Advertisement

ಸಂಬಂಧಗಳು ಕೆಟ್ಟರೂ ಚಿಂತೆಯಿಲ್ಲ…ಇದು ಪ್ರಾಮಾಣಿಕತೆಯ ಬೆಳಕು

02:33 PM Jan 08, 2022 | Team Udayavani |

ಅವತ್ತು ಚಿಕ್ಕಪ್ಪನನ ಮಗನಿಗೆ ನಾನೇ ಮೊದಲು ಹೊಡೆದಿದ್ದೆ. ಅಪ್ಪ ಕೆಂಪು ಕಣ್ಣು ಬಿಡುತ್ತ “ಮೊದಲು ಹೊಡೆದದ್ದು ಯಾರು ಪ್ರಾಮಾಣಿಕವಾಗಿ ಹೇಳಿ” ಎಂದಾಗ ಭಯಬಿದ್ದು ಸತ್ಯವನ್ನು ಹೇಳಿದ್ದೆ. ಬಾಲ್ಯದಲ್ಲಿ ಈ ಪ್ರಾಮಾಣಿಕ ಎಂಬ ಪದವೇ ಒಂದು ಭಯದ ನೆರಳಿನ ಹಾಗೇ ಇತ್ತು. ನಮ್ಮ ಮುಗ್ಧತೆಯನ್ನು ಕಾಪಾಡುವುದೇ ಈ ಪ್ರಾಮಾಣಿಕತೆ. ಪುರಾಣ ಕಥೆಗಳಲ್ಲಿ ಕೇಳಿದ ಪ್ರಾಮಾಣಿಕತೆ, ವಾರಕ್ಕೊಮ್ಮೆ ಕನ್ನಡ ಮೇಷ್ಟ್ರು ಹೇಳುತ್ತಿದ್ದ ನೀತಿ ಕಥೆಗಳಲ್ಲಿ ಕಂಡ ಪ್ರಾಮಾಣಿಕತೆ ನಮ್ಮ ಒಳಗೆ ಬೆಳಕು ಹರಿಸುತ್ತಿತ್ತು.

Advertisement

ಅಪ್ಪ ನನ್ನ ಪ್ರಾಮಾಣಿಕತೆಗೆ ಮೆಚ್ಚಿ, ಹೆಚ್ಚು ಗದರದೆ ಸುಮ್ಮನಾದ. ಇಲ್ಲಿ ಅಪ್ಪನ ಕೋಪದಿಂದ ನನ್ನನ್ನು ಕಾಪಾಡಿದ್ದು ಇದೇ ಪ್ರಾಮಾಣಿಕತೆ. ಇದಕ್ಕೆ ವಿಪರ್ಯಾಸವಾಗಿ ಒಂದನೇ ಕ್ಲಾಸ್ ದಾಟಿದ್ದರೂ ಅರ್ಧ ಟಿಕೇಟು ಮಾಡುತ್ತಾರೆಂಬ ಕಾರಣಕ್ಕೆ ಅಮ್ಮ ‘ಕಂಡಕ್ಟರ್ ಕೇಳಿದರೆ ಇನ್ನೂ ಅಂಗನವಾಡಿ ಅಂತ ಹೇಳು’ ಅನ್ನುತ್ತಿದ್ದಳು. ಅಲ್ಲಿಗೆ ಬಡತನ ಪ್ರಾಮಾಣಿಕತೆಯನ್ನು ಕೊಲ್ಲುತ್ತದೆ ಎಂದಾಯಿತು.

ಈ ಪ್ರಾಮಾಣಿಕತೆಯ ಕಥೆಗಳಲ್ಲಿ ಏನೋ ವಿಶೇಷ ಶಕ್ತಿ. ಪ್ರಾಮಾಣಿಕತೆಯಿಂದಾಗಿಯೆ ಚಿನ್ನದ ಕೊಡಲಿ ಪಡೆದವ, ದೇವರು ಇರದ ಜಾಗ ಸಿಗದೆ ಬಾಳೆಹಣ್ಣು ತಿನ್ನದೇ ಬರುವ ಕನಕ, ಹರಿ ಕಾಯ್ವ ಎಂಬ ಪ್ರಹ್ಲಾದನ ಪ್ರಾಮಾಣಿಕ ಭಕ್ತಿ, ಬಿರಬಲ್ಲನ ಕಥೆಗಳಲ್ಲಿ ಸಿಗುವ ಪ್ರಾಮಾಣಿಕತೆ, ಕರ್ಣನ ಅಪ್ರಾಮಾಣಿಕತೆ ತಂದ ಕುತ್ತು ಇವೆಲ್ಲ ಕಥೆಗಳು ನಮ್ಮೊಳಗೆ ಇಳಿಯುತ್ತಾ ಬೆಳಕನ್ನು ಹೊತ್ತಿಸುತ್ತವೆ. ನಮ್ಮ ಪಠ್ಯಳಲ್ಲಿ ಸಿಕ್ಕ ಪ್ರಾಮಾಣಿಕತೆಯ ಕಥೆಗಳು ಬಾಲ್ಯದಲ್ಲಿ ಸಾಕಷ್ಟು ಪ್ರಭಾವ ಬೀರಿ, ನಾನಂತೂ ಪ್ರಾಮಾಣಿಕವಾಗಿ ಬುದುಕುತ್ತೇನೆ ಎಂಬ ನಿರ್ಧಾರಕ್ಕೂ ಬಂದಿರುತ್ತೇವೆ. ಬದುಕಿಗೆ ಕಾಲಿಟ್ಟಾಗ ಯಾವುದು ಪ್ರಾಮಾಣಿಕತೆ? ಯಾವುದು ಅಪ್ರಮಾಣಿಕತೆ? ಎಂಬ ಗೊಂದಲ ನಮ್ಮನ್ನು ಆವರಿಸಿಕೊಳ್ಳುತ್ತದೆ. ಒಂದು ಕೆಲಸ ದೊರಕಿಸಿಕೊಳ್ಳುವಲ್ಲೋ ಇನ್ನಾವುದೋ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವಲ್ಲೋ ಪ್ರಾಮಾಣಿಕವಾಗಿ ಸುಳ್ಳು ಹೇಳುತ್ತೇವೆ. ಪ್ರಾಮಾಣಿಕತೆ ಅವರವರ ನಿಷ್ಠೆಗೆ ಅನುಗುಣವಾಗಿ ಬದಲಾಗುವುದೂ ಇದೆ. ಅವನು ವ್ಯವಹಾರದಲ್ಲಿ ಪ್ರಮಾಣಿಕನಾಗಿದ್ದರೆ ಸಾಕು, ಅವನು ಕೇವಲ ನನ್ನ ಜೊತೆ ಪ್ರಾಮಾಣಿಕನಾಗಿದ್ದರೆ ಸಾಕು ಎಂಬ ನಿಲುವುಗಳಿವೆ.

