Advertisement

ನಿರಾಶ್ರಿತರ ಕೇಂದ್ರಗಳಿಗೇ ಇಲ್ಲ ಆಶ್ರಯ!

11:49 AM Apr 21, 2019 | Lakshmi GovindaRaju |

ಬೆಂಗಳೂರು: ನಗರದ ರಸ್ತೆ ಬದಿಗಳಲ್ಲಿ ಜೀವನ ಸಾಗಿಸುತ್ತಿದ್ದ ಹಲವು ನಿರಾಶ್ರಿತರಿಗೆ ಸ್ವಯಂ ಸೇವಾ ಸಂಸ್ಥೆಗಳು ನಿರಾಶ್ರಿತರ ಕೇಂದ್ರ ತೆರೆಯುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಟ್ಟಿವೆ. ಆದರೆ, ಈ ನಿರಾಶ್ರಿತರ ಕೇಂದ್ರಗಳಿಗೆ ಒಂದುವರೆ ವರ್ಷದಿಂದ ಸರ್ಕಾರ ಸಹಾಯಧನ ನೀಡಿಲ್ಲ. ಒಂದು ಲೆಕ್ಕದಲ್ಲಿ ನಿರಾಶ್ರಿತರ ಕೇಂದ್ರಗಳಿಗೇ ಆಶ್ರಯ ಇಲ್ಲದಂತಾಗಿದೆ.

Advertisement

ಬೆಂಗಳೂರಿನಲ್ಲಿ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ನಿರಾಶ್ರಿತರ ಕೇಂದ್ರಗಳನ್ನು ನಡೆಸುತ್ತಿವೆ. ಈ ಕೇಂದ್ರಗಳಿಗೆ ಬಿಬಿಎಂಪಿಯಿಂದ ಲಕ್ಷಾಂತರ ರೂ. ಬಾಕಿ ಬರಬೇಕಿದೆ. ಗೂಡ್‌ಶೆಡ್‌ ರಸ್ತೆ, ರಾಜಾಜಿನಗರ, ಬೊಮ್ಮನಹಳ್ಳಿ ಮತ್ತು ಹಲಸೂರಿನಲ್ಲಿ ನಿರಾಶ್ರಿತರ ಕೇಂದ್ರಗಳಿದ್ದು, ಕಾರ್ಡ್ಸ್‌, ಸುರಭಿ ಮತ್ತು ಸ್ಪರ್ಶ ಸ್ವಯಂ ಸೇವಾ ಸಂಸ್ಥೆಗಳು ಈ ಕೇಂದ್ರಗಳನ್ನು ನಡೆಸುತ್ತಿವೆ.

“ಸರಿಯಾದ ಸಮಯದಲ್ಲಿ ಹಣ ಸಂದಾಯವಾಗದೆ ಇರುವುದರಿಂದಲೇ ಸ್ವಯಂ ಸೇವಾ ಕೇಂದ್ರಗಳು ನಡೆಸುತ್ತಿದ್ದ ಹಲವು ನಿರಾಶ್ರಿತ ಕೇಂದ್ರಗಳನ್ನು ನಿಲ್ಲಿಸಲಾಗಿದೆ. ಮುನ್ನಡೆಸಿಕೊಂಡು ಹೋಗುವ ಇಚ್ಛಾಶಕ್ತಿ ಇರುವ ಮತ್ತು ಆರ್ಥಿಕವಾಗಿ ಸದೃಢವಾಗಿರುವವರು ಮಾತ್ರ ಕೇಂದ್ರಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಸುರಭಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪಾಟೀಲ್‌.

ಪ್ರಸ್ತಾವನೆ ಸಲ್ಲಿಸದ ಬಿಬಿಎಂಪಿ: ನಿರಾಶ್ರಿತರ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಸಹಾಧನ ನೀಡುತ್ತದೆ. ಆದರೆ ಈ ಹಣವನ್ನು ಅಲ್ಲಿಂದ ನೇರವಾಗಿ ಪಡೆಯಲು ಸಾಧ್ಯವಿಲ್ಲ. ನಗರದಲ್ಲಿರುವ ನಿರಾಶ್ರಿತರ ಕೇಂದ್ರಗಳಿಗೆ ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ಗೆ ಪ್ರಸ್ತಾವನೆ ಸಲ್ಲಿಸಬೇಕು. ಬಿಬಿಎಂಪಿ ಸಕಾಲದಲ್ಲಿ ಪ್ರಸ್ತಾವನೆ ಸಲ್ಲಿಸದೆ ಇರುವುದರಿಂದಲೇ ಸಮಸ್ಯೆ ಉದ್ಬವಿಸಿದೆ ಎಂದು ಸ್ವಯಂ ಸೇವಾ ಸಂಸ್ಥೆಗಳು ಆರೋಪ ಮಾಡಿವೆ.

ಸಮೀಕ್ಷೆ ವರದಿಯಲ್ಲಿ ಏನಿದೆ?: ನಗರದಲ್ಲಿರುವ ನಿರಾಶ್ರಿತರ ಪತ್ತೆಗಾಗಿ ಮತ್ತು ಅವರಿಗೆ ಸೂಕ್ತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ 250 ಸ್ವಯಂ ಸೇವಾ ಸಂಸ್ಥೆಗಳು “ಇಂಪ್ಯಾಕ್ಟ್ ಇಂಡಿಯಾ’ ತಂಡ ರಚಿಸಿಕೊಂಡು ಸಮೀಕ್ಷೆ ನಡೆಸಿದ್ದವು. ಈ ವೇಳೆ ನಗರದಲ್ಲಿ 6 ಸಾವಿರ ನಿರಾಶ್ರಿತರು ಇರುವ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ದಾಖಲೆ ಸಹಿತ ವರದಿ ಸಲ್ಲಿಸಲಾಗಿತ್ತು.

