Advertisement

ನಿಯಂತ್ರಣ ತಪ್ಪಿದ ಕೆ.ಎಸ್‌.ಆರ್‌.ಟಿ.ಸಿ. ಮೂಡುಬಿದಿರೆ ಘಟಕ

10:43 AM Dec 17, 2018 | |

ಮೂಡುಬಿದಿರೆ: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಂಗಳೂರು 1ನೇ ವಿಭಾಗಕ್ಕೆ ಸೇರಿದ ಮೂಡುಬಿದಿರೆ ನಿಯಂತ್ರಣ ಘಟಕ ‘ಬಿಂದು’ ಗೆ ಬೀಗ ಜಡಿಯಲಾಗಿದೆ. ‘ವಿಚಾರಣೆ’ ಫ‌ಲಕವಿದ್ದರೂ ಯಾರಲ್ಲಿ ವಿಚಾರಿಸಬೇಕು ಎಂಬುದು ತಿಳಿಯುತ್ತಿಲ್ಲ.

Advertisement

ಚಾರಿತ್ರಿಕ ನಗರಿ, ಧಾರ್ಮಿಕ ಕೇಂದ್ರ, ಶಿಕ್ಷಣ ಕಾಶಿ, ಉದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆ ತಾಲೂಕಾಗಿ ಘೋಷಿಸಲ್ಪಟ್ಟು ಒಂದು ವರ್ಷವೇ ಕಳೆದಿದೆ. ಶಿಕ್ಷಣಕ್ಕಾಗಿ ಇಲ್ಲಿಗೆ ಆಗಮಿಸುವ ವಿದ್ಯಾರ್ಥಿಗಳನ್ನು ನೋಡಿ ಹೋಗಲೆಂದು ಆಗಾಗ ದೂರ ದೂರಿನಿಂದ ಬರುವ ಪೋಷಕರು ಧರ್ಮಸ್ಥಳ, ಉಡುಪಿ, ಕೊಲ್ಲೂರು, ಕಟೀಲು ಮೊದಲಾದ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುತ್ತಾರೆ. ಇದಕ್ಕಾಗಿ ಸಹಸ್ರಾರು ಮಂದಿ ಸರಕಾರಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಮುಂಬಯಿ, ಬೆಂಗಳೂರು ಸಹಿತ ನಾಡಿನ ವಿವಿಧೆಡೆಗಳಿಗೆ ಮೂಡುಬಿದಿರೆ ಮೂಲಕ ಹಾದುಹೋಗುವ 60ರಷ್ಟು ಸರಕಾರಿ ಬಸ್‌ ಗಳಿವೆ. ಆದರೆ ಬಸ್‌ ಎಲ್ಲಿ ನಿಲ್ಲುತ್ತದೆ, ಯಾವಾಗ ಬರುತ್ತದೆ ಎಂಬುದನ್ನು ಯಾರಲ್ಲಿ ವಿಚಾರಿಸುವುದು ಎಂದು ತಿಳಿಯದೆ ಗೊಂದಲಳಗಾಗುತ್ತಿರುವುದು ಕಂಡು ಬರುತ್ತಿದೆ.

