ದಾಖಲೆ ಇರುವ ಕಾರ್ಮಿಕರ ಖಾತೆಗಳಿಗೆ ಪ್ರತಿ ತಿಂಗಳು ಪಿಎಫ್ ಹಣ ಪಾವತಿಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಕ್ರಮ ನಡೆಯುವುದು ಹೇಗೆ?: ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ತಮ್ಮ, ಸಂಬಂಧಿಕರು, ಬೆಂಬಲಿಗರು ಅಥವಾ ಬೇಕಾದವರನ್ನೇ “ಪೌರಕಾರ್ಮಿಕರು’ ಎಂದು ನೇಮಿಸಿಕೊಳ್ಳುತ್ತಾರೆ. ಸ್ಥಳೀಯ ಅಧಿಕಾರಿಗಳು ಸಹ ಅವರೊಂದಿಗೆ ಶಾಮೀಲಾಗುತ್ತಾರೆ. ಹೀಗಾಗಿ ಪ್ರತಿ ದಿನ ಬಯೋಮೆಟ್ರಿಕ್ ಹಾಜರಾತಿ ನೀಡುವಾಗ ಮಾತ್ರ ಈ “ಪೌರಕಾರ್ಮಿಕ ಸಂಬಂಧಿಕರು’ ಕಾಣಿಸಿಕೊಳ್ಳುತ್ತಾರೆ.
ಇದರೊಂದಿಗೆ ಪ್ರತಿ ತಿಂಗಳು ಈ ಅಕ್ರಮ ಕಾರ್ಮಿಕರ ಖಾತೆಗೆ 17 ಸಾವಿರ ರೂ. ಜಮೆಯಾಗುತ್ತದೆ. ಅದರಂತೆ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 20ರಿಂದ 30 ಮಂದಿ ಬೋಗಸ್ ಪೌರಕಾರ್ಮಿಕರಿದ್ದು, ಪಾಲಿಕೆಗೆ ಪ್ರತಿ ತಿಂಗಳು ಸುಮಾರು 4ರಿಂದ 5 ಲಕ್ಷ ರೂ. ನಷ್ಟವಾಗುತ್ತಿದೆ ಎಂದು ಪಾಲಿಕೆ ಘನ ತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಗುತ್ತಿಗೆ ಪೌರಕಾರ್ಮಿಕರ ಹಾಜರಾತಿ ಹಾಗೂ ವೇತನ ಪಾವತಿಯಲ್ಲಿ ಪಾರದರ್ಶಕತೆ ತರಲು ಬಯೋಮೆಟ್ರಿಕ್ ಹಾಜರಾತಿ ಜಾರಿಗೆ ತಂದು, ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಜಮೆ ಮಾಡಲಾಗುತ್ತಿದೆ. ಆದರೆ, ಕೆಲವೆಡೆ ಬಯೋಮೆಟ್ರಿಕ್ ನೋಂದಣಿ ವ್ಯವಸ್ಥೆಯ ದುರುಪಯೋಗವಾಗಿದೆ. ಅಕ್ರಮವಾಗಿ ಸೇರ್ಪಡೆಯಾದ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಜತೆಗೆ ಅಂತಿಮ ಪಟ್ಟಿಯಲ್ಲಿರುವ 2ರಿಂದ 3 ಸಾವಿರ ಕಾರ್ಮಿಕರ ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಇಎಸ್‌ಐ ಹಾಗೂ ಪಿಎಫ್ ಪಾವತಿಸಲು ಸಾಧ್ಯವಾಗುತ್ತಿಲ್ಲ.-ಸಫ್ರಾಜ್ ಖಾನ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ * ವೆಂ.ಸುನೀಲ್‌ಕುಮಾರ್