Advertisement

ಪಯಸ್ವಿನಿ ನದಿ ಪ್ರವಾಹ ಮಟ್ಟ ಇಳಿಕೆ 

10:49 AM Aug 18, 2018 | Team Udayavani |

ಸುಳ್ಯ : ಪಯಸ್ವಿನಿ ನದಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಶುಕ್ರವಾರ ಇಳಿಕೆ ಕಂಡಿದೆ. ಆದರೆ ಕೊಡಗು-ದ.ಕ. ಗಡಿಭಾಗದ ಅರಂತೋಡು, ಸಂಪಾಜೆ ಪರಿಸರದಲ್ಲಿ ವರುಣನ ಅಬ್ಬರ ತೀವ್ರ ಸ್ವರೂಪ ಪಡೆದಿದ್ದು, ಅನೇಕ ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸಿವೆ.

Advertisement

ಅರಂತೋಡಿನ ದಿನೇಶ್‌ ಕಿರ್ಲಾಯ ಅವರ ನಿರ್ಮಾಣ ಹಂತದಲ್ಲಿನ ಮನೆಗೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಮನೆ ಸಂಪೂರ್ಣ ಧರಾಶಾ ಯಿಯಾಗಿದೆ. 10 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಮಾಹಿತಿ ಇದೆ. ಇದೇ ಪರಿಸರದಲ್ಲಿ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ರಾತ್ರಿ ಧಾರಕಾರ ಮಳೆಯ ಪರಿಣಾಮ ಕಡಬ ಸಂಪರ್ಕದ ಅಲೆಕ್ಕಾಡಿ-ಎಡಮಂಗಲ ರಸ್ತೆಯ ಕರಿಂಬಿಲ ಬಳಿ ರಸ್ತೆ ಕುಸಿತದ ಭೀತಿ ಉಂಟಾಗಿದೆ. ಅಮರಮುಟ್ನೂರು ಗ್ರಾಮದ ಕೊರತ್ಯಡ್ಕ ನಾರ್ಣಪ್ಪ ಗೌಡ ಅವರ ಮನೆ ಸಮೀಪದ ಧರೆ ಕುಸಿದಿದೆ. ಕಳಂಜ ಗ್ರಾಮದ ಕೊಲ್ಲರ್ನೊಜಿ ಕೋಟೆ, ಕೆದಿಲ ರಸ್ತೆಯ ಶೇಡಿಕಜೆ, ಕೋಟೆ ಮಧ್ಯೆ ರಸ್ತೆ ಕುಸಿತದ ಭೀತಿ ಉಂಟಾಗಿದೆ. ದೊಡ್ಡತೋಟ-ಮರ್ಕಂಜ ರಸ್ತೆಯ ನಳಿಯಾರಿನಲ್ಲಿ ಚರಂಡಿ ಮುಚ್ಚಿ ಹೋಗಿ ರಸ್ತೆ ಕಡಿತಗೊಳ್ಳುವ ಅಪಾಯವಿದೆ.

ಗುಡ್ಡದಿಂದ ಜಾರಿದ ಮನೆಗಳು!
ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಜೋಡುಪಾಲದಲ್ಲಿ ಶುಕ್ರವಾರ ಗುಡ್ಡ ಭಾಗದಲ್ಲಿನ ಮೂರು ಮನೆಗಳು ಕೆಳಭಾಗಕ್ಕೆ ಜಾರಿವೆ. ಬಸಪ್ಪ ಎಂಬ ವ್ಯಕ್ತಿ ಮಣ್ಣಿನಡಿಯಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ. 90ಕ್ಕೂ ಅಧಿಕ ಮಂದಿ ಮೊಣ್ಣಂಗೇರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಶಾಲೆ ಕುಸಿಯುವ ಅಪಾಯದಲ್ಲಿರುವ ಕಾರಣ, ಸುರಕ್ಷತೆಯ ಭೀತಿ ಮೂಡಿದೆ.

