Advertisement

ಸಂವಿಧಾನ ಪೀಠಿಕೆಯಲ್ಲೇ ಸಾಮಾಜಿಕ ನ್ಯಾಯದ ಉಲ್ಲೇಖ

05:04 PM Feb 24, 2022 | Shwetha M |

ವಿಜಯಪುರ: ಭಾರತದ ಸಂವಿಧಾನದ ಪೀಠಿಕೆಯಲ್ಲಿಯೇ ಸಾಮಾಜಿಕ ನ್ಯಾಯದ ಬಗ್ಗೆ ಉಲ್ಲೇಖವಾಗಿದೆ. ಭಾರತದ ಸಂವಿಧಾನವು ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಅದರ ರಾಜನೀತಿ ನಿರ್ದೇಶಕ ತತ್ವಗಳ ಗುರಿಯೇ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಹೇಳಿದರು.

Advertisement

ನಗರದ ಸ್ಟೇಷನ್‌ ರಸ್ತೆಯ ಸರ್ಕಾರಿ ಮೆಟ್ರಿಕ ಪೂರ್ವ-ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸಮಾನತೆ ಪ್ರತಿಬಿಂಬಿಸುವ ಯಾವುದೇ ಕೃತ್ಯವನ್ನು ನಮ್ಮ ಸಂವಿಧಾನ ಸಹಿಸುವುದಿಲ್ಲ. ಭಾರತದ ಸರ್ವೋತ್ಛ ನ್ಯಾಯಾಲಯವು ಸಹಿತ ಸಾಮಾಜಿಕ ನ್ಯಾಯ ತತ್ವವನ್ನು ಎತ್ತಿ ಹಿಡಿದಿವೆ ಎಂದು ವಿವರಿಸಿದರು.

ಸರ್ಕಾರ ಕೋಟಿ ಕೋಟಿ ರೂ. ವ್ಯಯಿಸಿ ಹಾಸ್ಟೆಲ್‌ ಕಟ್ಟಿ ವಿದ್ಯಾಭ್ಯಾಸಕ್ಕಾಗಿ ಗ್ರಂಥಾಲಯ ಶಾಲಾ ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಇಲ್ಲಿ ಓದುವ ಮಕ್ಕಳು ಇದರ ಸದ್ಬಳಕೆ ಮಾಡಿಕೊಂಡು, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ| ಐ.ಜಿ. ಮ್ಯಾಗೇರಿ, ಸಾಮಾಜಿಕ ನ್ಯಾಯದ ಹಿನ್ನೆಲೆ, ತಳಹದಿ, ಸಾಮಾಜಿಕ ನ್ಯಾಯ ಎತ್ತು ಹಿಡಿಯುವಲ್ಲಿ ನಾಗರಿಕರ ಪಾತ್ರದ ಬಗ್ಗೆ ವಿವರವಾಗಿ ತಿಳಿಸಿ, ಸಂವಿಧಾನ ನೀಡಿರುವ ಸಾಮಾಜಿಕ ನ್ಯಾಯದ ಕೊಡುಗೆಗಳ ಬಗ್ಗೆ ವಿವರಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿದರು. ವಸತಿ ನಿಲಯ ಪಾಲಕರು ಹಾಗೂ ವಿದ್ಯಾರ್ಥಿನಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next