Advertisement

ಪ್ರಾದೇಶಿಕ ಸಾರಿಗೆ ಇಲಾಖೆ ಆದೇಶ ಉಲ್ಲಂಘನೆ

06:44 PM Jan 05, 2022 | Team Udayavani |

ಉಡುಪಿ: ಇಂಧನ ದರ ಏರಿಕೆ ಸಮಯದಲ್ಲಿ ಏಕಾಏಕಿ ಖಾಸಗಿ ಬಸ್‌ ಮಾಲಕರು ದರ ಹೆಚ್ಚಳ ಮಾಡಿದ್ದು, ಆ ದರ ಈಗಲೂ ಮುಂದುವರಿಯುತ್ತಿದೆ. ಈ ಮೂಲಕ ಬೆಲೆ ಏರಿಕೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಸಮಸ್ಯೆ ಎದುರಾಗಿದೆ.
ನಿರಂತರ ಲಾಕ್‌ಡೌನ್‌ನಿಂದಾಗಿ ಹಲವಾರು ಬಸ್‌ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಲಾಕ್‌ಡೌನ್‌ ತೆರವಾದ ಬಳಿಕ ಇಂಧನ ದರ ಹೆಚ್ಚಳ ಹಾಗೂ ನಿರ್ವಹಣೆ ಶುಲ್ಕದ ನೆಪದಲ್ಲಿ ಖಾಸಗಿ ಬಸ್‌ನವರು ಹೆಚ್ಚುವರಿ ಹಣ ವಸೂಲಿ ಮಾಡಲಾರಂಭಿಸಿದರು. ಈಗ ಜಿಲ್ಲಾಧಿಕಾರಿ,ಆರ್‌ಟಿಒ ಅಧಿಕಾರಿಗಳು ನೀಡಿದ ಪರಿಷ್ಕೃತ ಆದೇಶವೂ ಜಾರಿ ಮಾಡುತ್ತಿಲ್ಲ ಎಂದು ಪ್ರಯಾಣಿಕ ಕುಂದಾಪುರದ ನಾಗರಾಜ್‌ ಶೆಟ್ಟಿಗಾರ್‌ ಹೇಳಿದ್ದಾರೆ.

Advertisement

ದರ ಹೆಚ್ಚಿಸಿದರೆ ಕೂಡಲೇ ಅನುಷ್ಠಾನ
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‌ ದರ ಹೆಚ್ಚಳ ಮಾಡಿದರೆ ಬಸ್‌ ಮಾಲಕರು ಅದನ್ನು ಮಾರನೇ ದಿನದಿಂದಲೇ ಅನುಷ್ಠಾನ ಮಾಡುತ್ತಾರೆ. ಆದರೆ ನ.10ರಿಂದ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸ ವರ್ಷ ಕಳೆದರೂ ಹೆಚ್ಚುವರಿ ವಸೂಲಿ ಮಾತ್ರ ಯಥಾಸ್ಥಿತಿ ಮುಂದುವರಿದಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ ಎಂದು ಶೆಟ್ಟಿಗಾರ್‌ ಹೇಳುತ್ತಾರೆ.

ಕೆಎಸ್ಸಾರ್ಟಿಸಿಯಲ್ಲಿ ಕಡಿಮೆ ಶುಲ್ಕ
ಉಡುಪಿಯಿಂದ ತೆಂಕನಿಡಿಯೂರಿಗೆ ತೆರಳಲು ಖಾಸಗಿ ಬಸ್ಸಿನಲ್ಲಿ 20 ರೂ. ತೆರಬೇಕು. ಅದೇ ಕೆಎಸ್ಸಾರ್ಟಿಸಿ ಬಸ್‌ನಲ್ಲಿ 15 ರೂ. ಮಾತ್ರ. ಇಂದು ಒಂದು ಕಡೆಯ ದರವಾದರೆ ನಗರ ಸಹಿತ ಇತರ ಭಾಗಗಳಿಗೆ ತೆರಳುವ ಖಾಸಗಿ ಬಸ್‌ನವರೂ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದಾರೆ. ಉಡುಪಿಯಿಂದ ಕುಂದಾಪುರಕ್ಕೆ 42 ಕಿ.ಮೀ. ದೂರವಿದ್ದು, ಖಾಸಗಿ ಬಸ್‌ನವರು 64ರಿಂದ 65 ರೂ. ವಸೂಲು ಮಾಡುತ್ತಾರೆ. ಅದೇ ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸಿದರೆ 50 ರೂ. ಮಾತ್ರ. ಬಸ್‌ ಟಿಕೆಟ್‌ನಲ್ಲಿಲ್ಲ ಸ್ಪಷ್ಟ ಮಾಹಿತಿ ಬಸ್‌ ಟಿಕೆಟ್‌ನಲ್ಲಿ ಟಿಕೆಟ್‌ ದರ ಮಾತ್ರ ಸ್ಪಷ್ಟವಾಗಿ ನಮೂದಿಸುತ್ತಾರೆ ವಿನಃ ಬಸ್‌ ಸಂಖ್ಯೆ, ನಿರ್ವಾಹಕನ ಹೆಸರು, ಸಮಯ, ಕ್ರಮಿಸುವ ದೂರ ಇತ್ಯಾದಿಗಳ ಬಗ್ಗೆ ಸೂಕ್ತ ಮಾಹಿತಿ ಇರುವುದಿಲ್ಲ. ಈ ಮೂಲಕ ಪ್ರಯಾಣಿಕರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ನಿರಂತರ ಕಾರ್ಯಾಚರಣೆ ನಡೆಸಿದರಷ್ಟೇ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎನ್ನುತ್ತಾರೆ ನಿತ್ಯಪ್ರಯಾಣಿಕರು.

