Advertisement

ಇಡ್ಲಿ-ವಡೆಯ ಅವಿನಾಭಾವ

06:00 AM Sep 02, 2018 | |

ಅಮ್ಮನಿಗಂತೂ ಬೆಳಿಗ್ಗೆ ತಿಂಡಿಗೇನು ಮಾಡಲಿ, ಮಧ್ಯಾಹ್ನ ಊಟಕ್ಕೆ ಏನು ಮಾಡುವುದು ಎಂಬ ಚಿಂತೆ. ಮಕ್ಕಳನ್ನು ಕೇಳಿದರೆ, ಅವರಿಗೆ ಬೆಳಿಗ್ಗೆ ತಟ್ಟೆಯ ಮುಂದೆ ಕುಳಿತಾಗಲೇ ತಿನ್ನುವ ತಿಂಡಿ ಏನು ಬೇಕೆಂದು ಹೊಳೆಯುವುದು. ಅಮ್ಮನಿಗೆ ನಿದ್ರೆಯಲ್ಲೂ ನಾಳೆಯ ತಿಂಡಿಯ ಕನಸು. ಆ ಎಲ್ಲ ಚಿಂತೆಯ ದೊಡ್ಡ ಪರಿಹಾರವೆಂದರೆ ಇಡ್ಲಿ !

Advertisement

ಇಡ್ಲಿ ಮಾಡುವುದೆಂದರೆ ಅಮ್ಮನಿಗೆ ಉದ್ದನ್ನು ಒಂದೆರಡು ತಾಸು ನೆನೆಸಿ ಗ್ರೈಂಡರ್‌ ಎಂಬ ಸ್ನೇಹಿತನಲ್ಲಿ ನೀಡಿದರೆ ಅವನು ರುಬ್ಬಿದ ತತ್‌ಕ್ಷಣ ತೆಗೆದು ಪಾತ್ರೆಗೆ ಹಾಕಿ, ಇಡ್ಲಿ ರವೆಯನ್ನು ಮಾಡಿ ಅದಕ್ಕೆ ಹಾಕಿ ಮಲಗಿಕೊಂಡರೆ ಅಮ್ಮನಿಗೆ ಸುಖ ನಿದ್ರೆ. ಬೆಳಿಗ್ಗೆಯೆದ್ದ ಕೂಡಲೇ ಇಡ್ಲಿ ಪಾತ್ರೆಯಲ್ಲಿ ಬೇಯಿಸಲಿಟ್ಟು ಆರಾಮಾಗಿ ಉಳಿದೆಲ್ಲ ಕೆಲಸವನ್ನು ಮಾಡಿ ಮುಗಿಸುತ್ತಾಳೆ. ಮಕ್ಕಳು ಏಳುವುದರೊಳಗೆ ಅವಳ ಕೆಲಸವೆಲ್ಲ ಮುಗಿದು ಚಟ್ನಿ ಅಥವಾ ಸಾಂಬಾರು ತಯಾರು! 

ಇಡ್ಲಿ ಬೇಡ ಎಂದು ಮೂಗು ಮುರಿಯುವ ಮಗರಾಯನಿಗೆ ಆ ಹಿಟ್ಟಿನಲ್ಲೇ ಒಂದೆರಡು ದೋಸೆಯನ್ನು ಥಟ್ಟನೆ ಮಾಡಿಕೊಡುತ್ತಾಳೆ. ಅದಕ್ಕೆ ಒಗ್ಗರಣೆಯನ್ನು ಹಾಕಿ ಸ್ಪೆಷಲ್‌ ದೋಸೆಯೆಂದು ಹೇಳಿದರೆ ಅವನು ನಂಬದೇ ಇರಲಾರ. ಎರಡು ಇಡ್ಲಿ ತಿಂದರಷ್ಟೇ ಒಂದು ಸ್ಪೆಷಲ್‌ ದೋಸೆ ಎಂಬ ಕಂಡೀಷನ್‌ ಬೇರೆ. ಅಪ್ಪನಿಗೆ ಎಷ್ಟೇ ಚಟ್ನಿ ಅಥವಾ ಸಾಂಬಾರು ಇದ್ದರೂ ಒಂದು ಇಡ್ಲಿಯನ್ನು ಚಹಾದಲ್ಲಿ ಅದ್ದಿ ತಿನ್ನಬೇಕು. ಇನ್ನು ಅಜ್ಜನಿಗಂತೂ ಮೊಸರು ಸಕ್ಕರೆಯೊಂದಿಗೆ ಒಂದು ಇಡ್ಲಿ ಬೇಕೇ ಬೇಕು. ಅಮ್ಮನಿಗೂ ಮನೆಯವರೆಲ್ಲ ಹೊಟ್ಟೆ ತುಂಬ ತಿಂದರೆಂಬ ಸಂತೃಪ್ತಿ.

