ಬೆಂಗಳೂರು: ಕೇವಲ ಭೌಗೋಳಿಕ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷವಾದರೆ ಸಾಲದು. ತನ್ನ ಕಾರ್ಯಸೂಚಿಯಲ್ಲಿ ಪ್ರಾದೇಶಿಕತೆ ಅಸ್ಮಿತೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಂಗಳವಾರ ಕರ್ನಾಟಕ ವಿಕಾಸರಂಗ ಹಮ್ಮಿಕೊಂಡಿದ್ದ ವ.ಚ.ಚನ್ನೇಗೌಡ ಅವರ “ಕರ್ನಾಟಕದ ರಕ್ಷಣೆ ನಮ್ಮೆಲ್ಲರ ಹೊಣೆ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರಾದೇಶಿಕ ಪಕ್ಷಗಳಿಗೆ ಮುಖ್ಯವಾಗಿ ಪ್ರಾದೇಶಿಕ ಪ್ರಜ್ಞೆ ಅವಶ್ಯವಾಗಿದೆ. ಆದರೆ, ಇಂದು ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳೂ ತಮ್ಮ ನಾಡಿನ ಸಂಸ್ಕೃತಿ ಹಾಗೂ ಸೈದಾಂತಿಕ ನಿಲುವು ಮರೆತು ಕಾರ್ಯಚಟುವಟಿಕೆ ನಡೆಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕೇಂದ್ರ ಸರ್ಕಾರವು ಒಂದು ದೇಶ-ಒಂದು ತೆರಿಗೆ ಎಂದು ಹೇಳಿಕೊಂಡು ಜಿಎಸ್‌ಟಿ ಜಾರಿಗೆ ತಂದು ಒಕ್ಕೂಟ ವ್ಯವಸ್ಥೆಗೆ ದಕ್ಕೆ ತಂದಿದೆ. ರಾಜ್ಯಗಳು ಕೇಂದ್ರದ ಎದುರು ಅನುದಾನಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೊಂದು ದಿನ ಒಂದೇ ದೇಶ- ಒಂದೇ ಭಾಷೆ ಎಂಬ ನಿಯಮವನ್ನು ಜಾರಿಗೆ ತಂದು ಪ್ರಾದೇಶಿಕತೆಗೆ ದಕ್ಕೆ ತರಬಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ನಮ್ಮದು ವೈವಿಧ್ಯತೆಯಿಂದ ಕೂಡಿದ ದೇಶವಾಗಿರುವುದರಿಂದ ನಿಯಮಗಳಲ್ಲಿ ಏಕ ಮಾರ್ಗವನ್ನು ಕೈಬಿಡುವುದು ಒಳಿತು ಎಂದರು.
ಪ್ರತಿಭಟನೆ ಅಥವಾ ಹೋರಾಟ ಎಂದರೆ ಕೇವಲ ಅಬ್ಬರಿಸಿ ಬೊಬ್ಬಿರಿಯುವುದಲ್ಲ. ಅದೊಂದು ನಮ್ರತೆಯ ಹಾಗೂ ಸಜ್ಜನಿಕೆಯ ಮೂಲಕ ವಿಷಯ ಪ್ರತಿಪಾದನೆ ಮಾಡುವ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ಪರ ಹೋರಾಟಗಾರಿಗೆ ಚಿಂತಕರ ಮಾರ್ಗದರ್ಶನದ ಅವಶ್ಯಕತೆ ಇದೆ. ಆದರೆ, ನಮ್ಮ ಚಿಂತಕರು ಹಾಗೂ ಹೋರಾಟಗಾರರ ನಡುವೆ ಬಹುದೊಡ್ಡ ಕಂದಕವಿದ್ದು, ಇದರಿಂದ ಕನ್ನಡ ಭಾಷೆ ಬೆಳವಣಿಗೆಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಎರಡೂ ಪಂಗಡಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ ಮಾತನಾಡಿ, ಕರ್ನಾಟಕದ ರಕ್ಷಣೆ ನಮ್ಮೆಲ್ಲರ ಹೊಣೆ ಪುಸ್ತಕದಲ್ಲಿ ವ.ಚ.ಚನ್ನೇಗೌಡ ಅವರು ಕನ್ನಡ ನಾಡು, ನುಡಿ ಹಾಗೂ ಹೋರಾಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ಕನ್ನಡ ಪರ ಹೋರಾಟಗಾರಿಗೆ ಬೇಕಾದ ಅಗತ್ಯ ಮಾಹಿತಿ ಇದರಲ್ಲಿದೆ ಎಂದು ತಿಳಿಸಿದರು. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಉಪಸ್ಥಿತರಿದ್ದರು.