Advertisement

ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಣೆಯಲ್ಲಿ ಕಡಿತ: ಆಕ್ರೋಶ

01:34 PM Aug 01, 2020 | Suhan S |

ಮುಂಡಗೋಡ: ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ತಲಾ ಐದು ಕೆಜಿ ಅಕ್ಕಿ ನೀಡುತ್ತಿರುವ ಕುರಿತು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಶ್ರೀಧರ ಮುಂದಲಮನೆ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಹತ್ತು ಕೆಜಿ ಅಕ್ಕಿ ವಿತರಿಸುವಂತೆ ಎಚ್ಚರಿಕೆ ನೀಡಿದ ಘಟನೆ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

Advertisement

ತಾಲೂಕಿನ ಸಾಲಗಾಂವ ಗ್ರಾಪಂ ವ್ಯಾಪ್ತಿಯ ಸನವಳ್ಳಿ ಪಡಿತರ ನ್ಯಾಯ ಬೆಲೆ ಅಂಗಡಿಯಿದ್ದು, ಸನವಳ್ಳಿ ಹಾಗೂ ಪ್ಲಾಟ್‌, ಬಪ್ಪನಕಟ್ಟಿ ಗ್ರಾಮಗಳ ನೂರಾರು ಬಿಪಿಎಲ್‌ ಪಡಿತರ ಚೀಟಿದಾರರು ಈ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿ ಪಡೆದುಕೊಳ್ಳುತ್ತಾರೆ. ಜುಲೈ ತಿಂಗಳ ಪಡಿತರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಿಸದ ಕಾರಣ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಯವನೊಂದಿಗೆ ಮಾತಿನ ಚಕಮಕಿ ನಡೆಸಿ ತಹಶೀಲ್ದಾರ್‌ಗೆ ದೂರಿದ್ದಾರೆ.

ಕೋವಿಡ್‌ ವೈರಸ್‌ ಹರಡುತ್ತಿರುವುದರಿಂದ ಬಿಪಿಎಲ್‌ ಕಾರ್ಡ್‌ನ ಪ್ರತಿಯೊಬ್ಬ ಸದಸ್ಯರಿಗೆ ರಾಜ್ಯ ಸರಕಾರ ಐದು ಕೆಜಿ ಹಾಗೂ ಕೆಂದ್ರ ಸರಕಾರ ಐದು ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಒಂದು ಪಡಿತರ ಚೀಟಿಯಲ್ಲಿ ನಾಲ್ಕು ಜನರಿದ್ದರೆ ನಾಲ್ವತ್ತು ಕೆಜಿ ಅಕ್ಕಿ ವಿತರಿಸಬೇಕು. ಆದರೆ ಸನವಳ್ಳಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಒಬ್ಬ ಸದಸ್ಯನಿಗೆ ಐದು ಕೆಜಿಯಂತೆ ಅಕ್ಕಿ ವಿತರಿಸಲಾಗುತ್ತಿತ್ತು. ಇದನ್ನು ಕಂಡ ಪಡಿತರ ಚೀಟಿದಾರರು ನಮಗೆ ಹತ್ತು ಕೆಜಿಯಂತೆ ಅಕ್ಕಿ ವಿತರಿಸಬೇಕು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್‌ ಶ್ರೀಧರ ಮುಂದಲಮನೆ ಸನವಳ್ಳಿ ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿ ಸಂಗ್ರಹವಿರುವುದನ್ನು ಪರಿಶೀಲಿಸಿ ಅಂಗಡಿ ಮಾಲೀಕನಿಗೆ ಖಡಕ್‌ ಎಚ್ಚರಿಕೆ ನೀಡಿದರು. ಒಬ್ಬ ಸದಸ್ಯನಿಗೆ ಹತ್ತು ಕೆಜಿಯಂತೆ ಅಕ್ಕಿ ವಿತರಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಂತರ ಗ್ರಾಮಸ್ಥರೊಂದಿಗೆ ಮಾತನಾಡಿದ ತಹಶೀಲ್ದಾರ್‌, ಈ ತಿಂಗಳು ನ್ಯಾಯ ಬೆಲೆ ಅಂಗಡಿಗೆ ಅಕ್ಕಿ ಸರಬರಾಜು ಆಗುವುದು ಸ್ವಲ್ಪ ತಡವಾಗಿದೆ. ಒಂದೇ ಸಮಯಕ್ಕೆ ಅಕ್ಕಿ ಸಂಗ್ರಹವಾಗಿಲ್ಲ. ಅದಕ್ಕಾಗಿ ಅಂಗಡಿಯವನು ಸಂಗ್ರಹ ಕಡಿಮೆಯಿದೆ ಎಂದು ಐದು ಕೆಜಿ ಅಕ್ಕಿ ವಿತರಿಸುತ್ತಿದ್ದು, ಹತ್ತು ಕೆಜಿ ಅಕ್ಕಿ ವಿತರಿಸಲು ಸೂಚಿಸಿದ್ದೇನೆ. ಎಲ್ಲರೂ ಹತ್ತು ಕೆಜಿಯಂತೆ ಅಕ್ಕಿ ಪಡೆದುಕೊಳ್ಳುವಂತೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next