ಮಧ್ಯಾಹ್ನದ ಊಟದ ಬಾಕ್ಸ್‌ಗೆ ಏನು ಹಾಕಲಿ, ಅಡುಗೆಗೆ ಪಲ್ಯ ಏನು ಎಂಬ ಚಿಂತೆ ಬೇಡ, ಇಡ್ಲಿ ಸಾಂಬಾರಿನಲ್ಲೇ ಮುಗಿಯುತ್ತದೆ. ಸಂಜೆಯ ತಿಂಡಿಗೆ ಇಡ್ಲಿಯನ್ನು ಚೆನ್ನಾಗಿ ಎರಡು ಭಾಗ ಮಾಡಿ ಸ್ವಲ್ಪ ಮಸಾಲೆ ಬೆರೆಸಿ ಇಡ್ಲಿ ಪ್ರೈ ಮಾಡಿದರೆ, ರಾತ್ರಿಯ ಊಟಕ್ಕೆ ಅಡುಗೆ ಕಡಿಮೆಯಾದರೆ, ಇಡ್ಲಿ ಚಟ್ನಿ ಅಥವಾ ಸಾಂಬಾರು ಇಲ್ಲದಿದ್ದರೆ ಅಮ್ಮ ಮಾಡಿಟ್ಟ ಶೇಂಗಾ ಅಗಸೆ ಬೀಜವೆಂಬ ನಾನಾ ಚಟ್ನಿ ಪುಡಿಯೊಟ್ಟಿಗೂ ನಮ್ಮ ಹೊಟ್ಟೆ ಸೇರುತ್ತದೆ.

ಮರುದಿವಸವೂ ಒಮ್ಮೊಮ್ಮೆ ಇಡ್ಲಿಯದೇ ರಾಜ್ಯ. ಮೊದಲ ದಿನ ಚಟ್ನಿ ಮಾಡಿದ್ದರೆ ಎರಡನೆಯ ದಿನಕ್ಕೆ ಸಾಂಬಾರು. ಅದೇ ಸಾಂಬಾರು ಮಧ್ಯಾಹ್ನ ಊಟಕ್ಕೆ ಅನ್ನದ ಜೊತೆಗೆ. ಅಮ್ಮನಿಗೆ ಇಡ್ಲಿಯೊಂದಿಗೆ ಸಾಂಬಾರು ಫ್ರೀ ಬಂದಷ್ಟು ಖುಷಿ. ಬೆಳಗ್ಗೆ ಮಧ್ಯಾಹ್ನಕ್ಕೆ ಒಂದೇ ಅಡುಗೆಯನ್ನು ಸುಧಾರಿಸಬಹುದಾದ ಖುಷಿ. ಸಂಜೆ ಆ ಇಡ್ಲಿಯನ್ನೇ ಚೆನ್ನಾಗಿ ಪುಡಿ ಮಾಡಿ ಒಗ್ಗರಣೆ ಹಾಕಿ ಉಪ್ಪಿಟ್ಟು ಮಾಡಿದ್ದೇನೆ ಎಂದು ಬಡಿಸುತ್ತಾಳೆ. ಕೆಲವೊಮ್ಮೆ ಅದಕ್ಕೆ ನಾಲ್ಕಾರು ದೊಣ್ಣೆ ಮೆಣಸಿನಕಾಯಿ ಹಾಕಿ ಇಡ್ಲಿ ಮಂಚೂರಿ ಎನ್ನುತ್ತಾಳೆ. ಮೊನ್ನೆ ಯೂಟ್ಯೂಬ್‌ನಲ್ಲಿ ನೋಡಿ, “ಸಂಜೆ ಏನೋ ಸ್ಪೆಷಲ್‌ ಮಾಡುತ್ತೇನೆ ಬೇಗ ಬಾ’ ಎಂದಳು. ಇಡ್ಲಿಯನ್ನು ಎಣ್ಣೆಯಲ್ಲಿ ಕರಿದು ಮಂಚೂರಿ ಮಾಡಿದ್ದಳು. ಸೂಪರೋ ಸೂಪರು.

