ಕುಷ್ಟಗಿ: ಇಲ್ಲಿನ ಎಪಿಎಂಸಿಯಲ್ಲಿ ತೊಗರಿ ಖರೀದಿ ಕೇಂದ್ರದಲ್ಲಿ ಬೆಳೆಗಾರರ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಶುಕ್ರವಾರವೂ ಶುರುವಾಗಲಿಲ್ಲ. ಸರ್ಕಾರದ ಆದೇಶದ ಪ್ರಕಾರ ಡಿ. 24ರಂದೇ ನೋಂದಣಿ ಪ್ರಾರಂಭಿಸಬೇಕಿತ್ತು. ಆಗಲೂ ಖರೀದಿ ಕೇಂದ್ರ ನಿರ್ವಹಿಸುವ ಏಜೆನ್ಸಿಗಳಿಗೆ ಮೊಬೈಲ್ ಆ್ಯಪ್ ಡೌನ್‌ಲೋಡ್ ಹಾಗೂ ನಿರ್ವಹಿಸುವ ವಿಧಾನ ಕುರಿತು ಮಾಹಿತಿ ನೀಡಿರಲಿಲ್ಲ. ಮಾರನೇ ದಿನ ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಡಿ. 27ರಂದು ಕೊಪ್ಪಳದಲ್ಲಿ ಜಿಲ್ಲಾ ಧಿಕಾರಿ ನೇತೃತ್ವದ ಸಭೆಯಲ್ಲಿ ಡಿ. 28ರಂದು ಆರಂಭಿಸುವಂತೆ ಸೂಚಿಸಲಾಗಿತ್ತು. ಡಿ. 28ರಂದು ಶುರುವಾಗುವ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿಗೆ ರೈತರು ಶುಕ್ರವಾರ ಭೇಟಿ ನೀಡಿ ನಿರಾಸೆಯಿಂದ ಮರಳಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸಿಬ್ಬಂದಿ ರೈತರಿಗೆ ಡಿ. 30ರಿಂದ ಮೊಬೈಲ್ ಆ್ಯಪ್‌ನಲ್ಲಿ ಬೆಳೆಗಾರರ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸುವ ಮೌಖಿಕ ಭರವಸೆ ನೀಡುತ್ತಿದ್ದಾರೆ.
ಕುಷ್ಟಗಿ ಎಪಿಎಂಸಿ ಖರೀದಿ ಕೇಂದ್ರಕ್ಕೆ ನೋಡಲ್ ಅ ಧಿಕಾರಿಯಾಗಿ ಎಪಿಎಂಸಿ ಕಾರ್ಯದರ್ಶಿಯನ್ನು ನಿಯೋಜಿಸಲಾಗಿತ್ತು. ಶುಕ್ರವಾರ ಅವರು ರೈತರಿಗೆ ಲಭ್ಯವಾಗಲಿಲ್ಲ. ಈ ಅವ್ಯವಸ್ಥೆ ಬಗ್ಗೆ ಡಿ. 29ರಂದು ನಡೆಯುವ ತಾಪಂ ಸಾಮಾನ್ಯ ಸಭೆಯಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಗುವುದು. ನೋಂದಣಿಗೆ ಜ.7 ಕೊನೆಯ ದಿನಾಂಕವಾಗಿದ್ದು, ಈ ರೀತಿಯ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಜ. 20ರವರೆಗೂ ನೋಂದಣಿ ವಿಸ್ತರಿಸಿದರೆ ತಪ್ಪಿಲ್ಲ.
ಯಂಕಪ್ಪ ಚವ್ಹಾಣ, ತಾಪಂ ಸದಸ್ಯ
ಬೆಳೆ ದರ್ಶಕ ಆ್ಯಪ್‌ನಲ್ಲಿ ರೈತರು ತೊಗರಿ ಬೆಳೆ ಸಚಿತ್ರ ಮಾಹಿತಿ ಇದ್ದು, ಇದಕ್ಕೆ ರೈತರ ಆಧಾರ್ ಸಂಖ್ಯೆ ಟ್ಯಾಗ್ ಮಾಡಿದರೆ ಬೆಳೆ ದೃಢೀಕರಣ ಅಗತ್ಯವಿಲ್ಲ. ಪಹಣಿ ಪತ್ರಿಕೆಯಲ್ಲಿ ಬೆಳೆ ಕಾಲಂನಲ್ಲಿ ತೊಗರಿ ಇದ್ದರೂ ಬೆಳೆ ದೃಢೀಕರಣ ಅಗತ್ಯವಿಲ್ಲ, ಹೀಗಿದ್ದಾಗ್ಯೂ ರೈತರಿಂದ ಆನ್‌ಲೈನ್ ಬೆಳೆ ದೃಢೀಕರಣ ಪಡೆಯುವುದು ಅನಗತ್ಯವಾಗಿದೆ. ಜಿಲ್ಲಾಡಳಿತ ಬೆಳೆ ದೃಢೀಕರಣಕ್ಕೆ ಸರಳೀಕರಣ ವ್ಯವಸ್ಥೆ ತುರ್ತಾಗಿ ಕೈಗೊಳ್ಳಬೇಕಿದೆ. ಇಲ್ಲವೇ ಆನ್‌ಲೈನ್ ದೃಢೀಕರಣ ತತ್ಕಾಲದಲ್ಲಿ ಸಿಗುವ ವ್ಯವಸ್ಥೆಗೆ ಮುಂದಾಗಬೇಕಿದೆ.
ಬಾಲಪ್ಪ ಚಾಕ್ರಿ,
ನಿರ್ದೇಶಕ ಎಪಿಎಂಸಿ ಕುಷ್ಟಗಿ.