Advertisement

10 ತಂಡಗಳು, 9 ವಲಯಗಳಲ್ಲಿ, ಎರಡು ಹಂತದಲ್ಲಿ ಸಮೀಕ್ಷೆ ನಡೆಸಿವೆ. ರಾತ್ರಿ 10 ರಿಂದ ಬೆಳಗ್ಗೆ 3 ಗಂಟೆವರೆಗೆ ಸಿಟಿ ಮಾರ್ಕೆಟ್‌, ರೈಲು ನಿಲ್ದಾಣ ಮತ್ತು ನಗರದ ರಸ್ತೆ ಬದಿಗಳಲ್ಲಿ ವಾಸವಾಗಿದ್ದ ನಿರಾಶ್ರಿತರ ಬಗ್ಗೆ ಈ ತಂಡಗಳ ಸದಸ್ಯರು ಸಮೀಕ್ಷೆ ನಡೆಸಿದ್ದರು.

ಹುಸಿಯಾದ ಬಿಬಿಎಂಪಿ ಭರವಸೆ: ನಿರಾಶ್ರಿತರಿಗೆ ಕನಿಷ್ಠ 10 ಸಹಾಯ ಕೇಂದ್ರಗಳನ್ನದರೂ ಸ್ಥಾಪಿಸಬೇಕು ಎಂದು ಸ್ವಯಂ ಸೇವಾ ಸಂಸ್ಥೆಗಳು ಮನವಿ ಮಾಡಿದ್ದವು. ಇದಕ್ಕೆ ಸ್ಪಂದಿಸಿದ್ದ ಬಿಬಿಎಂಪಿ, ಈ 2019ರ ಮಾರ್ಚ್‌ 30ರ ಒಳಗೆ 10 ನಿರಾಶ್ರಿತರ ಕೇಂದ್ರಗಳನ್ನು ತೆರೆಯವ ಭರವಸೆ ನೀಡಿತ್ತು. ಆದರೆ, ಇದುವರೆಗೆ ಒಂದೂ ಕೇಂದ್ರ ತೆರೆದಿಲ್ಲ.

ಸಮೀಕ್ಷೆ ವೇಳೆ ಸಿಕ್ಕ ಒಂಟಿ ಮಹಿಳೆಯರು ಮತ್ತು ವೃದ್ಧೆಯರಿಗೆ ಶಾಂತಿನಗರದ ನೈಟಿಂಗೇಲ್‌ ಸ್ವಯಂ ಸೇವಾ ಸಂಸ್ಥೆ ಆಶ್ರಯ ನೀಡಿದೆ. ನಿರಾಶ್ರಿತರ ಕೇಂದ್ರಗಳನ್ನು ತೆರೆಯವುದಕ್ಕೆ ಮೆಜೆಸ್ಟಿಕ್‌, ಕಲಾಸಿಪಾಳ್ಯ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಯಲಹಂಕ ಮತ್ತು ಕ್ವೀನ್ಸ್‌ ರಸ್ತೆಯಲ್ಲಿನ ಬಿಬಿಎಂಪಿಯ ಖಾಲಿ ಕಟ್ಟಡಗಳನ್ನು ಕೂಡ ಸ್ವಯಂ ಸೇವಾ ಸಂಸ್ಥೆಗಳೇ ಗುರುತಿಸಿ ಬಿಬಿಎಂಪಿಗೆ ಪಟ್ಟಿ ನೀಡಿವೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಸಮೀಕ್ಷೆ ವೇಳೆ 400ರಿಂದ 600 ಮಂದಿ, 16ರಿಂದ 18 ವರ್ಷದ ಒಳಗಿನ ನಿರಾಶ್ರಿತರು ಪತ್ತೆಯಾಗಿದ್ದಾರೆ. ವರೆಲ್ಲಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇವರ ಭವಿಷ್ಯ, ವಿದ್ಯಾಭ್ಯಾಸದ ದೃಷ್ಟಿಯಿಂದ ನಿರಾಶ್ರಿತರ ಕೇಂದ್ರ ಅತ್ಯಗತ್ಯ.
-ಉದಯ್‌ ಕುಮಾರ್‌, ಇಂಪ್ಯಾಕ್ಟ್ ಇಂಡಿಯಾ ನಿರ್ದೇಶಕ

ನಿರಾಶ್ರಿತ ಕೇಂದ್ರ ತೆರೆಯಲು ಬಿಬಿಎಂಪಿ ಒಪನ್‌ ಟೆಂಡರ್‌ ಕರೆಯುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಅನುಭವ ಇಲ್ಲದವರು ಭಾಗವಹಿಸುತ್ತಾರೆ. ಅದಕ್ಕೆ ಬದಲಾಗಿ ಅನುಭವಿ ಸ್ವಯಂ ಸೇವಾ ಸಂಸ್ಥೆಗಳನ್ನು ಪಟ್ಟಿ ಮಾಡಿ ಟೆಂಡರ್‌ ಕರೆಯಬೇಕು.
-ಸಂಪತ್‌, ಇಂಪ್ಯಾಕ್ಟ್ ಇಂಡಿಯಾ ಸಂಯೋಜಕ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next