Advertisement

ಎರಡು ದಿನ ಇಡ್ಲಿಯ ಕಥೆ ಮುಗಿಯಿತು ಎಂದೆಣಿಸಿದರೆ ಇಲ್ಲ, ಅದೇ ಹಿಟ್ಟಿಗೆ ಸ್ವಲ್ಪ ಈರುಳ್ಳಿ ಹಾಕಿ ಈರುಳ್ಳಿ ಉತ್ತಪ್ಪ, ಟೊಮ್ಯಾಟೊ, ಹೆಸರುಕಾಳು- ಹೀಗೆ ತರಹೇವಾರಿ ದೋಸೆ ಮಾಡಿಕೊಡುತ್ತಾಳೆ. ಹೀಗೆ ಕೆಲವೊಮ್ಮೆ ಇಡ್ಲಿ ಪುರಾಣ ಒಂದು ವಾರದವರೆಗೂ ಸಾಗುತ್ತದೆ.

ವಾರದ ಹಿಂದೆ ತಮ್ಮನಿಗೆ ಅದೆಲ್ಲಿಂದ ಇಡ್ಲಿ ಪ್ರೀತಿ ಬಂತೋ ಕಾಣೆ! ಬೆಳಿಗ್ಗೆ ಎದ್ದವನೇ, “ಇಡ್ಲಿ ಮಾಡು ಅಮ್ಮ’ ಎಂದು ಕೇಳಿದ. ಅಮ್ಮ ಹೆದರುತ್ತಾಳೆಯೆ ! ರವೆಯನ್ನು ಚೆನ್ನಾಗಿ ಹುರಿದು, ಮೊಸರು ಬೆರೆಸಿ ಇಡ್ಲಿ ಬೇಯಿಸಿ ತಂದುಕೊಟ್ಟಳು. ಅವನೂ ಚಪ್ಪರಿಸಿ ತಿಂದು, “ನಾಳೆಯೂ ಇದೇ ಮಾಡಮ್ಮ’ ಎನ್ನಬೇಕೆ?

ಇನ್ನು ಎಲ್ಲಿಗಾದರೂ ಪ್ರಯಾಣ ಹೊರಟರೂ ಅಮ್ಮ ಬೆಳಿಗ್ಗೆ 4ಕ್ಕೆ ಎದ್ದು ಇಡ್ಲಿ ಬೇಯಿಸಲಿಟ್ಟು ಪ್ರಯಾಣಕ್ಕೆ ಎಲ್ಲ ಸಜ್ಜುjಗೊಳಿಸುತ್ತಿರುತ್ತಾಳೆ. ಪ್ರವಾಸದ ಸಮಯದಲ್ಲಿ ಎಲ್ಲರೂ ಹೊಟೇಲುಗಳನ್ನು ಹುಡುಕುತ್ತಿದ್ದರೆ, “ಬನ್ನಿ, ಎಲ್ಲರೂ ಇಡ್ಲಿ ತಿನ್ನೋಣ’ ಎಂದು ತಿನ್ನುವಾಗ ಏನೋ ಸಡಗರ. ಪೂಜೆ-ಪುನಸ್ಕಾರದ ಸಮಯದಲ್ಲೂ ಉದ್ದಿಗೆ ಗೋಧಿ-ರವೆ ಬೆರೆಸಿ ಇಡ್ಲಿ ಮಾಡುವಳು.

