ಬೆಂಗಳೂರು: ಕರ್ನಾಟಕದಲ್ಲಿ ಲಿಂಗಾಯತರು, ಒಕ್ಕಲಿಗರು ಹಾಗೂ ದಲಿತ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದು, ಅವರ ವಿಶ್ವಾಸ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಬೇಕು. ಇದು ಎಐಸಿಸಿ ವೀಕ್ಷಕರು ಹೈಕಮಾಂಡ್‌ಗೆ ನೀಡಿರುವ ವರದಿಯಲ್ಲಿರುವ ಪ್ರಮುಖ ಅಂಶ.
ಒಕ್ಕಲಿಗರು, ಲಿಂಗಾಯತರು ಹಾಗೂ ದಲಿತ ಸಮು ದಾಯದ ನಾಯಕರು ವೈಯಕ್ತಿಕ ವರ್ಚಸ್ಸಿನಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದಾರೆ. ಆದರೆ ಸಮುದಾಯದ ಬೆಂಬಲ ಕಾಂಗ್ರೆಸ್‌ಗೆ ಬೇರೆ ಕ್ಷೇತ್ರಗಳಲ್ಲಿ ದೊರೆಯುತ್ತಿಲ್ಲ. ಬಿಜೆಪಿ ಈ ಮೂರೂ ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಉಪ ಚುನಾವಣೆಯಲ್ಲಿಯೂ ಅದು ಸಾಬೀತಾಗಿದೆ. ಮೂರೂ ಸಮುದಾಯವನ್ನು ಕಾಂಗ್ರೆಸ್ ತೆಕ್ಕೆಗೆ ತರುವ ಕೆಲಸ ಆಗಬೇಕು ಎಂದು ವರದಿ ಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸ್ಥಾನ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ರಾಜ್ಯದ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ಬಂದಿದ್ದ ಎಐಸಿಸಿ ವೀಕ್ಷಕರಾದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ ಅವರು ಹೈಕಮಾಂಡ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶವನ್ನು ಪ್ರಮುಖವಾಗಿ ಪ್ರಸ್ತಾವಿಸಿದ್ದಾರೆ.
ಮುನಿಯಪ್ಪ, ಹರಿಪ್ರಸಾದ್, ವೀರಪ್ಪ ಮೊಲಿ ಅವರು ಎಐಸಿಸಿ ವೀಕ್ಷಕರ ಬಳಿ ಅಭಿ ಪ್ರಾಯ ಹೇಳು ವಾಗ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವುದು ಅಗತ್ಯ. ಸ್ಥಾನಮಾನದ ತೀರ್ಮಾನ ಏಕ ವ್ಯಕ್ತಿ ಕೇಂದ್ರೀಕೃತ ವಾಗಬಾರದು. ಮೂಲ ಕಾಂಗ್ರೆಸಿಗರು ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದಾಗಿ ಹೇಳಿದ್ದಾಗಿ ತಿಳಿದುಬಂದಿದೆ.
ಒಗ್ಗೂಡಿಸಲು ಸೂತ್ರ
ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್ ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಮುಂದಾಗ ಲಿದೆ. ಒಕ್ಕಲಿಗ, ಲಿಂಗಾಯತ, ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗ ಗಳನ್ನು ಒಗ್ಗೂಡಿಸಿ ಸ್ಥಾನಮಾನ ಕಲ್ಪಿಸಲಿದೆ. ಎಐಸಿಸಿ, ಕೆಪಿಸಿಸಿ, ಉಭಯ ಸದನಗಳ ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಹಂಚಿಕೆಯಾಗಲಿದೆ ಎಂದು ತಿಳಿದುಬಂದಿದೆ.
- ಎಸ್. ಲಕ್ಷ್ಮೀನಾರಾಯಣ