Advertisement

ಸಾಮಾಜಿಕ ವಲಯಕ್ಕೆ ಸುಧಾರಣಾ ಕ್ರಮಗಳು

09:42 PM Feb 01, 2020 | Team Udayavani |

ಕೇಂದ್ರ ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ನೀಡುವ ಆದ್ಯತೆಯು ಬಜೆಟ್‌ನ ಸಮಗ್ರತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ವಲಯದ ಬೆಳವಣಿಗೆಯ ಜಿಡಿಪಿ ವೃದ್ಧಿಗೂ ಕಾರಣವಾಗಲಿದೆ. ಉದ್ಯೋಗ ಸೃಷ್ಟಿ, ಹೊಸ ಎಂಜಿನಿಯರುಗಳು, ಮಾರ್ಕೆಟಿಂಗ್‌ ಹೆಡ್‌ಗಳ ಸೃಷ್ಟಿ ಸೇರಿದಂತೆ ಕೌಶಲ್ಯಸಹಿತ ಸಂಪನ್ಮೂಲದ ಪ್ರಮಾಣ ಹೆಚ್ಚಾಗಲಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಹಾಗೂ ಅಗತ್ಯವೂ ಹೌದು.

Advertisement

ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಅಪೌಷ್ಟಿಕತೆ ನಿವಾರಣೆ, ಎಸ್‌ಸಿ-ಎಸ್‌ಟಿ, ಆದಿವಾಸಿಗಳ ಕಲ್ಯಾಣ, ಸೇರಿದಂತೆ ಸಾಮಾಜಿಕ ವಲಯದ ಸುಧಾರಣಾ ಕ್ರಮಗಳು ಮುಂದಿನ ಎರಡು ವರ್ಷಗಳಲ್ಲಿ ಫ‌ಲಿತಾಂಶ ನೀಡಲಿವೆ. ಈಗಿನ ಸಂದಿಗ್ಧ ಸ್ಥಿತಿಯಲ್ಲಿ ಬಜೆಟ್‌ನಲ್ಲಿ ಕೈಗೊಂಡಿರುವ ಈ ವಲಯದ ಸುಧಾರಣಾ ಕ್ರಮಗಳು ಸ್ವಲ್ಪ ಮಟ್ಟಿಗೆ ಆಶಾದಾಯಕ ಎಂದೇ ಹೇಳಬಹುದು.

ಶಿಕ್ಷಣಕ್ಕೆ 99,300 ಕೋಟಿ ರೂ., ಆರೋಗ್ಯಕ್ಕೆ 69,000 ಕೋಟಿ ರೂ., ಎಸ್‌ಸಿ-ಎಸ್‌ಟಿ ಕಲ್ಯಾಣಕ್ಕೆ 1.33 ಲಕ್ಷ ಕೋಟಿ ರೂ., ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ 35,600 ಕೋಟಿ ರೂ., ಮಹಿಳಾ ಸಬಲೀಕರಣಕ್ಕೆ 28,600 ಕೋಟಿ ರೂ. ಮೀಸಲಿಟ್ಟಿರುವುದು ಸಾಮಾಜಿಕ ವಲಯದ ವೃದ್ಧಿಯ ಸಂಕೇತ. ಇದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪದವಿ ಯೋಜನೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಕರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಭಿವೃದ್ಧಿ ಬ್ರಿಡ್ಜ್ ಕೋರ್ಸ್‌ ಒದಗಿಸುವುದು ಉತ್ತಮ ನಿರ್ಧಾರವಾಗಿದೆ. ಇದರಿಂದ ನಾನಾ ಕ್ಷೇತ್ರಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ದೊರಕುತ್ತದೆ. ಆದರೆ, ಈ ಎಲ್ಲ ಯೋಜನೆಗಳ ಲಾಭ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಪಡೆಯಬೇಕು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಗಳ ಅದರಲ್ಲೂ ಕರ್ನಾಟಕ ರಾಜ್ಯ ಇಂದು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರೋಪಾಯಗಳನ್ನು ನೀಡಲಾಗಿದೆ. ಅದರ ಉಪಯೋಗಕ್ಕೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಮುಂದಾಗಬೇಕು. ಕ್ವಾಂಟಮ್‌ ಎಂಜಿನಿಯರಿಂಗ್‌ ಸೇರಿ ಐಟಿ-ಬಿಟಿ ವಲಯದ ಹೊಸ ಆವಿಷ್ಕಾರಗಳು ಬೆಂಗಳೂರಿಗೆ ಹೆಚ್ಚು ಲಾಭ ತರಬಲ್ಲದು. ಲಾಜೆಸ್ಟಿಕ್‌ ಸೇರಿ ಇತರೆ ವಲಯಗಳಿಗೆ ಒತ್ತು ನೀಡಿರುವುದರಿಂದ ಉದ್ಯಮಿಗಳಿಗೆ ಅನುಕೂಲವಾಗಿದೆ.

Advertisement

ಇದರಿಂದ ಉದ್ಯೋಗವೂ ಸೃಷ್ಟಿಯಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಅವಕಾಶಗಳು ಹೆಚ್ಚಾಗಿ ಲಭಿಸುತ್ತವೆ. ಈ ಮೂಲಕ ಸಾಮಾಜಿಕ ವಲಯದ ವೃದ್ಧಿಯಾಗುತ್ತದೆ. ಒಟ್ಟಾರೆ ಹೇಳಬಹುದಾದರೆ ಮುಂದಿನ ಐದು ವರ್ಷ ಆರ್ಥಿಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ಒತ್ತು ನೀಡಲಾಗಿದೆ.

* ಆರ್‌.ಜಿ.ಮುರಳೀಧರ್‌ವಿಶ್ಲೇಷಕ, ಸಾಮಾಜಿಕ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next