ಶುಭ ಸಮಾರಂಭಗಳಲ್ಲೂ ಎರಡು-ಮೂರು ದಿನ ಇಡ್ಲಿ ಮಾಡಿದರೂ ನೆಂಟರಿಷ್ಟರಿಗೆ ಬೇಸರವಿಲ್ಲವೆನ್ನಬಹುದು. ನೆಂಟರಿಷ್ಟರೆಲ್ಲ ಸೇರಿ ಹಲಸಿನ ಎಲೆಯನ್ನು ಚೆನ್ನಾಗಿ ಕಡುಬು ಮಾಡಲು ಹೆಣೆದು ಮುಂಚಿನ ದಿನವೇ ತಯಾರಾಗಿಟ್ಟು ಮಾರನೆಯ ದಿನ ಅದರಲ್ಲಿ ಇಡ್ಲಿ ಕಡುಬು ತಿನ್ನುವಾಗ ಏನು ರುಚಿ ! ಮಾರನೆಯ ದಿನ ಇಡ್ಲಿಯೊಂದಿಗೆ ವಡೆ… ಹೀಗೆ ಸಾಗುತ್ತದೆ ನೆಂಟರಿಷ್ಟರ ಬೆಳಗ್ಗಿನ ಉಪಾಹಾರ.

ಸಣ್ಣ ಮಕ್ಕಳಿದ್ದರಂತೂ ಅಮ್ಮ-ಅಜ್ಜಿಯಂದಿರಿಗೆ ಇಡ್ಲಿ ಮಾಡಿದರೆ ಮಗುವಿಗೆ ಏನು ತಿನ್ನಿಸಲಿ ಎಂಬ ಚಿಂತೆಯೇ ಇಲ್ಲ. ಇಡ್ಲಿಯೊಂದಿಗೆ ಹಾಲನ್ನು ಬೆರೆಸಿ ತಿನ್ನಿಸಿದರೆ ಮಕ್ಕಳಿಗೂ ಖುಷಿ, ಅಮ್ಮಂದಿರಿಗೂ ಅವರ ಹೊಟ್ಟೆ ತುಂಬಿದ ಖುಷಿ.

 ಗೆಳತಿಯ ಮನೆಯಲ್ಲಿ ಇಡ್ಲಿಯೊಂದಿಗೆ ವಡೆ ಮಾಡಲೇಬೇಕಂತೆ.ಇಡ್ಲಿಗೆ ವಡೆ ಉಚಿತ. “ಇಡ್ಲಿ ಮನೆಯಲ್ಲಿ ಮಾಡಿ, ವಡೆಯನ್ನು ಪಾರ್ಸೆಲ್‌ ತರುತ್ತೇವೆ’ ಎನ್ನುತ್ತಾಳೆ. ಇಡ್ಲಿಯಿಲ್ಲದೆ ವಡೆಯಿಲ್ಲ, ವಡೆಯಿಲ್ಲದೆ ಇಡ್ಲಿಯಿಲ್ಲ ಎಂಬಂಥ ಅವಿನಾ ಸಂಬಂಧ. ಇಡ್ಲಿಯನ್ನು ಎಲ್ಲಿ ಹೋದರೂ ಯಾರೂ ಬೇಕಾದರೂ ತಿನ್ನಬಹುದು ಎಂಬ ಮಾತಿದೆ. ಕೆಲವರ ಮನದಲ್ಲಿ ಇಡ್ಲಿಯನ್ನು ಎಣ್ಣೆಯನ್ನು ಬಳಸದೇ, ಬೇಯಿಸಿದ ಆಹಾರವಾದ್ದರಿಂದ ಏನು ಭಯವಿಲ್ಲದೇ ತಿನ್ನಬಹುದು ಎಂಬ ಎಣಿಕೆಯಿದೆ. ಹೊಟ್ಟೆಯ ಆರೋಗ್ಯ 

