ಮುಧೋಳ: ಸರ್ಕಾರ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಯೋಜನೆ ಜಾರಿಗೆ ತಂದು ತಿಂಗಳು ಕಳೆದರೂ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.
ಗ್ರಾಮೀಣ ಪ್ರದೇಶದಲ್ಲಿನ ಹಸು ಹಾಗೂ ಎಮ್ಮೆಗಳು ಅಸಹಜ ಸಾವೀಡಾದರೆ ಅವುಗಳಿಂದ ಜನರಿಗೆ ನಷ್ಟ ಉಂಟಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ವಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಪ್ರಕಾರ ಎಪಿಎಲ್ ಹೊಂದಿದ ಫಲಾನುಭವಿಗಳಿಗೆ ಶೇ.50, ಪರಿಶಿಷ್ಟ ಜಾತಿ-ಪಂಗಡ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಶೇ.70 ಪರಿಹಾರ ನೀಡಲು ಅವಕಾಶವಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಪಶು ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದ ಕಾರಣ ಯೋಜನೆ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಕೇವಲ 280 ನೋಂದಣಿ: ಮುಧೋಳ ತಾಲೂಕಿನಲ್ಲಿ 48,838 ಹಸುಗಳು, 55,771 ಎಮ್ಮೆಗಳಿವೆ. ಆದರೆ ಅವುಗಳಲ್ಲಿ ಇದುವರೆಗೆ ಕೇವಲ 280 ಜಾನುವಾರು ಮಾತ್ರ ವಿಮಾ ಯೋಜನೆಗೆ ನೋಂದಣಿ ಮಾಡಿಸಲಾಗಿದೆ. ಅವುಗಳಲ್ಲಿ ಸಾಮಾನ್ಯ ವರ್ಗದ 156, ಪರಿಶಿಷ್ಟ ಜಾತಿ-ಪಂಗಡ ಜನಾಂಗದವರ 124 ಜಾನುವಾರುಗಳಿಗೆ ಮಾತ್ರ ನೋಂದಣಿ ಮಾಡಿಸಲಾಗಿದೆ. ಮೇಲಿನ ಅಂಕಿ ಸಂಖ್ಯೆ ಗಮನಿಸಿದರೆ ಯೋಜನೆ ಯಶಸ್ಸು ಗಳಿಸುವುದು ಕಷ್ಟ ಸಾಧ್ಯ ಎಂದೇ ಹೇಳಬಹುದು.
ಪ್ರಚಾರ ಕೊರತೆ: ಯಾವುದೇ ಒಂದು ಯೋಜನೆ ಜಾರಿಗೊಂಡು ಯಶಸ್ವಿಯಾಗಬೇಕಾದರೆ ಅದಕ್ಕೆ ಅಗತ್ಯವಾದ ಪ್ರಚಾರ ದೊರೆಯಬೇಕು. ಆದರೆ ಕೇಂದ್ರ ಸರ್ಕಾರದ ಜಾನುವಾರು ವಿಮಾ ಯೋಜನೆ ಸೂಕ್ತ ಪ್ರಚಾರದ ಕೊರತೆಯಿಂದ ಜನಮಾನಸದಿಂದ ದೂರವಾಗುವ ಲಕ್ಷಣ ಕಾಣುತ್ತಿದೆ. ಪ್ರಚಾರ-ಮಾಹಿತಿ ಹಂಚಿಕೆ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಯೋಜನೆ ತಲುಪಿಸುವುದ ಕಷ್ಟದ ಕೆಲಸ.
Related Articles
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳೀಯ ಮಟ್ಟದ ಪಂಚಾಯಿತಿಯೊಂದಿಗೆ ಕೈಜೋಡಿಸಿ ಯೋಜನೆ ಯಶಸ್ಸಿಗೆ ಶ್ರಮಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ.
