Advertisement

ಸ್ಥಳೀಯ ಮಾರುಕಟ್ಟೆಗೆ ಆರ್‌.ಸಿ.ಇ.ಪಿ. ಪೆಟ್ಟು

09:41 AM Oct 26, 2019 | Hari Prasad |

ನವದೆಹಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಆರ್‌.ಸಿ.ಇ.ಪಿ. ಎಂಬ ಹೊಸ ವ್ಯಾಪಾರ ಒಪ್ಪಂದವೊಂದು ದೇಶಕ್ಕೆ ಪರಿಚಯವಾಗಲಿದೆ. ಹಲವು ದೇಶಗಳನ್ನು ಒಳಗೊಂಡ ಈ ಸಹಭಾಗಿತ್ವದ ವ್ಯಾಪಾರದಲ್ಲಿ ಭಾರತ ಪಾಲುದಾರ ರಾಷ್ಟ್ರವಾಗುವುದು ಬಹುತೇಕ ಖಚಿತವಾಗಿದೆ. ಈ ವ್ಯಾಪಾರ ಕ್ರಮದಲ್ಲಿ ಹಲವು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಚರ್ಚೆಯಾಗುತ್ತಿದೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದ್ದೇ ಆದರೆ ಸಣ್ಣಮಟ್ಟದ ಉದ್ದಿಮೆಗಳು, ವ್ಯಾಪಾರಿಗಳು ಮತ್ತು ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Advertisement

ಏನಿದು ಆರ್‌.ಸಿ.ಇ.ಪಿ.?
ಆರ್‌.ಸಿ.ಇ.ಪಿ. (Regional Comprehensive economic partnership) ಇದು ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರದ ಒಪ್ಪಂದ. ಇದರಲ್ಲಿ ಆಗ್ನೇಯ ಏಷ್ಯಾದ 10 ದೇಶಗಳು ಮತ್ತು ಬಲಿಷ್ಠ ವ್ಯಾಪಾರಿ ದೇಶಗಳಾಗಿರುವ ಚೀನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾ ದೇಶಗಳು ಒಳಗೊಳ್ಳುತ್ತವೆ. ಪರಸ್ಪರ ಆಮದು ಮತ್ತು ರಫ್ತು ಮಾಡಿಕೊಳ್ಳುವ ತೆರಿಗೆಯನ್ನು ಕಡಿಮೆಗೊಳಿಸುತ್ತದೆ.

ಯಾವೆಲ್ಲ ರಾಷ್ಟ್ರಗಳು?
ಭಾರತ, ಚೀನ, ಆಸ್ಟ್ರೇಲಿಯಾ, ಜಪಾನ್‌, ಲಾವೋಸ್‌, ಇಂಡೋನೇಷ್ಯಾ, ಮಲೇಷ್ಯಾ, ಮ್ಯಾನ್ಮಾರ್‌, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ವಿಯೆಟ್ನಾಂ, ದಕ್ಷಿಣ ಕೊರಿಯಾ, ಬ್ರುನೈ, ಕಾಂಬೋಡಿಯಾ. ಈ 16 ಸದಸ್ಯ ರಾಷ್ಟ್ರಗಳ ಒಟ್ಟು ಜನ ಸಂಖ್ಯೆ 304 ಕೋಟಿ. 49.5 ಲಕ್ಷ ಕೋಟಿ ಡಾಲರ್‌ ಇದರ ಒಟ್ಟು ಜಿಡಿಪಿ.

ಲಾಭಗಳೇನು?
16 ದೇಶಗಳ ನಡುವಿನ ವ್ಯಾಪಾರವು ಜಾಗತಿಕ ವ್ಯಾಪಾರದ ಕಾಲು ಭಾಗಕ್ಕಿಂತ ಹೆಚ್ಚಿದೆ. ಆರ್‌.ಸಿ.ಇ.ಪಿ. ಒಪ್ಪಂದಕ್ಕೆ ಸಹಿ ಹಾಕುವ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯನ್ನು ಒದಗಿಸುತ್ತವೆ. ಒಪ್ಪಂದದ ಪರಿಧಿಯಲ್ಲಿರುವ ದೇಶ ಮತ್ತೂಂದು ದೇಶದಿಂದ ಯಾವುದೇ ಅಗತ್ಯ ವಸ್ತುಗಳನ್ನ ಅತ್ಯಲ್ಪ ತೆರಿಗೆ ಮೂಲಕ ಕೊಳ್ಳುವ ಮತ್ತು ಮಾರಾಟ ಮಾಡಲು ಸ್ವತಂತ್ರವಾಗಿರುತ್ತದೆ. ಇದು ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ.