ಕೆಟ್ಟಾಗಲೂ ಇಡ್ಲಿ-ಮೊಸರು ತಿನ್ನಬಹುದು ಎಂಬುದು ಪದ್ಧತಿ.
 ಬ್ರೂಸ್‌ಲೀಯ ನೆಚ್ಚಿನ ಆಹಾರ ಇಡ್‌-ಲೀ ಎಂಬ ಜೋಕ್‌ ಕೂಡ ಎಲ್ಲರಿಗೂ ತಿಳಿದಿರುವುದೇ. ಮದುವೆಯ ಹೊಸತರಲ್ಲಿ ಉಪ್ಪು ಹಾಕಲು ಮರೆತು ಮಾಡಿದ ಇಡ್ಲಿಗೆ ಮನೆಯವರು, “ಚೈನೀಸ್‌ ಇಡ್ಲಿ ಮಾಡಿದ್ದೀಯಾ’ ಎಂದು  ಅಣಕಿಸಿದ್ದೂ ಈಗಲೂ ನೆನಪಿದೆ. ಇಡ್ಲಿಯ ಇತಿಹಾಸ ನನಗೆ ತಿಳಿದಿಲ್ಲ, ಆದರೆ, ಅಜ್ಜಿ ಮನೆಗೆ ಹೋದಾಗಲೂ ಇಡ್ಲಿಯನ್ನು ತಿಂದಿದ್ದೇನೆ. ಅಜ್ಜಿಯೂ ಕೇಳಿದರೆ ಅವಳ ಇಡ್ಲಿಯ ಕುರಿತು ನಾನಾ ಕಥೆಗಳನ್ನು ಹೇಳುತ್ತಾಳೆ. ವಿಠuಲ ಕಾಮತರ, “ಇಡ್ಲಿ, ಆರ್ಕಿಡ್‌ ಮತ್ತು ಆತ್ಮಬಲ’ದಲ್ಲೂ ಅವರು ಅವರ ತಾಯಿ ಮಾಡುತ್ತಿದ್ದ ಇಡ್ಲಿಯ ರುಚಿಯನ್ನು ಚೆನ್ನಾಗಿ ಬಣ್ಣಿಸಿ¨ªಾರೆ. ಸೌತೆಕಾಯಿ, ಹಲಸಿನಕಾಯಿ, ಕ್ಯಾರೆಟ್‌ ಇತ್ಯಾದಿ ಇಡ್ಲಿಯನ್ನೂ ಮಾಡುತ್ತಾರೆ. ತುಪ್ಪ ಹಾಕಿ ಹಲಸಿನ ಇಡ್ಲಿಯನ್ನು ತಿಂದಾಗ ಬಹಳ ರುಚಿ. ಹಬ್ಬ-ಹರಿದಿನಗಳಲ್ಲಿ ಹಲಸಿನ ಎಲೆಯಲ್ಲಿ ಮಾಡಿದ ಇಡ್ಲಿ-ಕಡುಬಿಗೆ ಬಹಳ ಮಹತ್ವವಿದೆ.