ಮಳೆಗಾಲದಲ್ಲಿ ಹೆಚ್ಚು ಅನಾಹುತ: ಸದ್ಯ ಮಳೆಗಾಲ ಆರಂಭವಾಗಿ ತಾಲೂಕಿನಾದ್ಯಂತ ಮುಂಗಾರು ಉತ್ತಮ ಆರಂಭ ಪಡೆದಿದೆ. ಆದರೆ ಜೋರಾದ ಮಳೆ ಹಾಗೂ ಸಿಡಿಲು ಮಿಂಚಿನ ಆರ್ಭಟ ಜೋರಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಜಾನುವಾರು ಸಂಕುಲಕ್ಕೆ ಆಪತ್ತು ಎದುರಾಗುವ ಸಂಭವ ಹೆಚ್ಚು. ಆದ್ದರಿಂದ ವಿಮಾ ಯೋಜನೆ ನೋಂದಣಿ ಕಾರ್ಯ ಚುರುಕುಗೊಂಡರೆ ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲ ಕಲ್ಪಿಸಿದಂತಾಗುತ್ತದೆ.
ನಿಗದಿತ ಶುಲ್ಕ: ಪ್ರಸ್ತುತ ಯೋಜನೆ ಲಾಭ ಪಡೆಯಲು ಬಿಪಿಎಲ್, ಪರಿಶಿಷ್ಟ ಜಾತಿ- ಪಂಗಡದವರು ವರ್ಷಕ್ಕೆ 300 ಹಾಗೂ ಸಾಮಾನ್ಯ ವರ್ಗದವರು 500 ರೂ. ಪಾವತಿಸಬೇಕು. ಒಂದು ವರ್ಷದೊಳಗೆ ಯೋಜನೆಗೊಳಪಟ್ಟ ಹಸು ಅಥವಾ ಎಮ್ಮೆ ಅಸು ನೀಗಿದರೆ ರೈತರಿಗೆ ವಿಮಾ ಮೊತ್ತ ಪಾವತಿಯಾಗಲಿದೆ.
ಕುರಿಗಳಿಗೆ ಇಲ್ಲ ಸೌಲಭ್ಯ: ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಯಿಂದ ಕುರಿಗಳನ್ನು ಕೈಬಿಡಲಾಗಿದೆ. ತಾಲೂಕಿನಲ್ಲಿ 75,753 ಕುರಿಗಳಿದ್ದು, ಈ ಯೋಜನೆಯೊಳಗೆ ಅವುಗಳನ್ನು ಸೇರಿದ್ದರೆ ಕುರಿಗಾರರಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬುದು ಕುರಿಗಾರರ ಅಭಿಪ್ರಾಯ.
ಜಿಲ್ಲೆಯಲ್ಲಿ ನಮ್ಮ ತಾಲೂಕು ವಿಮಾ ನೋಂದಣಿ ಕಾರ್ಯದಲ್ಲಿ ಮುಂದಿದೆ. ಶುಲ್ಕ ವಿಧಿಸಿರುವ ಪರಿಣಾಮ ರೈತರು ವಿಮಾ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಮಾ ನೋಂದಣಿಯಾಗಲಿವೆ. –ಡಾ| ಗೋವಿಂದ ರಾಠೊಡ, ಸಹಾಯಕ ನಿರ್ದೇಶಕರು ಪಶು ಇಲಾಖೆ ಆಡಳಿತ ವಿಭಾಗ ಮುಧೋಳ
ಕುರಿಗಳು ಆಪತ್ತಿನಿಂದ ಅಸುನೀಗಿದರೆ ರಾಜ್ಯ ಸರ್ಕಾರದಿಂದ ಪರಿಹಾರ ದೊರೆಯುತ್ತದೆ. ಆದರೆ ಕೇಂದ್ರದ ಮಹತ್ವಾಕಾಂಕ್ಷಿ ಈ ಯೋಜನೆಯಲ್ಲಿಯೂ ಕುರಿಗಳನ್ನು ಸೇರಿಸಿದರೆ ಕುರಿಗಾರರಿಗೆ ಹೆಚ್ಚು ಅನುಕೂಲವಾಗಲಿದೆ. –ಯಲ್ಲಪ್ಪ ಹೆಗಡೆ, ಸಾಮಾಜಿಕ ಹೋರಾಟಗಾರ
-ಗೋವಿಂದಪ್ಪ ತಳವಾರ