ಸಿಂಧ್/ಇಸ್ಲಾಮಾಬಾದ್: ಒಂದು ವೇಳೆ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಅಥವಾ ಹಿಂಜರಿದರೆ ಅಂತಹ ವ್ಯಕ್ತಿಗಳ ಸಿಮ್ ಕಾರ್ಡ್ ಗಳನ್ನು ನಿರ್ಬಂಧಿಸಲು ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರ ನಿರ್ಧರಿಸುವ ಮೂಲಕ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ
ಎಆರ್ ವೈ ನ್ಯೂಸ್ ಏಜೆನ್ಸಿ ಪ್ರಕಾರ, ಪಂಜಾಬ್ ಪ್ರಾಂತೀಯ ಸರ್ಕಾರದ ಆರೋಗ್ಯ ಸಚಿವೆ ಡಾ.ಯಾಸ್ಮಿನ್ ರಶೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಸಾಮೂಹಿಕ ಲಸಿಕೆ ನೀಡುವಿ ಮೂಲಕ ಪ್ರಾಂತ್ಯದಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ ಎಂದು ಡಾ.ಯಾಸ್ಮಿನ್ ತಿಳಿಸಿದ್ದಾರೆ.
ಪಂಜಾಬ್ ನ ಪ್ರಾಥಮಿಕ ಆರೋಗ್ಯ ಇಲಾಖೆಯ ವರದಿ ಪ್ರಕಾರ, ಕೋವಿಡ್ ಲಸಿಕೆ ನೀಡುವಿಕೆಯ ನಿಗದಿತ ಗುರಿಯನ್ನು ಸಾಧಿಸುವಲ್ಲಿ ಪಾಂತ್ಯ ವಿಫಲವಾಗಿದೆ ಎಂದು ಎಆರ್ ವೈ ನ್ಯೂಸ್ ವಿವರಿಸಿದೆ. ಫೆಬ್ರುವರಿ 2ರಂದು ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಸುಮಾರು 3 ಲಕ್ಷ ಜನರು ತಮ್ಮ ಮೊದಲ ಡೋಸ್ ಪಡೆದ ನಂತರ ಎರಡನೇ ಡೋಸ್ ಪಡೆಯಲು ಆಗಮಿಸಿಲ್ಲ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಎರಡನೇ ಡೋಸ್ ಪಡೆಯುವ ಮುನ್ನ ಅವರಲ್ಲಿ ಕೆಲವರು ಸಾವನ್ನಪ್ಪುವ ಸಾಧ್ಯತೆ ಇದ್ದಿರುವುದಾಗಿ ಎಎನ್ ಐ ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವುದಾಗಿ ತಿಳಿಸಿದೆ.