ಇಲ್ಲಿರುವ ಟಿ.ಸಿ. ಪಾಯಿಂಟ್‌ ಎದುರಲ್ಲೇ ತಂಪುಪಾನೀಯಗಳ ಬಾಟಲಿಗಳು ಗೋಚರಿಸುತ್ತಿವೆ, ಯಾವುದೋ ಇನ್ನೊಂದು ಖಾಸಗಿ ಫಲಕ ರಾರಾಜಿಸುತ್ತಿದೆ. ಹೀಗಾಗಿ ಪ್ರಯಾಣಿಕರು ಗೊಂದಲಕ್ಕೊಳಗಾಗುವಂತಾಗಿದೆ. ಈ ಘಟಕದಲ್ಲಿ ಇದ್ದದ್ದು ಓರ್ವ ಸಂಚಾರ ನಿಯಂತ್ರಕ. ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಬೆಳಗಿನ ಕೆಲವು ಬಸ್‌ಗಳು ಬಂದು ಹೋಗಿರುತ್ತವೆ. ಸಂಜೆ ಬೀಗ ಜಡಿದು ಹೋದ ಬಳಿಕ ಬಸ್‌ಗಳು ನಗರದ ಹೊರವಲಯದಲ್ಲೇ ಸಂಚರಿಸಿ ಬಿಡುತ್ತವೆ. ಧರ್ಮಸ್ಥಳದಿಂದ ಉಡುಪಿಯತ್ತ ಸಾಗುವ ಬಸ್‌ ಗಳು ಜಿ.ವಿ. ಪೈ ಸ್ಮಾರಕ ಆಸ್ಪತ್ರೆ- ಹಳೆ ಪೊಲೀಸ್‌ ಠಾಣೆಯಾಗಿ ನೇರ ಕಾರ್ಕಳ- ಉಡುಪಿಯತ್ತ ಸಾಗಿ ಬಿಡುತ್ತವೆ. ಉಡುಪಿಯಿಂದ ಬರುವ ಬಸ್‌ಗಳೂ ಹಾಗೆಯೇ. ಹೀಗಾಗಿ, ಸಂಚಾರ ನಿಯಂತ್ರಕರ ಕಚೇರಿ ಇರುವ ಬಸ್‌ ನಿಲ್ದಾಣದಲ್ಲಿ ಧರ್ಮಸ್ಥಳಕ್ಕೋ, ಉಡುಪಿಗೋ, ಉತ್ತರ ಕರ್ನಾಟಕದತ್ತಲೋ ಹೋಗಲು ಬಸ್ಸಿಗಾಗಿ ಕಾದು ನಿಂತವರು ಅಲ್ಲೇ ಬಾಕಿಯಾಗಿ ಪರದಾಡ ಬೇಕಾಗುತ್ತದೆ.

ರಿಂಗ್‌ ರೋಡ್‌ ಆದ ಬಳಿಕ, ಉಡುಪಿಯತ್ತ ಸಾಗುವ ಬಸ್‌ ಗಳು ನೇರ ಪಶ್ಚಿಮಕ್ಕೆ ಸಾಗಿ ರಿಂಗ್‌ ರೋಡ್‌ನ‌ಲ್ಲಿ ಸಾಗಿ ಅಲಂಗಾರು ಮೂಡುಬಿದಿರೆ ನಿಯಂತ್ರಣ ಘಟಕದಲ್ಲಿ ಬಾಗಿಲು ಹಾಕಿರುವ ವಿಚಾರಣ ಕೊಠಡಿ  ಮೂಲಕ ಕಾರ್ಕಳಕ್ಕೆ ತೆರಳುತ್ತಿವೆ.  ಹೀಗಾಗಿ ಹಳೆ ಪೊಲೀಸ್‌ ಠಾಣೆಯ ಮುಂದೆ ಜೈನ ಪೇಟೆಯಲ್ಲಿ ನಿಲ್ಲುವ ಪ್ರಯಾಣಿಕರಿಗೆ ಕೆಲವು ಬಸ್‌ ಗಳು ತಪ್ಪಿ ಹೋಗುತ್ತವೆ.

ನಿಯಂತ್ರಕರಿಲ್ಲ
ಎಲ್ಲ ಬಸ್‌ಗಳು ಈ ನಿಲ್ದಾಣಕ್ಕೆ ಬರಬೇಕಾದರೆ ದಿನದ 24 ಗಂಟೆ ಕಾರ್ಯಾಚರಿಸುವ ಅಥವಾ ಕನಿಷ್ಠ ಎರಡು ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಸಂಚಾರ ನಿಯಂತ್ರಕರು ಇರಬೇಕು. ಇರುವ ಒಬ್ಬ ನಿಯಂತ್ರಕರೂ ಈಗ ಕಾಣಿಸುತ್ತಿಲ್ಲ.