ನಷ್ಟ ಸಂಭವಿಸಿದರೆ ಹೇಗೆ?
ಆರ್‌.ಸಿ.ಇ.ಪಿ.ಯಲ್ಲಿ ನೋಂದಾಯಿಸಲಾಗಿರುವ ಪ್ರತಿಯೊಂದು ದೇಶವೂ ತನ್ನ ದೇಶದೊಳಗೆ ಇನ್ನಿತರೆ ದೇಶಗಳು ಮಾರುಕಟ್ಟೆಯನ್ನ ತೆರೆಯಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ಪ್ರಬಲ ದೇಶಗಳು ಭಾರತದಲ್ಲಿ ಮಾರುಕಟ್ಟೆ ತೆರೆದು ಇಲ್ಲಿನ ಮೂಲ ಕಸುಬು ಮತ್ತು ಉತ್ಪನ್ನವನ್ನು ಹಿಮ್ಮೆಟ್ಟಿಸುವ ಅಪಾಯ ಇದೆ. ವಿದೇಶಿ ವಸ್ತುಗಳ ಆಗಮನದಿಂದ ಸ್ವದೇಶಿ ಮಾರುಕಟ್ಟೆ ಕುಸಿದು ಬೀಳುತ್ತದೆ. ಇದರಿಂದ ಕೃಷಿ ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅಪಾಯ.

Advertisement

ಕೃಷಿಗೆ ಹಾನಿ ಹೇಗೆ?
ಕೃಷಿ ದೇಶದ ಬೆನ್ನೆಲುಬಾಗಿರುವ ರಾಷ್ಟ್ರದಲ್ಲಿ ಹೊರ ದೇಶಗಳಿಂದ ಬರುವ ಉತ್ಪನ್ನಗಳೇ ಮೇಳೈಸಿಕೊಂಡರೆ ರೈತರು ಬೆಳೆಯುವ ಆಹಾರ ಪದಾರ್ಥಗಳಿಗೆ ಬೇಡಿಕೆ ಕುಸಿಯಬಹುದು. ಜೀವನಕ್ಕಾಗಿ ಕೃಷಿ ಬೆಳೆಯನ್ನು ಅವಲಂಭಿಸಿದ ರೈತರು ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.

ಚೀನ ನಿರ್ಣಾಯಕ
ಈಗಾಗಲೇ ದೇಶದಲ್ಲಿ ಚೀನದ ವಸ್ತುಗಳ ಪ್ರಮಾಣ ಹೆಚ್ಚಿದೆ. ಈ ಆರ್‌.ಸಿ.ಇ.ಪಿ.ಯಲ್ಲಿ ಸದಸ್ಯ ರಾಷ್ಟ್ರವಾಗಿರುವ ಚೀನ ಉತ್ಪನ್ನಗಳು ಭಾರತಕ್ಕೆ ಮುಕ್ತವಾಗಿ ಬರಲಿವೆ. ಇದರಿಂದ ಈಗಿರುವ ಶೇ. 70-80ರಷ್ಟು ತೆರಿಗೆ ಇಳಿಸಬೇಕಾಗುತ್ತದೆ. ಇದು ದೇಶಿಯ ಮಾರುಕಟ್ಟೆಗೆ ಬಹುದೊಡ್ಡ ಅಪಾಯ.

ಭಾರತ ಸಹಿ ಹಾಕುವುದೇ?
ಭಾರತ ಅದಕ್ಕೆ ಸಹಿ ಹಾಕುವುದು ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಸರಕಾರ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನವೆಂಬರ್‌ 4ರಂದು ಇದಕ್ಕೆ ಕಡೆಯ ದಿನವಾಗಿದೆ. ಭಾರತ 2019ರ ತೆರಿಗೆ ಕ್ರಮವನ್ನು ಪಾಲಿಸಲು ಆಗ್ರಹಿಸುತ್ತಿದೆ.