ಉತ್ತರಭಾರತೀಯ ಗೆಳತಿಯೊಬ್ಬಳು, “ನಿನ್ನೆ ರಾತ್ರಿ ಇಡ್ಲಿಸಾಂಬಾರು ಮಾಡಿ¨ªೆ’ ಎಂದು ಕೊಚ್ಚಿಕೊಳ್ಳುತ್ತಿದ್ದಳು. ದಿನಾಲೂ ಚಪಾತಿ, ರೋಟಿಯೆಂದು ತಿನ್ನುವವಳಿಗೆ ಇಡ್ಲಿ ಸಾಂಬಾರು ಮಾಡಿದ್ದು ಮಹಾನ್‌ ಸಾಧನೆಯಂತೆ ಕಂಡಿರಬೇಕು. ದಕ್ಷಿಣಭಾರತೀಯನಾದ ಶ್ರೀಕಾಂತ್‌ “ಅಷ್ಟೇನಾ?’ ಎಂದು ಉದ್ಗರಿಸಿದ್ದ, ಅವನ ಮನೆಯಲ್ಲಿ ವಾರಕ್ಕೆರಡು ಬಾರಿ!

ಇನ್ನೂ ಬೆಂಗಳೂರಿನಲ್ಲಂತೂ ಇಡ್ಲಿಯಲ್ಲಿ ನಾನಾ ವಿಧಗಳಿವೆ. ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವಾ ಇಡ್ಲಿ, ಬಟನ್‌ ಇಡ್ಲಿ, ಕಾಯಿನ್‌ ಇಡ್ಲಿ ಎಂಬ ತರಹೇವಾರಿ ಇಡ್ಲಿಗಳು. ಇಡ್ಲಿಯನ್ನು ತಯಾರಿಸಲು ರೆಡಿಮೇಡ್‌ ಹಿಟ್ಟುಗಳು ಸಿಗುತ್ತಿದ್ದು, ಹಿಟ್ಟು ರುಬ್ಬಿಕೊಡುವ ಅಂಗಡಿಗಳೂ ಕೂಡ ಇವೆ. ಚೆನ್ನೈನಲ್ಲಿ  ಒಂದು ರೂಪಾಯಿ ಅಮ್ಮ ಇಡ್ಲಿ ಬಗ್ಗೆ ಕೂಡ ಕೇಳಿರಬಹುದು. ಇಡ್ಲಿಯೊಂದಿಗೆ ಕೊಡುವ ಐದಾರು ತರಹದ ಚಟ್ನಿಯ ವಿಷಯವೂ ಬಹಳ ಫೇಮಸ್‌.

ಈ ಸದ್ಯ ದೊಡ್ಡಮ್ಮನ ಮನೆಯಲ್ಲಿ ಅಣ್ಣ ಗ್ರೈಂಡರ್‌ ಬದಲಾಯಿಸಬೇಕು ಎಂದು ಹೇಳುತ್ತಿರುವ ವಿಷಯ ಬಹಳ ಕುತೂಹಲ ಮೂಡಿಸಿತು. ವರುಷದ ಹಿಂದಷ್ಟೇ ಹೊಸ ಗ್ರೈಂಡರ್‌ ಕೊಂಡವನು, “ಏನಾಯಿತೋ?’ ಎಂದು ಕೇಳಿದರೆ, “ಈ ದೊಡ್ಡ ಗ್ರೈಂಡರ್‌ನಲ್ಲಿ ರುಬ್ಬಿದ ಹಿಟ್ಟಿನಿಂದ ಅಮ್ಮ ಒಂದು ವಾರ “ಇಡ್ಲಿ-ದಿನ್‌’ ಮಾಡುತ್ತಾಳೆ, ಸಣ್ಣ ಗ್ರೈಂಡರ್‌ ಕೊಂಡರೆ ಒಂದು ದಿನಕ್ಕಾಗುವಷ್ಟೇ ಹಿಟ್ಟು ರುಬ್ಬುತ್ತಾಳೆ’ ಎಂದು ಹೇಳಿದ.

ಅಯ್ಯೋ ಮರೆತೆ ಹೋಯ್ತು! ಇಡ್ಲಿ ಬೇಯಿಸಲು ಇಟ್ಟಿದ್ದೇನೆ.

ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next