Advertisement

ನೋಂದಣಿ, ಮುದ್ರಾಂಕ ಶುಲ್ಕ: 750 ಕೋಟಿ ಖೋತಾ

03:45 AM Jan 02, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷ ಆಸ್ತಿಗಳ ನೋಂದಣಿ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿದ್ದು, ಇದರಿಂದ ಡಿಸೆಂಬರ್‌ ಅಂತ್ಯದ ವೇಳೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಣೆಯಲ್ಲಿ ಸುಮಾರು 750 ಕೋಟಿ ರೂ. ಖೋತಾ ಆಗಿದೆ.

Advertisement

2016-17ನೇ ಸಾಲಿನಲ್ಲಿ 9100 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದು, ಆದಾಯ ಸಂಗ್ರಹಣೆಯಲ್ಲಿ ಏಪ್ರಿಲ್‌ ತಿಂಗಳು ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಇದು ಪ್ರಸಕ್ತ ಸಾಲಿನಲ್ಲಿ ರಿಯಲ್‌ ಎಸ್ಟೇಟ್‌ ಬೂಮ್‌ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ ನೋಟುಗಳ ಅಮಾನ್ಯವೂ ಸೇರಿರುವುದರಿಂದ ಆರ್ಥಿಕ ವರ್ಷಾಂತ್ಯದ ವೇಳೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಣೆಯಲ್ಲಿ ನಿಗದಿತ ಗುರಿಗಿಂತ 1000 ಕೋಟಿ ರೂ. ಕಡಿಮೆ ಸಂಗ್ರಹವಾಗುವ ಆತಂಕ ಕಾಣಿಸಿಕೊಂಡಿದೆ.

ಕೇಂದ್ರ ಸರ್ಕಾರ 500, 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ರಿಯಲ್‌ ಎಸ್ಟೇಟ್‌ ಉದ್ಯಮ ಭಾರೀ ಕುಸಿತ ಕಂಡಿತ್ತು. ಆದರೆ, ಮೇ ತಿಂಗಳಿನಿಂದಲೇ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಕಡಿಮೆಯಾಗಿದ್ದು, ನೋಟು ಅಮಾನ್ಯಕ್ಕೆ ಮುನ್ನವೇ ಈ ಕ್ಷೇತ್ರ ಹಿನ್ನಡೆ ಅನುಭವಿಸಿತ್ತು ಎಂಬುದಕ್ಕೆ ಸಾಕ್ಷಿ.

ಇದರ ಪರಿಣಾಮ ಡಿಸೆಂಬರ್‌ 25ರ ವೇಳೆಗೆ ಈ ಮೂಲಕ 6482 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದರೂ 5732 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. 

ಶೇ.88ರಷ್ಟು ಮಾತ್ರ ಸಾಧನೆಯಾಗಿದೆ. ನೋಂದಣಿಯೇತರ ದಸ್ತಾವೇಜುಗಳಿಂದ 747 ಕೋಟಿ ರೂ. ಸಂಗ್ರಹವಾಗಿದೆ.

Advertisement

ಏಪ್ರಿಲ್‌ನಲ್ಲಿ ಮಾತ್ರ ಗುರಿ ಮೀರಿ ಸಾಧನೆ:
ಪ್ರಸಕ್ತ ವರ್ಷ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಣೆಯಲ್ಲಿ ಏಪ್ರಿಲ್‌ ತಿಂಗಳಲ್ಲಿ ಮಾತ್ರ ಗುರಿ ಮೀರಿದ ಸಾಧನೆ ಮಾಡಲಾಗಿತ್ತು. ಉಳಿದಂತೆ ಮೇ ತಿಂಗಳಿನಿಂದಲೇ ಶುಲ್ಕ ಸಂಗ್ರಹಣೆ ಮತ್ತು ದಸ್ತಾವೇಜುಗಳ ನೋಂದಣಿಯಲ್ಲಿ ಕುಸಿತ ಕಂಡುಬಂದಿದೆ. ಏಪ್ರಿಲ್‌ ತಿಂಗಳಲ್ಲಿ 564 ಕೋಟಿ ರೂ. ಗುರಿ ಇದ್ದರೆ 717 ಕೋಟಿ ರೂ. ಸಂಗ್ರಹವಾಗಿತ್ತು.

ಉಳಿದಂತೆ ಮೇ ತಿಂಗಳಲ್ಲಿ 760 ಕೋಟಿ ರೂ. ಗುರಿ ಬದಲಾಗಿ 603 ಕೋಟಿ ರೂ., ಜೂನ್‌ನಲ್ಲಿ 761 ಕೋಟಿ ರೂ. ಗುರಿ ಬದಲಾಗಿ 718 ಕೋಟಿ ರೂ., ಜುಲೈನಲ್ಲಿ 734 ಕೋಟಿ ರೂ. ಗುರಿ ಬದಲು 641 ಕೋಟಿ ರೂ., ಆಗಸ್ಟ್‌ನಲ್ಲಿ 704 ಕೋಟಿ ರೂ. ಗುರಿ ಬದಲಾಗಿ 682 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 803 ಕೋಟಿ ರೂ. ಗುರಿ ಬದಲಾಗಿ 646 ಕೋಟಿ ರೂ., ಅಕ್ಟೋಬರ್‌ನಲ್ಲಿ 688 ಕೋಟಿ ರೂ. ಗುರಿ ಬದಲಾಗಿ 678 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಅಂದರೆ ಮೊದಲ ಏಳು ತಿಂಗಳಲ್ಲಿ ಒಟ್ಟು ಗುರಿ 5014 ಕೋಟಿ ರೂ. ಬದಲಾಗಿ 4684 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, 330 ಕೋಟಿ ರೂ. ಕೊರತೆ ಕಂಡುಬಂದಿತ್ತು.

