ಕಾಸರಗೋಡು: ಬ್ಯಾಂಕ್‌ನಿಂದ ಪಡೆದ ಸಾಲದ ಮೊತ್ತವನ್ನು ಮರುಪಾವತಿಸಲಿರುವ ಕೊನೆಯ ದಿನಾಂಕ ರವಿವಾರವಾದ ಹಿನ್ನೆಲೆಯಲ್ಲಿ ಅದರ ಮರುದಿನ ಮೊತ್ತ ಪಾವತಿಸಲು ತೆರಳಿದ ಸಾಲಗಾರನಿಂದ ಹಣ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದರು.
ಇದರಿಂದಾಗಿ ಸಾಲಗಾರನಿಗೆ ಕೇಂದ್ರ ಸಬ್ಸಿಡಿ ನಷ್ಟವಾಗಿದೆ ಎಂಬ ದೂರಿನಂತೆ ಸಾಲಗಾರನಿಗೆ ಅನುಕೂಲಕರವಾಗಿ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗ ತೀರ್ಪು ನೀಡಿದೆ.
ಒಂದು ದಿನ ವಿಳಂಬವಾದ ಹಿನ್ನೆಲೆಯಲ್ಲಿ ಸಾಲದ ಮೊತ್ತ ಪಡೆಯಲಿಲ್ಲವೆಂಬ ಆರೋಪದಂತೆ ಬ್ಯಾಂಕ್ 10 ಸಾವಿರ ರೂ. ನಷ್ಟ ಪರಿಹಾರ ಹಾಗೂ 5000 ರೂ. ನ್ಯಾಯಾಲಯದ ಖರ್ಚು ನೀಡಬೇಕು ಎಂಬುದಾಗಿ ತೀರ್ಪು ನೀಡಿದೆ. ಪೆರುಂಬಳ ಆರ್ಲೋಟ್ಟಿ ಹೌಸ್‌ನ ಪಿ. ಚಾತುಕುಟ್ಟಿ ನಾಯರ್ ನೀಡಿದ ದೂರಿನಂತೆ ಕೇರಳ ಗ್ರಾಮೀಣ ಬ್ಯಾಂಕ್ ವಿರುದ್ಧ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗದ ಅಧ್ಯಕ್ಷ ಕೆ. ಕೃಷ್ಣನ್, ಸದಸ್ಯರಾದ ಕೆ.ಜಿ. ಬೀನ ಈ ತೀರ್ಪು ನೀಡಿದ್ದಾರೆ
ಚಾತುಕುಟ್ಟಿ ನಾಯರ್ ಕೃಷಿ ಅಗತ್ಯಕ್ಕಾಗಿ 2016 ಸೆ. 3ರಂದು ಬ್ಯಾಂಕ್‌ನಿಂದ 1 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತೀ ವರ್ಷ ನವೀಕರಿಸುವ ಈ ಸಾಲಕ್ಕೆ ಕೇಂದ್ರ ಸರಕಾರದ ಸಬ್ಸಿಡಿ ಲಭಿಸುತ್ತದೆ. ಪಡೆದ ಸಾಲದ ಕೊನೆಯ ಕಂತು ಪಾವತಿಸಬೇಕಾದ ಕೊನೆಯ ದಿನ 2019ರ ಸೆ. 1 ಆಗಿತ್ತು. ಆದರೆ ಈ ದಿನ ರವಿವಾರವಾದುದರಿಂದ 2ರಂದು ಸೋಮವಾರ ಬ್ಯಾಂಕ್‌ಗೆ ತೆರಳಿ ಹಣ ಪಾವತಿಸಲು ಹೋದಾಗ ಅಧಿಕಾರಿಗಳು ಹಣವನ್ನು ಪಡೆದಿರಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿತ್ತು. ಇದರಿಂದ ಈ ಮೊತ್ತವನ್ನು ಬ್ಯಾಂಕ್‌ನ ಸೇವಿಂಗ್ ಅಕೌಂಟ್‌ನಲ್ಲಿ ಠೇವಣಿರಿಸಿದ್ದರು.