Advertisement
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಗ್ರಾಮವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ವಿದ್ಯುತ್ ಲೈನ್ ಎಳೆಯುವ ಸಂದರ್ಭ ಅರಣ್ಯ ಇಲಾಖೆಯವರು ಅಡ್ಡಿಪಡಿಸಿದರು. ನಂತರ ಕೇಳಿದಾಗ ಕೇಬಲ್ ಅಳವಡಿಸುವಂತೆ ಹೇಳಿದರು. ಕಷ್ಟಪಟ್ಟು ಅನುದಾನ ತಂದು ಕೇಬಲ್ ಅಳವಡಿಸಲು ಮುಂದಾದಾಗ ಅದಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಪ್ರದೇಶದಲ್ಲಿ ಕಾಮಗಾರಿ ನಡೆಸುವ ಮೊದಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.
Related Articles
Advertisement
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ, 1909ನೇ ಇಸವಿಯಲ್ಲಿ ಸದರಿ ಜಾಗವನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಆದರೆ ಕಂದಾಯ ಇಲಾಖೆಯ ಪಹಣಿಯಲ್ಲಿ ಅರಣ್ಯ ಪ್ರದೇಶವೆಂದು ನಮೂದಾಗಿಲ್ಲ ಎಂದರು. ಶಾಸಕ ಸುರೇಶ್ ಮಾತನಾಡಿ, ಸದರಿ ಜಾಗ ಜನವಸತಿ ಪ್ರದೇಶವಾಗಿದೆ. ಅಲ್ಲಿ ಮನೆಗಳು, ಶಾಲೆ ಎಲ್ಲವೂ ಇವೆ. ಅದೇ ಸರ್ವೆ ನಂಬರಿನಲ್ಲಿ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೂ ಜಾಗ ಮಂಜೂರಾಗಿದೆ. ಮೊರಾರ್ಜಿ ಶಾಲೆಯೂ ಇದೆ. ಆ ಜಾಗವನ್ನು ಅರಣ್ಯ ಪ್ರದೇಶವೆಂದರೆ ಹೇಗೆಂದು ಪ್ರಶ್ನಿಸಿದರು. ವಿಧಾನ ಪರಿಷತ್ ಶಾಸಕ ಎಂ.ಕೆ.ಪ್ರಾಣೇಶ್ ಮಾತನಾಡಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡೀಮ್ಡ್ ಅರಣ್ಯದ ಹೆಸರಿನಲ್ಲಿ ಒತ್ತುವರಿ ತೆರವುಗೊಳಿಸದಂತೆ ತೀರ್ಮಾನಿಸಲಾಗಿತ್ತು. ಆ ಬಗ್ಗೆ ಮುಖ್ಯಮಂತ್ರಿ ಗಳೇ ಆದೇಶ ನೀಡಿದ್ದರೂ ಸಹ ಅರಣ್ಯ ಇಲಾಖೆಯವರು, ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾಗಿದ್ದ ಜಾಗವನ್ನೂ ತೆರವು ಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸಿ.ಟಿ.ರವಿ, ಅರಣ್ಯ ಹಕ್ಕು ಕಾಯಿದೆಯಡಿ ಹಕ್ಕುಪತ್ರ ನೀಡಿದ ಜಾಗವನ್ನು ಏಕೆ ತೆರವುಗೊಳಿಸುತ್ತಿದ್ದೀರಿ. ಈ ರೀತಿ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅರಣ್ಯ ಇಲಾಖೆಗೆ ಸೇರಿದ ಜಾಗವಾದರೆ ತೆರವುಗೊಳಿಸಿ ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ ವಿನಾಕಾರಣ ಬಡ ಜನತೆಗೆ ತೊಂದರೆ ಕೊಡಬಾರದು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ ಮಾತನಾಡಿ, ಸರ್ವೋಚ್ಚ ನ್ಯಾಯಾಲಯಕ್ಕೆ ಒತ್ತುವರಿ ತೆರವುಗೊಳಿಸಿದ ಕುರಿತು ವರದಿ ನೀಡಬೇಕೆಂಬ ಕಾರಣದಿಂದ ಅರಣ್ಯ ಇಲಾಖೆಯವರು ಆಗಾಗ ಬಡಜನತೆಯನ್ನು ತೆರವುಗೊಳಿಸುತ್ತಿದ್ದಾರೆ. ಆದರೆ ಬಲಾಡ್ಯರ ಒತ್ತುವರಿ ತೆರವುಗೊಳಿಸಲು ಇಲಾಖೆಯವರು ಮುಂದಾಗುವುದಿಲ್ಲ. ಕೇವಲ ಬಡಜನತೆಯನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯಕುಮಾರ್, ಸಿಇಒ ಎಸ್. ಅಶ್ವತಿ, ಎಸ್‌ಪಿ ಹರೀಶ್ ಪಾಂಡೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.