Advertisement

ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭ

11:13 PM Oct 03, 2022 | Team Udayavani |

ಬೆಂಗಳೂರು: ಮುಂಬರುವ ಮಾರ್ಚ್‌/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅ.21ರ ವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Advertisement

ಅಭ್ಯರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಳಿಯ ಜಾಲತಾಣದ //sslc.karnataka.gov.in/ಶಾಲಾ ಲಾಗಿನ್‌ನಲ್ಲಿ ಪಡೆಯಬೇಕು. ರಾಜ್ಯದ ಎಲ್ಲ ಸರಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯಲ್ಲಿ (ಶಾಲಾ ಅಭ್ಯರ್ಥಿ, ಖಾಸಗಿ, ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ) ಮಾರ್ಚ್‌-2023ರ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್‌ ಮೂಲಕ ಅ.21ರೊಳಗೆ ಅಪ್‌ಲೋಡ್‌ ಮಾಡಬಹುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.

ಮಾಹಿತಿಗಳನ್ನು ಅಪ್‌ಲೋಡ್‌ ಮಾಡಲು ಬಳಸಬೇಕಾದ ಅರ್ಜಿಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ ಮೂಲಕ ಪಡೆದುಕೊಳ್ಳಬಹುದು. ಮುಖ್ಯ ಶಿಕ್ಷಕರಿಗೆ ಮಂಡಳಿಯ ಶಾಲಾ ಲಾಗಿನ್‌ನಲ್ಲಿ ಮಂಡಳಿ ವತಿಯಿಂದ ಈಗಾಗಲೇ ನೀಡಿರುವ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳುವ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಪೂರ್ಣ ಮಾಹಿತಿ, ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್‌ ಮಾಡಬೇಕು.

ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ನಮೂದಿಸಿದರೆ ಸಂಬಂಧಪಟ್ಟ ಮಾಹಿತಿ ಅಪ್‌ಲೋಡ್‌ ಆಗಲಿದೆ. ಪೋಷಕರ ಮೊಬೈಲ್‌ ಸಂಖ್ಯೆ, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್‌ ಮಾಡಬೇಕು. ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್‌ ಡೇಟಾಬೇಸ್‌ನಿಂದ ಪಡೆಯಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದಲ್ಲಿ ಮೊದಲು ಸ್ಯಾಟ್ಸ್‌ನಲ್ಲಿ ತಿದ್ದುಪಡಿ ಮಾಡಿದ ಬಳಿಕ ಪಡೆಯಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next