ಕರಾವಳಿ ಅಡಿಕೆಗೆ ಪೆಟ್ಟು
ದೇಶೀಯ ಮಾರುಕಟ್ಟೆಗೆ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಆಮದಾಗಲಿದ್ದು ದೇಶಿಯ ಅಡಿಕೆಗಳ ಬೇಡಿಕೆ ಕಡಿತಗೊಂಡು ಮಾರುಕಟ್ಟೆ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ಗೂ ಅಧಿಕ ಅಡಿಕೆ ಬೆಳೆಯುವ ಪ್ರದೇಶಗಳಿವೆ. ಅಡಿಕೆ ಹೊರ ದೇಶಗಳಿಂದ ಆಮದಾಗಿದ್ದ ಸಂದರ್ಭವೆಲ್ಲಾ ದೇಶಿಕ ಅಡಿಕೆ ಮಾರುಕಟ್ಟೆ ಕುಸಿದಿತ್ತು.

ಯಾಕೆ ಬೇಡ?
ಈ ವ್ಯಾಪಾರ ವಿಧಾನ ಜಾರಿಯಾದರೆ ಹಾಲು ಸೇರಿದಂತೆ ಕ್ಷೀರೋತ್ಪನ್ನಗಳು, ರಬ್ಬರ್‌, ಭತ್ತ, ಮತ್ಸ್ಯೋದ್ಯಮ, ಅಡಕೆ, ಕಾಳು ಮೆಣಸು, ಚಹಾ ಮೊದಲಾದ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆಯಾಗಲಿದೆ. ಇದು ತಂತ್ರಜ್ಞಾನಗಳನ್ನೂ ಕಡಿಮೆ ದರದಲ್ಲಿ ದೇಶದೊಳಗೆ ಬಿಡಲಿದ್ದು, ಬಹುತೇಕ ಉದ್ಯಮಗಳಿಗೆ ನಷ್ಟವಾಗಲಿದ್ದು, ದೇಶಿಯ ಹೈನುಗಾರಿಕೆಗೆ ನ್ಯೂಜಿಲೆಂಡ್‌ ಪೈಪೋಟಿ ನೀಡಲಿದೆ.

ಶೇ. 16
ನಮ್ಮ ದೇಶದಲ್ಲಿ ಕೈಗಾರಿಕಾ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸದ್ಯ ನಮ್ಮ ಜಿಡಿಪಿಯ ಶೇ. 16ರಷ್ಟು ಪಾಲನ್ನು ಮಾತ್ರ ಕೈಗಾರಿಕೆಗಳು ಹೊಂದಿವೆ. ಇದನ್ನು ನಿರೀಕ್ಷಿತ ಶೇ. 25 ಏರಿಸುವ ಪ್ರಸ್ತಾವನೆ ಇದೆಯಾದರೂ ಕೈಗೂಡುತ್ತಿಲ್ಲ. ಪರಿಸ್ಥಿತಿ ಈಗಿರುವಾಗ ಕೈಗಾರಿಕೆಗಳಲ್ಲಿ ಬಲಶಾಲಿಯಾಗಿರುವ ಚೀನ ಉತ್ಪನ್ನಗಳು ದೇಶದೊಳಕ್ಕೆ ಬರತೊಡಗಿದರೆ ಸ್ಥಳಿಯ ಕೈಗಾರಿಕೆಗಳಿಗೆ ಅಪಾಯ.

ಶೇ. 90
ಭಾರತ ಈಗಾಗಲೇ ಆಸಿಯಾನ್‌ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ನೀತಿ ಹೊಂದಿದ್ದು, ಅವುಗಳ ಜತೆ ಶೇ. 80ರ ತೆರಿಗೆ ವಿನಾಯಿತಿ ಜಾರಿಯಲ್ಲಿದೆ. ಜಪಾನ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ಜತೆ ಶೇ. 65ರ ತೆರಿಗೆ ವಿನಾಯಿತಿ ಇಟ್ಟುಕೊಳ್ಳಲಾಗಿದೆ. ಮುಕ್ತ ವ್ಯಾಪಾರ ಒಪ್ಪಂದವಿಲ್ಲದ ಚೀನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಸರಕುಗಳಿಗೆ ಶೇ. 42ರಷ್ಟು ತೆರಿಗೆ ಕಡಿತ ಇದೆ. ಆರ್‌ಸಿಇಪಿ ಜಾರಿಗೆ ಬಂದರೆ ಈ ವಿನಾಯಿತಿಗಳು ಶೇ. 90ಕ್ಕೆ ಏರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next