ಜೋಡುಪಾಲ ಗುಡ್ಡೆ ಭಾಗದಲ್ಲಿ ಇರುವ ಮನೆಗಳಿಂದ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಜೋಡುಪಾಲದಿಂದ ಸಂತ್ರಸ್ತರನ್ನು ದ.ಕ. ಗಡಿಭಾಗದ ಕಲ್ಲುಗುಂಡಿಗೆ ಕರೆ ತರಲೆಂದು ತೆರಳಿದ್ದ ಆಮ್ನಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಲಕ ಅದೃಷ್ಟವಶಾತ್‌ ಪಾರಾಗಿದ್ದಾರೆ. 

Advertisement

ಸಂಪಾಜೆ-ಮಡಿಕೇರಿ ರಾ.ಹೆ. ಕಡಿತಗೊಂಡು ಜೋಡುಪಾಲ, ಕಾಟಕೇರಿ ಬಳಿ ಗುಡ್ಡ ಕುಸಿದು ಜನರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಜೋಡುಪಾಲದಿಂದ ಮಡಿಕೇರಿ-ಸುಳ್ಯ ಭಾಗಕ್ಕೆ ವಾಹನ ಓಡಾಟ ಇಲ್ಲದೆ ತೆರಳಲು ಸಾಧ್ಯವಾಗುತ್ತಿಲ್ಲ. ಮಧ್ಯ ಭಾಗದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳು ದಿನವಿಡಿ ತತ್ತರಿಸಿದೆ. ರಕ್ಷಣಾ ಕಾರ್ಯ ಮುಂದುವರಿದಿದಿದೆ.

5ನೇ ದಿನವೂ ಬಂದ್‌
ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ಶುಕ್ರವಾರವು ಬಂದ್‌ ಆಗಿದೆ. ಸೋಮವಾರ ಮದೆನಾಡು ಬಳಿ ಗುಡ್ಡ ಕುಸಿತದ ಕಾರಣ ಮಣ್ಣು ತೆರವು ಕಾರ್ಯಕ್ಕಾಗಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿರಂತರ ಮಳೆಯಿಂದ ಇದೇ ರಸ್ತೆಯ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದು ಮತ್ತಷ್ಟು ಅಪಾಯ ಸಂಭವಿಸಿತ್ತು. ಇದರಿಂದ ಸಂಪಾಜೆ ಬಳಿ ಗೇಟು ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ಶುಕ್ರವಾರ ಕೂಡ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದ ಕಾರಣ ಸಂಚಾರ ಪುನಾರರಂಭಗೊಂಡಿಲ್ಲ. ಸುಳ್ಯ ಭಾಗದಿಂದ ಕೊಡಗು ಹಾಗೂ ಕೊಡಗಿನಿಂದ ಸುಳ್ಯ, ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್‌ ಆದ ಕಾರಣ, ಎರಡು ಜಿಲ್ಲೆಗಳ ನಡುವೆ ದ್ವೀಪದಂತ ಸ್ಥಿತಿ ಉಂಟಾಗಿದೆ.

ಮೃತನ ಸಹೋದರರ ಪರದಾಟ
ಕಾಟಕೇರಿಯಲ್ಲಿ ಭೂಕುಸಿತದಿಂದ ಗುರುವಾರ ಮೂವರು ಮೃತಪಟ್ಟಿದ್ದರು. ಮೃತರ ಪೈಕಿ ಪವನ್‌ ಅವರ ಇಬ್ಬರು ಸಹೋದರರು ಮಂಗಳೂರಿನಿಂದ ಸ್ಥಳಕ್ಕೆ ತೆರಳುವ ಸಲುವಾಗಿ ಸಂಪಾಜೆ ರಸ್ತೆಯಲ್ಲಿ ಬಂದಿದ್ದರು. ಆದರೆ ವಾಹನ ಸಂಪರ್ಕ ಸಾಧ್ಯವಾಗದೇ ಅವರು ತಾಸುಗಟ್ಟಲೇ ಸಂಪಾಜೆಯಲ್ಲಿ ಬಾಕಿಯಾಗಿದ್ದರು. ಕೇರ್ಪಡ ದೇವಸ್ಥಾನದ ಬಳಿ ಗುಡ್ಡ ಕುಸಿದಿರುವುದು. 

Advertisement

Udayavani is now on Telegram. Click here to join our channel and stay updated with the latest news.

Next