ಸಂಬಂಧ ಮತ್ತು ಪ್ರಾಮಾಣಿಕತೆ ಇವೆರಡೂ ಪರಸ್ಪರ ಒಂದಕ್ಕೊಂದು ಅಂಟಿಕೊಂಡಂತೆ ಭಾಸವಾಗುತ್ತದೆ. ಇವತ್ತು ನಾವು ಪ್ರಾಮಾಣಿಕವಾಗಿ ಬದುಕಲಾಗದ ಪ್ರಪಂಚದಲ್ಲಿದ್ದೇವೆ ಎಂಬುದು ಎಷ್ಟು ನಿಜವೋ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕತೆಯೂ ಬೇಕು ಎಂಬುದು ಅಷ್ಟೇ ಸತ್ಯ. ಬಂಧು, ಮಿತ್ರ, ಗುರು, ಆಫೀಸು ಬಾಸು, ಗಂಡ   ಹೆಂಡತಿ ಎಲ್ಲ ಸಂಬಂಧಗಳನ್ನು ಉಳಿಸಿಕೊಳ್ಳುವಾಗ ಪ್ರಾಮಾಣಿಕತೆಯೇ ನಂಬಿಕೆಯ ಸೂತ್ರ. ಒಬ್ಬ ಅಪ್ರಾಮಾಣಿಕನ ಸುದ್ದಿಗೆ ನಾವು ಹೋಗುವುದೇ ಇಲ್ಲ.

ನೀನು ಪ್ರಾಮಾಣಿಕವಾಗಿಯೂ ನನ್ನನ್ನು ನಂಬುತ್ತೀಯಾ? ಎಂಬ ಪ್ರಶ್ನೆಗೆ ಅವರ ಜೊತೆಗಿನ ಸಂಬಂಧವನ್ನು ಉಳಿಸಿಕೊಳ್ಳಲೋಸ್ಕರ ಹೌದು ಎಂದುಬಿಡುತ್ತೇವೆ. ಅಪ್ರಿಯವಾದ ಸತ್ಯವನ್ನು ಆಡಬಾರದು ಎಂಬ ಮಾತಿಗೆ ನಾವೆಲ್ಲರೂ ಬದ್ಧರು. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಒಮ್ಮೊಮ್ಮೆ ಎಲ್ಲರೂ ಅಪ್ರಾಮಾಣಿಕರೇ!

Advertisement

ಪ್ರಾಮಾಣಿಕವಾಗಿ ನಂಬುತ್ತೇನೆ ಎಂಬುದೇ ಸಂಬಂಧವನ್ನು ಉಳಿಸುತ್ತದೆಯೇ ಹೊರತೂ ಈ ಪ್ರಾಮಾಣಿಕತೆಯನ್ನು ಪ್ರಮಾಣೀಕರಿಸಿ ನೋಡುವುದರಿಂದಲ್ಲ. ಸಂದರ್ಭಗಳು ಪ್ರಾಮಾಣಿಕತೆಯ ರೂಪವನ್ನೂ ಅಗತ್ಯವನ್ನೂ ಏಕಕಾಲದಲ್ಲಿ ಬದಲಾಯಿಸುತ್ತಲೇ ಇರುತ್ತವೆ. ಒಂದು ಅಪ್ರಮಾಣಿಕತೆ ಅಪಾಯವನ್ನು ತಪ್ಪಿಸುತ್ತದೆಯೆಂದಾದರೆ ಅದು ಒಳ್ಳೆಯದೇ. ಇದಕ್ಕೆ ವಿರುದ್ಧವಾಗಿ ಪ್ರಾಮಾಣಿಕತೆಯಿಂದ ಒಳ್ಳೆಯದೇ ಆಗುವುದಿದ್ದರೆ ಸಂಬಂಧಗಳು ಕೆಟ್ಟರೂ ಚಿಂತೆಯಿಲ್ಲ ಪ್ರಾಮಾಣಿಕನಾಗಿರುವುದೇ ಒಳ್ಳೆಯದು.

ವಿಷ್ಣು ಭಟ್ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next