Advertisement

ಬಸ್‌ ನಿಲ್ಲಲೂ ಜಾಗವಿಲ್ಲ
ಈಗ ಇರುವ ಸಂಚಾರ ನಿಯಂತ್ರಣ ಘಟಕದ ಬಿಂದು ಇರುವ ಜಾಗದಲ್ಲಿ ಸರಕಾರಿ ಬಸ್‌ ಗಳ ನಿಲುಗಡೆಯಾಗಬೇಕಿದೆ. ಆದರೆ ಇಲ್ಲಿರುವ ಅವ್ಯವಸ್ಥೆಯಿಂದಾಗಿ ಈ ಜಾಗದಲ್ಲಿ ಬಸ್‌ಗಳು ನಿಲ್ಲದೆ, ರಸ್ತೆ ಬದಿಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿ, ಇಳಿಸಿ ತೆರಳುತ್ತವೆ. ಹೀಗಾಗಿ ಈ ಜಾಗದಲ್ಲಿ ಖಾಸಗಿ ವಾಹನಗಳು  ಬೀಡುಬಿಟ್ಟಿವೆ. ಮೂಡುಬಿದಿರೆಯಲ್ಲಿ ಎಂದೋ ಸರಕಾರಿ ಬಸ್‌ ನಿಲ್ದಾಣ ಸ್ಥಾಪನೆಯಾಗಬೇಕಿತ್ತು. ಅದಕ್ಕಾಗಿ ಸ್ವರಾಜ್ಯ ಮೈದಾನದ ಬಳಿ ಹಾದುಹೋಗುವ ರಿಂಗ್‌ರೋಡ್‌ ಪಕ್ಕದಲ್ಲಿ ಜಾಗವನ್ನೂ ತೋರಿಸಿ ಕೊಟ್ಟಾಗಿದೆ. ಡೀಮ್ಡ್ಫಾ ರೆಸ್ಟ್‌ ನಂಥ ಸಮಸ್ಯೆಗಳನ್ನು ನೀಗಿಕೊಂಡರೆ ಸಮಸ್ಯೆ ಪರಿಹಾರವಾಗಲು ಸಾಧ್ಯ.

ಏನೆಲ್ಲ ಆಗಬೇಕು?
.ಸಂಚಾರ ನಿಯಂತ್ರಕರ ಕಚೇರಿ ಪೂರ್ಣ ಅವಧಿಗೆ ತೆರೆದಿರಬೇಕು.
. ಕನಿಷ್ಠ ಇಬ್ಬರು ನಿಯಂತ್ರಕರನ್ನು ನಿಯೋಜಿಸಬೇಕು.
. ಸರಕಾರಿ ಬಸ್‌ ನಿಲುಗಡೆಗೆ ನಿಗದಿತ ಜಾಗವನ್ನು ಪೈಂಟ್‌ ಬಳಿದು ಪ್ರತ್ಯೇಕಿಸಿ ತೋರಿಸಬೇಕು.
. ಬಸ್‌ ನಿಲ್ದಾಣ, ಡಿಪೋ ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಇಬ್ಬರ ನಿಯೋಜನೆ ಪ್ರಸ್ತಾವನೆ ಸದ್ಯಕ್ಕಿಲ್ಲ
ಇಲ್ಲಿದ್ದ ಟಿ.ಸಿ. ಭಡ್ತಿ ಹೊಂದಿವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನವನ್ನು ಇನ್ನಷ್ಟೇ ತುಂಬಬೇಕಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇರುವ ಪವಿತ್ರಾ ಅವರ ಕೇಸ್‌ ಕ್ಲಿಯರ್‌ ಆದ ಬಳಿಕ ಈ ಸ್ಥಾನವನ್ನು ತುಂಬಲಾಗುವುದು. ಸದ್ಯ ಈ ಹಿಂದಿನಂತೆ ಒಂದು ಸ್ಥಾನಕ್ಕೆ ಮಾತ್ರ ಅವಕಾಶ. ಇಬ್ಬರನ್ನು ನಿಯೋಜಿಸುವ ಪ್ರಸ್ತಾವನೆ ಈಗಿಲ್ಲ.
– ದೀಪಕ್‌ ಕುಮಾರ್‌,
ಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು

 ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next