ಈ ಮಧ್ಯೆ ನವೆಂಬರ್‌ ತಿಂಗಳಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯದ ನಂತರ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಇನ್ನಷ್ಟು ಪಾತಾಳಕ್ಕೆ ಇಳಿದಿದೆ. ನವೆಂಬರ್‌ ತಿಂಗಳಲ್ಲಿ 808 ಕೋಟಿ ರೂ. ಗುರಿ ಬದಲಾಗಿ 593 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದರೆ, ಡಿಸೆಂಬರ್‌ 25ರವರೆಗೆ 660 ಕೋಟಿ ರೂ. ಗುರಿಗೆ ಕೇವಲ 455 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಅಂದರೆ, ಈ ಎರಡು ತಿಂಗಳಲ್ಲಿ ನಿಗದಿತ ಗುರಿಗಿಂತ 420 ಕೋಟಿ ರೂ. ಕಡಿಮೆ ಸಂಗ್ರಹವಾಗಿದೆ.

2016-17ನೇ ಸಾಲಿನಲ್ಲಿ ನವೆಂಬರ್‌ ಒಂದರಿಂದ ಡಿಸೆಂಬರ್‌ 25ರವರೆಗೆ 1468 ಕೋಟಿ ರೂ. ಸಂಗ್ರಹಿಸುವ ಗುರಿ ನೀಡಲಾಗಿತ್ತಾದರೂ 1048 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. 2015-16ಕ್ಕೆ ಇದೇ ಅವಧಿಯಲ್ಲಿ 1357 ಕೋಟಿ ರೂ. ಗುರಿಗೆ 1118 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ, ಆದಾಯ ಈ ವರ್ಷ ಕಳೆದ ಸಾಲಿಗಿಂತಲೂ 70 ಕೋಟಿ ರೂ. ಕಡಿಮೆಯಾಗಿದೆ.

ಗುರಿ ವೈಫ‌ಲ್ಯಕ್ಕೆ ಕಾರಣವೇನು?
ಕಳೆದ ಏಪ್ರಿಲ್‌ನಿಂದ ಇದುವರೆಗೆ ನೋಂದಣಿಯಾಗಿರುವ ಕ್ರಯ ದಸ್ತಾವೇಜುಗಳು, ವ್ಯವಸಾಯೇತರ ಕೃಷಿ ಭೂಮಿ ದಸ್ತಾವೇಜುಗಳು (10 ಲಕ್ಷ ರೂ. ಮೇಲ್ಪಟ್ಟು ಮತ್ತು 10 ಲಕ್ಷ ರೂ.ಗಿಂತ ಕಡಿಮೆ ಇರುವಂತಹದ್ದು) ಕಡಿಮೆಯಾಗಿದ್ದು ಗುರಿ ಸಾಧನೆ ವಿಫ‌ಲವಾಗಲು ಒಂದು ಕಾರಣ.

ಮತ್ತೂಂದೆಡೆ 2016 ಏಪ್ರಿಲ್‌ ಒಂದರಿಂದ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಏರಿಸಲು ಬಜೆಟ್‌ನಲ್ಲಿ ಘೋಷಿಸಿದ್ದರಿಂದ 2016ರ ಮಾರ್ಚ್‌ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ದಸ್ತಾವೇಜುಗಳು ನೋಂದಣಿಯಾಗಿದ್ದವು. ಇದರ ಪರಿಣಾಮ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬರಬೇಕಾಗಿದ್ದ ಸುಮಾರು 100ರಿಂದ 150 ಕೋಟಿ ರೂ. ಮಾರ್ಚ್‌ ತಿಂಗಳಲ್ಲೇ ಸಂಗ್ರಹವಾಗಿತ್ತು. ಇದು ಕೂಡ ಪ್ರಸಕ್ತ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಗುರಿ ಸಾಧನೆ ವಿಫ‌ಲವಾಗಲು ಕಾರಣವಾಯಿತು ಎಂದು ಕಂದಾಯ ಇಲಾಖೆ ಮೂಲಗಳು ಹೇಳುತ್ತವೆ.

ದಕ್ಷಿಣದಲ್ಲಿ ಕರ್ನಾಟಕವೇ ಮುಂದು
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕರ್ನಾಟಕ ಮಾತ್ರವಲ್ಲ, ದೇಶದೆಲ್ಲೆಡೆ ಆಸ್ತಿಗಳ ನೋಂದಣಿ, ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಪೆಟ್ಟಿಬಿದ್ದಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಕರ್ನಾಟಕ ಗುರಿ ಸಾಧಿಸಲು ವಿಫ‌ಲವಾಗಿದ್ದರೂ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ.

2016-17ನೇ ಸಾಲಿನಲ್ಲಿ ನವೆಂಬರ್‌ ಅಂತ್ಯದವರೆಗೆ ರಾಜಸ್ವ ಸಂಗ್ರಹಣೆಯಲ್ಲಿ ಕರ್ನಾಟಕ ನಿಗದಿಪಡಿಸಿದ ಗುರಿಯ ಶೇ.90ರಷ್ಟು ಸಾಧನೆ ಮಾಡಿದ್ದರೆ, ತಮಿಳುನಾಡು- ಶೇ.73, ಆಂಧ್ರಪ್ರದೇಶ- ಶೇ.76, ತೆಲಂಗಾಣ- ಶೇ.88 ಮತ್ತು ಮಹಾರಾಷ್ಟ್ರ ಶೇ.68ರಷ್ಟು ಮಾತ್ರ ಗುರಿ ಸಾಧನೆ ಮಾಡಿದೆ.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next