ಇಂಧನ ದರ ಇಳಿಕೆ; ಬಸ್‌ ಪ್ರಯಾಣ ದರ ಏರಿಕೆ!
ಬಸ್‌ ಪ್ರಯಾಣ ದರ ಏರಿಕೆ ಸಮಯದಲ್ಲಿ ಇಂಧನ ದರ ಹೆಚ್ಚಳದ ಕಾರಣ ನೀಡುತ್ತಿದ್ದ ಬಸ್‌ ಮಾಲಕರು ಡೀಸೆಲ್‌ ದರ ಲೀ.ಗೆ 102 ರೂ.ಗಳಿಂದ 84 ರೂ.ಗಳಿಗೆ ಇಳಿಕೆ ಕಂಡರೂ ಬಸ್‌ ದರ ಕಡಿತ ಮಾಡುತ್ತಿಲ್ಲ. ಕಡಿತ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆದೇಶಿಸಿದರೂ ಇದರ ಉಲ್ಲಂಘನೆ ಮಾಡಲಾಗುತ್ತಿದೆ. ಬಸ್‌ಗಳಲ್ಲಿ ದರಪಟ್ಟಿಗಳನ್ನೂ ಪ್ರದರ್ಶಿಸುತ್ತಿಲ್ಲ. ಈ ನಡುವೆ ಎಲ್ಲ ಬಸ್‌ಗಳಲ್ಲಿಯೂ ನಿಯಮಮೀರಿ ಪ್ರಯಾಣಿಕರನ್ನು ಹಾಕುತ್ತಿರುವ ಬಗ್ಗೆಯೂ ದೂರುಗಳು ವ್ಯಕ್ತವಾಗುತ್ತಿವೆ.

ಹೆಚ್ಚುವರಿ ಟೋಲ್‌ ದರ
ಟೋಲ್‌ ದರವನ್ನು ಸೇರಿಸಿ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳಲಾಗುತ್ತಿದೆ. ಕೆಎಸ್ಸಾರ್ಟಿಸಿ ಬಸ್‌ನವರು ಆರ್‌ಟಿಒ ನಿಗದಿಪಡಿಸಿದ ದರಕ್ಕಿಂತ ಕಡಿಮೆ ದರ ಪಡೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ.
-ಕುಯಿಲಾಡಿ ಸುರೇಶ್‌ ನಾಯಕ್‌, ಅಧ್ಯಕ್ಷರು, ಉಡುಪಿ ಸಿಟಿ ಬಸ್ಸು ಮಾಲಕರ ಸಂಘ, ಪ್ರಧಾನ ಕಾರ್ಯದರ್ಶಿ, ಕೆನರಾ ಬಸ್‌ ಮಾಲಕರ ಸಂಘ

Advertisement

ಅಸಹಾಯಕ ಸ್ಥಿತಿ
ದಿನನಿತ್ಯ ಪ್ರಯಾಣಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಆರ್‌ಟಿಒ ಇಲಾಖೆಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಕ್ರಮ ಜರಗಿಸಿಲ್ಲ.
– ನಾಗರಾಜ ಶೆಟ್ಟಿಗಾರ್‌,
ಕುಂದಾಪುರ, ಪ್ರಯಾಣಿಕ

ದೂರು ನೀಡಿ
ಖಾಸಗಿ ಬಸ್‌ಗಳಲ್ಲಿ ಹೆಚ್ಚುವರಿ ದರ ವಸೂಲಿಮಾಡುವ ಬಗ್ಗೆ ಪ್ರಯಾಣಿಕರಿಂದ ಈಗಾಗಲೇ ದೂರುಗಳು ಬರುತ್ತಿವೆ. ಇದನ್ನು ಇಮೇಲ್‌ ಮೂಲಕ ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳುಹಿಸಿದರೆ ಮತ್ತಷ್ಟು ಅನುಕೂಲಕರವಾಗಿದೆ. ಹೆಚ್ಚುವರಿ ದರ ತೆಗೆದುಕೊಳ್ಳುವ ಬಸ್‌ ಮಾಲಕರಿಗೆ ಕನಿಷ್ಠ 5 ಸಾವಿರದವರೆಗೆ ದಂಡ ವಿಧಿಸುವ ಅಧಿಕಾರ ಇಲಾಖೆಗಿದೆ. ಸಾರ್ವಜನಿಕರು ಈ ಬಗ್ಗೆ ದೂರು ನೀಡಬಹುದಾಗಿದೆ.
-ಜೆ.ಪಿ.ಗಂಗಾಧರ್‌,
ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next